ಲೈಂಗಿಕ ದೌರ್ಜನ್ಯ ತಡೆಗೆ ಸಹಕರಿಸಿ: ಪಿಎಸ್ಐ
ಯಾದಗಿರಿ: ಶಾಲಾ- ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ನೀಡಿದರೆ ವಿದ್ಯಾರ್ಥಿನಿಯರು ಕೂಡಲೇ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕೆಂದು ನಗರ ಪೊಲೀಸ್ ಠಾಣೆ ಪಿಎಸ್ಐ ಎನ್.ವೈ. ಗುಂಡೂರಾವ್ ಹೇಳಿದರು.
ಗಿರಿಜಾ ಮೆಮೋರಿಯಲ್ ಎಜುಕೇಶನ್ ಮತ್ತು ರೂರಲ್ ಡೆವಲಪಮೆಂಟ್ ಟ್ರಸ್ಟ್ ಮತ್ತು ಗುರು ಹಂಪಯ್ಯ ಸ್ವಾಮಿ ವಿದ್ಯಾಸಂಸ್ಥೆ, ಲಿಂಗರಾಜ ಸ್ಮಾರಕ ಪ್ರೌಢಶಾಲೆ ಹಾಗೂ ವಿಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪಪೂ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಕುರಿತು ನಡೆದ ಜಾಗ್ರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಬಸ್ ಮತ್ತು ಆಟೋದಲ್ಲಿ ಪ್ರಯಾಣ ಮಾಡುವಾಗ ಯಾರಾದರೂ ಅನುಚಿತವಾಗಿ ವರ್ತನೆ ಮಾಡಿದಲ್ಲಿ ತಕ್ಷಣ ಪೊಲೀಸ್ ಠಾಣೆ ಕಂಟ್ರೋಲ್ ರೂಂ 100ಕ್ಕೆ ಕರೆ ಮಾಡಿ ಸಹಾಯ ಪಡೆಯಬೇಕೆಂದರು.
ಗಸ್ತಿಗೆ ವಾಹನ: ಇತ್ತೀಚೆಗೆ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ತಡೆಯಲು ಪೊಲಿಸ್ ಇಲಾಖೆ ನಗರದಲ್ಲಿ ಮೂರು ಚೀತಾ ವಾಹನಗಳನ್ನು ಗಸ್ತಿನಲ್ಲಿಡಲಾಗಿದೆ. ವಿದ್ಯಾರ್ಥಿ ನಿಲಯಗಳಲ್ಲಿ ತಂಗಿರುವ ವಿದ್ಯಾರ್ಥಿನಿಯರಿಗೆ ನಿಲಯದ ಸಿಬ್ಬಂದಿ ಅಥವಾ ಇತರೆ ಹುಡುಗರು ಲೈಂಗಿಕ ಕಿರುಕುಳ ನೀಡಿದರೆ ಕೂಡಲೇ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು. ತಕ್ಷಣ ಸ್ಥಳಕ್ಕೆ ಚೀತಾ ವಾಹನ ಕಳುಹಿಸಲಾಗುವುದು ಎಂದರು.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿನಿಯರು ಹೆಚ್ಚು ಜಾಗ್ರತೆಯಿಂದ ಇರಬೇಕು. ಕಾಲೇಜಿಗೆ ಬರುವಾಗ ಹಾಗೂ ವಿಳಂಬವಾದರೆ ಪೋಷಕರಿಗೆ ಮಾಹಿತಿ ನೀಡಬೇಕು. ಯಾವುದೇ ಸಮಸ್ಯೆ ಎದರಾದರೆ ಪೋಷಕರೊಂದಿಗೆ ಹೇಳಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸಣ್ಣಪುಟ್ಟ ಸಮಸ್ಯೆಗಳಿಂದ ಆತ್ಮವಂಚನೆ ಮಾಡಿಕೊಂಡು ಜೀವನದಿಂದ ವಿಮುಖರಾಗದೆ ತಾಳ್ಮೆ ವಹಿಸಿ ಸೂಕ್ತ ಪರಿಹಾರ ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಶಾಲಾ ಮುಖ್ಯಗುರು ಎಂ.ಕೆ. ವಿಶ್ವನಾಥ, ಪರಶುರಾಮ, ಮಹಿಳಾ ಎಎಸ್ಐ ನಾಗಮ್ಮ, ಮಹಿಳಾ ಪೊಲೀಸ್ ಪೇದೆ ಸುಧಾ, ನಾಗಮ್ಮ, ವಿದ್ಯಾರ್ಥಿಗಳು ಇದ್ದರು.