ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದಲಿತ ಬಲಿತ ಎಲ್ಲವೂ ಕ್ಷಣಿಕಸಾಮರಸ್ಯ ಬದುಕೇ ನಿತ್ಯಸತ್ಯ

Rashmi Kasaragodu
Updated On : 26 Jul 2014, 11:27 am

ಕ.ಪ್ರ. ವಾರ್ತೆ    ಗುಲ್ಬರ್ಗ    ಜು. 25
ಕನ್ನಡ ಭವನದಲ್ಲಿ ಕಸಾಪ ಶುಕ್ರವಾರ ನಿಯೋಜಿತ ಸಮ್ಮೇಳನಾಧ್ಯಕ್ಷರ ಜೊತೆ ಸಾಹಿತ್ಯಾಸಕ್ತರು, ಸುದ್ದಿಗಾರರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರನ್ನು ಆಹ್ವಾನಿಸಿ ಗಂಟೆ ಕಾಲ ಸಂವಾದ ಏರ್ಪಡಿಸಿತ್ತು. ಆಗ ದೊಡ್ಮನಿ ಅವರು ತಮ್ಮ ಸ್ವಂತ ಊರು ಮಲ್ಲಾಬಾದಿನಿಂದ ಗುಲ್ಬರ್ಗದ ಸಮ್ಮೇಳನಾಧ್ಯಕ್ಷರಾಗುವವರೆಗೆ ಹತ್ತಿದ ಮೆಟ್ಟಿಲುಗಳು, ಅನುಭವಿಸಿದ ಏರಿಳಿತಗಳನ್ನೆಲ್ಲ ಎಳೆಎಳೆಯಾಗಿ ಬಿಚ್ಚಿಟ್ಟರು.
ಚಿಂಚೂರ ಮಾಪುರತಾಯಿ ವಿಷಯದ ಮೇಲೆ ಸಂಶೋಧನೆ ಮಾಡಿ ಕನ್ನಡದಲ್ಲಿ ಪಿಎಚ್‌ಡಿ ಪಡೆದಿರುವ ಡಾ. ಹನುಮಂತರಾವ ಆಳಂದ ಸರ್ಕಾರಿ ಪಪೂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಇದುವರೆಗೂ ಸಂಶೋಧನೆ, ನಾಟಕ, ಕಾವ್ಯ, ಕಥೆ, ವಿಮರ್ಶೆ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ದಲಿತರಾದರೂ ತಮ್ಮ ಸಾಹಿತ್ಯದಲ್ಲಿ ಈ ಸಂಗತಿಗೆ ಒತ್ತು ಕೊಟ್ಟಿಲ್ಲ.
ಆದರೆ ದಲಿತರಾದ ಮಾತ್ರಕ್ಕೆ ಸಮಾಜದ ಇತರೆ ವರ್ಗ, ಜಾತಿ ಜನ ಸಮುದಾಯ ತಮ್ಮನ್ನು ಅದ್ಹೇಗೆ ಬೆಂಬಲಿಸಿತು, ಮುಂದೆ ಬರಲು ಸ್ಫೂರ್ತಿ ತುಂಬಿತು ಎಂಬುದನ್ನು ತಮ್ಮ ಪಂಚಮ ಎಂಬ ಜೀವನ ಚರಿತ್ರೆಯಲ್ಲಿ ಬರೆದಿದ್ದಾರೆ. ಸರ್ವ ಜಾತಿ, ಸಮುದಾಯದವರ ಬೆಂಬಲದೊಂದಿಗೇ ನಡೆದುಕೊಂಡು ಬಂದೆ ಎಂದು ಹೇಳುವ ಡಾ. ದೊಡ್ಮನಿ, ತಾವು ಅಸ್ಪೃಶ್ಯರೆಂದು ಯಾರೂ ದೂರವಿಡಲಿಲ್ಲ ಎಂದು ಮನಸಾಪೂರ್ವಕವಾಗಿ ಸ್ಮರಿಸುತ್ತಾರೆ.
