ಶರಣಸಿರಸಗಿ ಜೈಕರವೇ ಶಾಖೆ ಉದ್ಘಾಟನೆ
ಗುಲ್ಬರ್ಗ: ತಾಲೂಕಿನ ಶರಣ ಸಿರಸಗಿಯಲ್ಲಿ ಜೈಕರವೇ ಘಟಕವನ್ನು ಸಂಸ್ಥಾಪಕ ಅಧ್ಯಕ್ಷ ಅಮರಕುಮಾರ ಕೊಡ್ಲಹಂಹರ್ಗಾ ಉದ್ಘಾಟಿಸಿದರು. ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಯೇ ಸಂಘದ ಧ್ಯೇಯ. ಕಾರ್ಯಕರ್ತರು ಈ ಕೆಲಸಕ್ಕೆ ಸದಾ ಸಿದ್ಧರಾಗಿರಬೇಕು ಎಂದು ಹೇಳಿದರು. ಶರಣಸಿರಸಗಿ ಜೈಕರವೇ ಅಧ್ಯಕ್ಷ ಲಕ್ಷ್ಮಣ, ಮಲ್ಲಿಕಾರ್ಜುನ ಜಾಪೂರ, ರಾಜು ಮಾವನೂರು, ಶಿವಾನಂದ ಜಂಬಗಿ ಸೇರಿದಂತೆ ಅನೇಕರು ಸಂಘಟನೆಯ ವಿವಿಧ ಜವಾಬ್ದಾರಿ ಹೊತ್ತು ನಾಡು, ನುಡಿ ಸೇವೆಯ ಸಂಕಲ್ಪ ಮಾಡಿದರು.
ವಿದ್ಯಾರ್ಥಿಗಳಿಗೆ ಕಟ್ಟಿಗೆ ತರುವ ಶಿಕ್ಷೆ
ಆಳಂದ: ತಾಲೂಕಿನ ಸಾವಳೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕೈಗೊಳ್ಳಲು ಅಡುಗೆ ಸಿಬ್ಬಂದಿ ಮಕ್ಕಳಿಂದಲೇ ಕಟ್ಟಿಗೆ ತರಲು ಹಚ್ಚಿರುವ ಅಮಾನವೀಯ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಬಡ ಮಕ್ಕಳು ಶಾಲೆಯಿಂದ ಹೊರಗುಳಿಯದೆ ಶಿಕ್ಷಣ ಕಲಿಯಲಿ ಎಂದು ಸರ್ಕಾರ ಬಿಸಿಯೂಟ ನೀಡಿದರೆ, ಆ ಬಿಸಿಯೂಟ ಉಣ್ಣುವುದಕ್ಕಾಗಿಯೇ ಮಕ್ಕಳು ಅಡುಗೆ ಸಿಬ್ಬಂದಿಗೆ ಕಟ್ಟಿಗೆ ಹೊತ್ತು ತಂದುಕೊಡುವ ಅನಿವಾರ್ಯತೆ ಈ ಶಾಲಾ ಮಕ್ಕಳಿಗೆ ಎದುರಾಗಿದೆ. ಬಿಸಿಯೂಟದ ಕೋಣೆಯತ್ತ ಸುಳಿಯ ಬಾರದು ಎಂದು ಸರ್ಕಾರದ ಕಟ್ಟುನಿಟ್ಟಿನ ಆದೇಶವನ್ನು ಗಾಳಿಗೆ ತೂರಲಾಗಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಎಸ್‌ಡಿಎಂಸಿ ಸದಸ್ಯ ಸಿದ್ಧರಾಮ ವಿಠ್ಠಲ ಕ್ಷತ್ರಿ, ಕುಮಾರ ಶರಣಪ್ಪಾ ನೆಲ್ಲಗಿ, ಪರಶುರಾಮ ಜಮಾದಾರ, ಮಕ್ಕಳಿಂದ ಕಟ್ಟಿಗೆ ತರಲು ಹಚ್ಚಬಾರದು ಎಂದು ಅನೇಕ ಸಲ ಅಡುಗೆ ಸಿಬ್ಬಂದಿಗೆ, ಶಿಕ್ಷಕರಿಗೆ ಹೇಳಿದ ಮೇಲೂ ಮತ್ತೆ ಸೋಮವಾರ ಐದಾರು ಮಕ್ಕಳಿಗೆ ಕಟ್ಟಿಗೆ ತರಲು ಹಚ್ಚುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ದೂರು ಸಲ್ಲಿಸಿ ಆಗ್ರಹಿಸಿದ್ದಾರೆ.