ಅಲೆಮಾರಿಗಳ ಬದುಕು ತರಗೆಲೆ
ಕನ್ನಡಪ್ರಭ ವಾರ್ತೆ ಯಾದಗಿರಿ ಜು.24
ಕಳೆದ ಕೆಲವು ದಿನಗಳ ಹಿಂದೆ ಸುರಿದ ಬಿರುಗಾಳಿ ಮಳೆಗೆ ನಗರದ ಹೊರವಲಯದಲ್ಲಿ ಅಲೆಮಾರಿ ಜನಾಂಗ ವಾಸಿಸುತ್ತಿರುವ ಗುಡಿಲುಗಳು ಅಕ್ಷರಶಃ ತತ್ತರಿಸಿ ಹೋಗಿವೆ.
ಪ್ರತಿ ವರ್ಷ ಮಳೆಗಾಲ ಬಂತೆಂದರೆ ಇವರ ಬದುಕು ಅಲ್ಲೋಲ ಕಲ್ಲೋಲವಾಗುತ್ತದೆ. ಆಗ ಜಿಲ್ಲಾಡಳಿತವು ತಾಲೂಕಾಡಳಿತದ ಮೂಲಕ ತಾತ್ಕಾಲಿಕವಾಗಿ ಗಂಜಿ ಕೇಂದ್ರ ಪ್ರಾರಂಭಿಸಿ 15 ದಿನಗಳೋ ಅಥವಾ 1 ತಿಂಗಳು ಅನುಕೂಲ ಕಲ್ಪಿಸಿ ಮತ್ತೆ ಕೈತೊಳೆದುಕೊಳ್ಳುತ್ತಿದೆ ಹೊರತು ಶಾಶ್ವತ ನೆಲೆ ಕಲ್ಪಿಸುವ ಗೋಜಿಗೆ ಹೋಗಿಲ್ಲ.
ಪ್ರತಿ ವರ್ಷ ಮಳೆಗಾಲದಲ್ಲಿ ವಿಷಜಂತುಗಳ ಕಾಟದಿಂದ ವೃದ್ಧರು, ಗರ್ಭಿಣಿಯರು ನರಕಯಾನತೆ ಅನುಭವಿಸಬೇಕು. ಅದೆಷ್ಟೋ ಬಾರಿ ಗರ್ಭಿಣಿಯರಿಗೆ ಚೇಳು ಕಚ್ಚಿ ಮೂರ್ಛೆ ಬಂದು ಬಿದ್ದ ಘಟನೆಗಳೂ ನಡೆದಿವೆ. ತಕ್ಕಮಟ್ಟಿಗೆ ಆಯುರ್ವೇದದ ಬಗ್ಗೆ ತಿಳಿವಳಿಕೆ ಇರುವ ವೃದ್ಧರೂ ಇಲ್ಲಿರುವುದರಿಂದ ಗರ್ಭಿಣಿಯರಿಗೆ ಬೇವಿನ ಸೊಪ್ಪನ್ನು ಚೇಳು ಕಚ್ಚಿದ ಜಾಗಕ್ಕೆ ಲೇಪಿಸಿ ಆಗುವ ಅನಾಹುತವನ್ನು ತಪ್ಪಿಸುತ್ತಾರಂತೆ.
ಬದುಕು ಮೂರಾಬಟ್ಟೆ: ಪ್ರತಿ ವರ್ಷ ಸುರಿಯುವ ಮಳೆಗೆ ಇವರ ಬದುಕು ಮೂರಾಬಟ್ಟೆಯಗುತ್ತದೆ. ತುತ್ತಿನ ಊಟಕ್ಕೂ ದಿನಗೂಲಿ, ಕೊಡ ಮಾರಾಟ, ಇಲ್ಲವೇ ಭಿಕ್ಷಾಟನೆ. ಇದೇ ಇವರ ದೈನಂದಿನದ ಕಾರ್ಯ ಚಟುವಟಿಕೆ. ಹೀಗೆ ಒಂದು ದಿನ ಕೂಡ ಕೆಲಸಕ್ಕೆ ತೆರಳದಿದ್ದರೆ ಅಂದು ತುತ್ತು ಊಟಕ್ಕೂ ಗತಿಯಿಲ್ಲ. ಪರಿಸ್ಥಿತಿ ಹೀಗಿದ್ದರೂ ಜಿಲ್ಲಾಡಳಿತ, ತಾಲೂಕಾಡಳಿತ ಇವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕ್ಷೇತ್ರದ ಜನತೆ ಕೇವಲ ವೋಟಿಗಷ್ಟೆ ಬೇಕು. ಅವರ ಕಷ್ಟಕ್ಕೆ ಭಗವಂತನಿದ್ದಾನೆ ಎಂಬುದು ಇಲ್ಲಿನ ಜನಪ್ರತಿನಿಧಿಗಳ ನಂಬಿಕೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಗಾಳಿಗೆ ಈ ಅಲೆಮಾರಿಗಳ ಗುಡಿಸಲುಗಳು ಉರುಳಿ ಹೋದರೂ ಸ್ಥಳಕ್ಕೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ ಎಂಬುದು ಇಲ್ಲಿ ವಾಸಿಸುವ ಅಲೆಮಾರಿಗಳ ಗೋಳು.
ಅದೇನೇ ಇರಲಿ ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತು ಅಲೆಮಾರಿಗಳ ಬದುಕಿಗೆ ನೆರವಾಗಬೇಕು. ಅಪರಾತ್ರಿಯ ಸನ್ನಿವೇಶದಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಲು ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸುವರೇ ಕಾದು ನೋಡಬೇಕು.
ಭಗವಂತನೇ ಕಾಪಾಡಬೇಕು
ಯಾದಗಿರಿ ನಗರಸಭೆಗೆ ಇನ್ನೂ ಅಧ್ಯಕ್ಷರ ಆಯ್ಕೆಯಾಗಿಲ್ಲ. ಶಾಸಕರು, ಉಸ್ತುವಾರಿ ಮಂತ್ರಿಗಳಂತೂ ಅಧಿವೇಶನದಲ್ಲಿ ಬ್ಯೂಸಿ. ಹೀಗಾಗಿ ಈ ಅಲೆಮಾರಿಗಳ ಕಷ್ಟವನ್ನು ಭಗವಂತನೇ ಕಣ್ದೆರೆದು ನೋಡಬೇಕಾಗಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದು, ನಿರಂತರ ಬೀಳುವ ಮಳೆಗೆ ಅಲೆಮಾರಿಗಳ ಗುಡಿಸಲುಗಳು ಬೀಳುತ್ತಿವೆ. ಕಳೆದ ವರ್ಷ ಮಳೆಗಾಲದಲ್ಲಿ ವಿಷ ಜಂತುಗಳ ಹಾವಳಿಗೆ ಗರ್ಭಿಣಿ ಮೃತಪಟ್ಟಿದ್ದು, ಇದರಿಂದ ಈ ಜನಾಂಗ ಆತಂಕದಲ್ಲಿ ಕಾಲ ದೂಡುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಇವರ ಸಮಸ್ಯೆಗೆ ಸ್ಪಂದಿಸಬೇಕೆಂದು ಆಲ್ದಾಳ ಒತ್ತಾಯಿಸಿದ್ದಾರೆ.