ಕುಲ್ಕರ್ಣಿ ತಾಯಿ ಅಡುಗೆ ಮನ್ಯಾಗೇ ಊಟ: ಮಲ್ಲಾಬಾದಿನಲ್ಲಿದ್ದಾಗ ರಮೇಶ ಕುಲ್ಕರ್ಣಿ ಹಬ್ಬು ತಮ್ಮ ದೋಸ್ತ್. ಇವರ ಮನೆಯಲ್ಲಿ ತಾಯಿ ಫಿರಂಗಿಬಾಯಿಯವರೇ 'ಬಾರೋ ಹನುಮಾ' ಎಂದಾಗ ಊಟಕ್ಕೆಂದು ಅಡುಗೆ ಮನೆಯನ್ನೇ ಹೊಕ್ಕು ಬಿಡ್ತಿದ್ದೆ. ಅವರಂತೂ 'ಅರೆ, ಇಲ್ಲೇ ಬಂದಿ, ಕೂಡು ನಮ್ಮ ರಮೇಶನ ಜೊತಿ ನೀನು ಮಗಾ ಇದ್ಹಂಗ' ಎಂದು ರೊಟ್ಟಿ, ಬಾನ ನೀಡುತ್ತಿದ್ದರೆಂದು ತಾವು ಕಳೆದ 45 ವರ್ಷಗಳ ಹಿಂದೆ ಅನುಭವಿಸಿದ ಹಳ್ಳಿಗಾಡಿನ ಜಾತ್ಯತೀತ ಮನೋಧೋರಣೆಯ ಅನುಭವಗಳನ್ನು ಹೇಳುತ್ತ ಜಾತಿ ಕೋಮು ಎನ್ನದೆ ಅದರಲ್ಲಿನ ಸಮರಸ ಜೀವನಕ್ಕೆ ಇಂದು ಅಕ್ಷರರೂಪ ಕೊಡಬೇಕಾಗಿದೆ ಎಂದು ದೊಡ್ಮನಿ ದೊಡ್ಡ ಮಾತನ್ನೇ ಹೇಳಿದರು.
ಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರ ಪದವೀಧರನಾಗುವವರೆಗೆ ಮೇಲ್ವರ್ಗದ ಅನೇಕರೊಂದಿಗೆ ಬದುಕು ಕಟ್ಟಿದೆ ಎಂದ ಡಾ. ದೊಡ್ಮನಿ, 80ರ ದಶಕದಲ್ಲಿ ದಲಿತ ಚಳವಳಿಯಲ್ಲೂ ಗುರುತಿಸಿಕೊಂಡವರು. ಆದರೆ ಕೇವಲ ಚಳವಳಿಯಿಂದಲೇ ಅಭಿವೃದ್ಧಿ ಅಸಾಧ್ಯ. ಸಾಹಿತ್ಯ- ಚಳವಳಿ ಬೆರೆಯಬೇಕು. ಅದೂ ಕಳಕಳಿ ಇದ್ದವರು ಇಂತಹ ಸಂಗಮದ ಸಾರಥ್ಯ ವಹಿಸಿದಾಗ ಮಾತ್ರ ಸಮಾಜದ ಓರೆಕೋರೆ ತಿದ್ದಲು ಸಾಧ್ಯ ಎಂದರು.
ನನ್ನ ಮಾತು ಖಡಕ್, ಹಾಗಂತ ನಾನು ಯಾವುದನ್ನೂ ಹೊಟ್ಯಾಗ ಇಟ್ಕೊಂಡು ಕೂಡೋನಲ್ಲ. ಆಗಿಂದಾಗ್ಲೇ ಹೊರಗ ಹಾಕಿ ಬಿಡ್ತಿದ್ದೆ. ಅದ್ಕೇ ನನ್ನ ಮಾತಿಗೆ ಅನೇಕರು ಹೆದರ್ತಾರ. ಖಡಕ್ ಮಾತು ನನ್ನ ಸ್ವಭಾವ, ಅದ್ಕ ನಾನು ಬದಲಿಸ್ಲಿಕ್ಕಿ ಸಾಧ್ಯವಿಲ್ಲ ಎನ್ನುತ್ತಾರೆ ದೊಡ್ಮನಿ.


