ಯಲ್ಲಮ್ಮದೇವಿ ಭಕ್ತೆಯ ಕಾಲು ಕತ್ತರಿಸಿ ಪರಾರಿ!
ಗುಲ್ಬರ್ಗ/ಅಫಜಲ್ಪುರ: ಅಫಜಲ್ಪುರ ತಾಲೂಕಿನ ಮಣ್ಣೂರು ಯಲ್ಲಮ್ಮದೇವಿ ಪೂಜೆಗೆ ಬಂದಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿ, ಎರಡೂ ಕಾಲುಗಳನ್ನು ಕತ್ತರಿಸಿ ಪರಾರಿಯಾದ ದುಷ್ಕೃತ್ಯ ಭೀಮಾನದಿ ತೀರದಲ್ಲಿ ಶುಕ್ರವಾರ ಮ.1 ಗಂಟೆ ಹೊತ್ತಿಗೆ ನಡೆದಿದೆ.
ದೇವಸ್ಥಾನದ ಬಳಿ ನಾಲ್ವರು ದುಷ್ಕರ್ಮಿಗಳ ದಾಳಿಗೆ ತುತ್ತಾದ ಮಹಿಳೆಯನ್ನು ಇಂಡಿ ತಾಲೂಕಿನ ಅಗರಖೇಡದ ಈರಮ್ಮ ಸತ್ಯಪ್ಪ ಕ್ಷತ್ರಿ (35) ಎಂದು ಗುರುತಿಸಲಾಗಿದೆ.
ಯಲ್ಲಮ್ಮ ದೇವಿಯ ದರ್ಶನಕ್ಕೆ ಹೋಗುವಾಗ ದಾರಿಯಲ್ಲಿ ದುಷ್ಕರ್ಮಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಅಡ್ಡಗಟ್ಟಿದರು. ನಂತರ ಮಾರಕಾಸ್ತ್ರಗಳಿಂದ ಕಾಲು ಕತ್ತರಿಸಿದರು ಎಂದು ಹಲ್ಲೆಗೆ ಒಳಗಾದ ಈರಮ್ಮ ತಿಳಿಸಿದ್ದಾಳೆ. ದುಷ್ಕರ್ಮಿಗಳು ಯಾರು ಎಂಬುದು ತನಗೆ ಗೊತ್ತಿಲ್ಲ ಎಂದು ಅಫಜಲ್ಪುರ ಠಾಣೆಯ ಪೊಲೀಸರಾದ ಸುರೇಶ ಹಾಗೂ ಇನ್ನೂಸ್ ಅವರಿಗೆ ಹೇಳಿಕೆ ನೀಡಿದ್ದಾಳೆ.
ಬಿಜಾಪುರ ಆಸ್ಪತ್ರೆಗೆ ದಾಖಲು: ದುಷ್ಕರ್ಮಿಗಳ ದಾಳಿಗೆ ತುತ್ತಾದ ಮಹಿಳೆಯನ್ನು ತಕ್ಷಣ ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಳ ಬಂಧುಗಳನ್ನು ಸಂಪರ್ಕಿಸುವ ಯತ್ನ ಸಾಗಿದೆ. ನಮ್ಮ ಸಿಬ್ಬಂದಿ ವರ್ಗವೂ ಬಿಜಾಪುರಕ್ಕೆ ಹೋಗುತ್ತಿದ್ದಾರೆ. ಪ್ರಕರಣ ಇನ್ನೂ ದಾಖಲಾಗಿಲ್ಲ ಎಂದು ಅಫಜಲ್ಪುರ ಠಾಣೆ ಮೂಲಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿವೆ. ಹಲ್ಲೆ ಪ್ರಕರಣದ ದುಷ್ಕರ್ಮಿಗಳು ಯಾರು, ಎಲ್ಲಿಂದ ಬಂದವರು ಎಂಬ ಮಾಹಿತಿಯಿಲ್ಲ ಎಂದಿರುವ ಅಫಜಲ್ಪುರ ಪೊಲೀಸರು ಪ್ರಕರಣದಲ್ಲಿ ಮಹಿಳೆಗೆ ಚಿಕಿತ್ಸೆ ಕೊಡಿಸುವ ಆತುರದಲ್ಲಿ ಬಂಧುಗಳಿದ್ದಾರೆ. ನಂತರ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗುತ್ತದೆ ಎಂದು ಠಾಣೆ ಮೂಲಗಳು ಹೇಳಿವೆ.