ಅಭಿವೃದ್ಧಿ ಪತ್ರಿಕೋದ್ಯಮ: ಸಮಾಜ ಬೆಳವಣಿಗೆ ಸಾಧ್ಯ
ಸೇಡಂ: ಇಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಯಾಗಬೇಕಾದರೆ ಅಭಿವೃದ್ಧಿ ಪತ್ರಿಕೋದ್ಯಮದಿಂದ ಸಾಧ್ಯವಾಗುತ್ತದೆ ಎಂದು ಪತ್ರಕರ್ತ ಶರಣಪ್ಪ ಬಾಚಲಾಪೂರ ಹೇಳಿದರು. ಇಲ್ಲಿನ ಬೊಮ್ಮನಳ್ಳಿ ಸುದ್ದಿ ಪ್ರತಿಷ್ಠಾನ ದಿ. ವೀರಭದ್ರ ಮಾಮನಿ ಸ್ಮರಣಾರ್ಥ ನೀಡುವ ಹೈ-ಕ ಪತ್ರಕರ್ತ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಗಾಳಿ ಸುದ್ದಿಗೆ ಕಿವಿಗೊಟ್ಟು ಸುದ್ದಿ ಮಾಡದೆ ವಸ್ತುನಿಷ್ಠತೆ ಅರಿತು ಸುದ್ದಿ ಮಾಡಿದರೆ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು. ಟೆಂಗಳಿಯ ಶಾಂತೇಶ್ವರ ಮಠದ ಡಾ. ಶಾಂತಸೋಮನಾಥ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಶಸ್ತಿ ವಿಜೇತ ಪತ್ರಕರ್ತೆ ಸರೋಜಿನಿ ಯಮಕನಮರಡಿ, ಜಿಪಂ ಸದಸ್ಯ ವೀರಾರೆಡ್ಡಿ ಪಾಟೀಲ ಹೂವಿನಭಾವಿ, ಪ್ರತಿಷ್ಠಾನದ ಕೋಶಾಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಮಾತನಾಡಿದರು. ಮೋನಪ್ಪ ಪೊದ್ದಾರ ಪ್ರಾಥಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ವಿನಾಯಕ ಜೋಶಿ ನಿರೂಪಿಸಿದರು. ಸಂಚಾಲಕ ವಂದಿಸಿದರು.
ಶೈಕ್ಷಣಿಕ ಸಹ ಮಿಲನ ಇಂದಿನಿಂದ
ಗುಲ್ಬರ್ಗ: ವಿದ್ಯಾಭಾರತಿ ಕರ್ನಾಟಕ ಗುಲ್ಬರ್ಗ ಜಿಲ್ಲಾ ಘಟಕ ವತಿಯಿಂದ ಜು.25ಮತ್ತು 26ರಂದು ನಗರದ ಜೇವರ್ಗಿ ರಸ್ತೆಯಲ್ಲಿರುವ ಸಿದ್ಧಶ್ರೀ ಡಿವೈನ್ ಪ್ಯಾಲೆಸ್ನಲ್ಲಿ ಶೈಕ್ಷಣಿಕ ಸಹ ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಸುಮಾರು 120 ಶಾಲೆಗಳ ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯ ಶಿಕ್ಷಕರು ಭಾಗವಹಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಬಸವರಾಜ್ ಪಾಟೀಲ್ ಸೇಡಂ, ಖ್ಯಾತ ವೈದ್ಯ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಾರುತಿರಾವ್ ಮಾಲೆಯ ಜಿ.ಆರ್. ಜಗದೀಶ್, ಶಿವಯ್ಯ ಮಠಪತಿ, ಪಿ. ಭೀಮರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಕೊತ್ತಲಬಸವೇಶ್ವರ ದೇವಸ್ಥಾನದ ಸದಾಶಿವ ಸ್ವಾಮಿ ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಪರಿಸರ ಅಸಮತೋಲನ:ತಾಪಮಾನ ಹೆಚ್ಚಳ
ಗುಲ್ಬರ್ಗ: ಪರಿಸರ ಅಸಮತೋಲನದಿಂದ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದೆ. ಹೀಗಾಗಿ ಅರಣ್ಯ ಸಂರಕ್ಷಣೆಗೆ ಪ್ರಮುಖ ಆದ್ಯತೆ ನೀಡಬೇಕಿದೆ ಎಂದು ಬೀದರ್ನ ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕಾವಡಿ ಅಭಿಪ್ರಾಯಪಟ್ಟರು. ನಗರದ ನೂತನ ವಿದ್ಯಾಲಯ ಸಂಸ್ಥೆಯ ಬಾಲಕರ ಪ್ರೌಢಶಾಲೆಯಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನವು ಹಮ್ಮಿಕೊಂಡ ಪರಿಸರಕ್ಕೊಂದು ಪ್ರಜ್ಞರ ಮಾತು ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಪಾಲಿಕೆ ಸದಸ್ಯ ಪರಶುರಾಮ ನಸಲವಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ರಮೇಶ ಕಡಾಳೆ, ರಾಜಶೇಖರ ಯಾಳಗಿ, ಶ್ರೀಕಾಂತಗೌಡ ತಿಳಗೂಳ, ಮಹಾದೇವ ಬಡಾ, ರಾಜಕುಮಾರ, ವಲಯ ಅರಣ್ಯ ಅಧಿಕಾರಿ ಸಿದ್ರಾಮ ಮಾತನಾಡಿದರು.
ಪಶು ಚಿಕಿತ್ಸಾ ಶಿಬಿರ ನಾಳೆ
ಶಹಾಬಾದ್: ಎಐಡಿಎಸ್ಒ ಹಾಗೂ ಎಐಡಿವೈಒ ಸಹಯೋಗದಲ್ಲಿ ಜು.26ರಂದು ಲಾಡ್ಲಾಪುರ ಗ್ರಾಮದಲ್ಲಿ ಉಚಿತ ಪಶು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಬೆ.8ರಿಂದಲೇ ವೈದ್ಯ ಡಾ. ಪಂಪಣ್ಣ ಸಜ್ಜನ, ಡಾ. ನೀಲಪ್ಪ ಪಾಟೀಲ ಹಾಗೂ ಡಾ. ಅಶೋಕ ಪಾಟೀಲ ಜಾನುವಾರುಗಳ ಆರೋಗ್ಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಿದ್ದಾರೆಂದು ಸಿದ್ದರಾಜ ಮಲಕಂಡಿ ತಿಳಿಸಿದ್ದಾರೆ.