ಭೀಮಾತನಯನ ಮನದಾಳದ ಮಾತುಗಳು


ಭೀಮಾತನಯ ನನ್ನ ಕಾವ್ಯನಾಮ. ಅಫಜಲ್ಪುರ ತಾಲೂಕಿನ ಮಲ್ಲಾಬಾದಿ ಗ್ರಾಮ. ಭೀಮಾ ನದಿ ನೀರ ಕುಡಿದಿರುವೆ. ಭೀಮರಾವ್ ಅಂಬೇಡ್ಕರ್ ವಿಚಾರಧಾರೆಗಳಿಂದ ಪ್ರಭಾವಿತನಾದೆ. ತಂದೆ ಹೆಸರು ಭೀಮಶ್ಯಾ. ಹೀಗಾಗಿ ಭೀಮಾತನಯ ನನ್ನ ಕಾವ್ಯನಾಮವಾಯ್ತು.
ಮಲ್ಲಾಬಾದಿ, ಮಾತೋಳಿ ಸೇರಿದಂತೆ ಅಫಜಲ್ಪುರ ವಾತಾವರಣ ಜಾತ್ಯತೀತವಾಗಿದೆ. ದಿ.ವೆಂಕಯ್ಯ ಅವರ ಕುಟುಂಬ ನೆರವಿಗೆ ಬಂತು. ಚಿಕ್ಕವನಿದ್ದಾಗ ಹಳ್ಳದ ನೀರ ಕುಡಿಲಕ್ಕ ಹೋದಾಗ ಕೆಲವರು ಮೇಲಕ್ಕೆ ಹೋಗಿ ನೀರು ಕುಡಿತಿಯಾ.. ಎಂದು ಥಳಿಸಿದ್ದು ಬಿಟ್ರೆ ಜೀವನದಲ್ಲಿ ಮತ್ತೆ ಜಾತಿ ವಿಚಾರ ಅಡ್ಡಿಯಾಗಿಲ್ಲ.
ತಂದೆ ಪಿಡಬ್ಲ್ಯೂಡಿಯಲ್ಲಿ ಗ್ಯಾಂಗ್‌ಮನ್, ಹಂತಿಪದಗಳ ಹಾಡುಗಾರ. ತಾಯಿ ಪಾರ್ವತಿಬಾಯಿ ಜನಪದ ಹಾಡುಗಾರ್ತಿ. ಇವರಿಬ್ಬರ ಹಾಡುಗಾರಿಕೆ ಪ್ರಭಾವದಿಂದಲೇ ನನ್ನ ಮನಸ್ಸು ಜನಪದದತ್ತ ವಾಲಿರಬೇಕು. ಜನಪದ ನನ್ನ ಜೀವಾಳ, ಇದು ಉಳೀಬೇಕು. ವಿವಿ ಮಟ್ಟದಲ್ಲಿ ಜನಪದ ಕಲಿಕಾ ಕೋರ್ಸ್ ಆರಂಭವಾಗ್ಬೇಕು.
ಸಮಾಜದ ನಿತ್ಯದ ಸಂಗತಿಗಳಿಗೆ ಅಕ್ಷರ ರೂಪ ನೀಡಿದ್ದೇನೆ. ಸಾಹಿತ್ಯದಲ್ಲಿ ದಿನದ ಬದುಕು ಸೆರೆಯಾಗಬೇಕು. ಅದರಿಂದ ಸಮಾಜದ ಓರೆ-ಕೋರೆ ತಿದ್ದಲು ಸಾಧ್ಯವಲ್ಲವೇ?


22 ಕೃತಿಗಳ ಕೊಡುಗೆ

ಈವರೆಗೂ ವಿವಿಧ ಪ್ರಕಾರಗಳಲ್ಲಿ 22 ಕೃತಿಗಳನ್ನು ನೀಡಿದ್ದಾರೆ. ನೊಂದವರ ಹಾಡು, ನಮ್ಮ ದೇಶ- ನಮ್ಮ ಜನ, ಮರೆಯದ ಮಾಣಿಕ್ಯ, ಪಂಚಾಯಿತಿ, ಆಕ್ರೋಶ, ಹಚ್ಚಡದ ಪದರಾಗ ಇವು ಇವರ ಕಾವ್ಯಗಳು. ದೇವಿಕಾರ್ಯ, ಏಡ್ಸ್ ಬಂತು, ಬಲಿಪಶು ನಾಟಕಗಳು. ಘತ್ತರಗಿ ಭಾಗ್ಯವಂತಿ, ಚಿಂಚೂರು ಮಾಪುರ ತಾಯಿ ಜನಪದ ಸಂಶೋಧನಾ ಪ್ರಬಂಧಗಳು. ಜಾನಪದ ತೊಟ್ಟಿಲು, ಪಂಚಮ ಆತ್ಮಚರಿತ್ರೆ, ಬೆಳ್ಳಕ್ಕಿ ಮುಡ್ಯಾವ, ಘತ್ತರಗಿ ಭಾಗಮ್ಮ ಪ್ರಮುಖ ಕೃತಿಗಳು. ಇತರರ ಸಂಪಾದಕೀಯದಲ್ಲಿ ಇವರ 22ಕ್ಕೂ ಹೆಚ್ಚು ಲೇಖನಗಳು ಪ್ರಕಟಣೆ ಕಂಡಿವೆ. ಇವರಿಗೆ ಅನೇಕ ಪುರಸ್ಕಾರಗಳು ಅರಸಿ ಬಂದಿದ್ದು ವಿಶೇಷ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement