ಕುಡಿವ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕ: ಡಾ. ಸತೀಶ್
ಕೆಂಭಾವಿ: ಮಕ್ಕಳ ಆರೋಗ್ಯ ಕಾಪಾಡಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಅವುಗಳ ಸದುಪಯೋಗ ಪಡೆದು ತಮ್ಮ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಬೇಕೆಂದು ಜಿಪಂ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ್ ಪಾಲಕರಿಗೆ ಮನವಿ ಮಾಡಿದರು. ಪಟ್ಟಣದ ಅಂಗನವಾಡಿ ಕೇಂದ್ರ 1ರಲ್ಲಿ ಸೋಮವಾರ ಜಿಪಂ ವತಿಯಿಂದ ಏರ್ಪಡಿಸಿದ್ದ ಮಕ್ಕಳ ದಂತ ತಪಾಸಣಾ ಉಚಿತ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ದೈಹಿಕವಾಗಿ ಸದೃಢರಾಗಲು ಆಹಾರ ಮುಖ್ಯ. ಆಹಾರ ಪದಾರ್ಥಗಳನ್ನು ತಿನ್ನಲು ಹಲ್ಲುಗಳು ಅಷ್ಟೆ ಮುಖ್ಯವಾಗಿದ್ದು, ಮಕ್ಕಳ ಹಲ್ಲುಗಳ ಬೆಳವಣಿಗೆ ಗಮನಿಸುವುದು ತಾಯಂದಿರ ಕರ್ತವ್ಯ ಎಂದರು. ಗುಲ್ಬರ್ಗ ಬಸವೇಶ್ವರ ಆಸ್ಪತ್ರೆಯ ದಂತ ವೈದ್ಯ ಡಾ. ಸತೀಶ ಪಾಟೀಲ್ ಮಾತನಾಡಿ, ಪಟ್ಟಣದಲ್ಲಿ ಸರಬರಾಜಾಗುವ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿದೆ. ಇದರಿಂದ ಮಕ್ಕಳ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿ ಅವರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಹಲ್ಲು ಬೇನೆ ಸಮಸ್ಯೆಯಿಂದ ಬಳಲುತ್ತಿರುವ ಮೂರು ಮಕ್ಕಳನ್ನು ಬಸವೇಶ್ವರ ಆಸ್ಪತ್ರೆಗೆ ಕಳುಹಿಸುವಂತೆ ಮನವಿ ಮಾಡಿದ ಅವರು, ಆ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು.