ವಸತಿ ನಿಲಯಕ್ಕೆ ಮನವಿ
ಶಹಾಪುರ: ಎಸ್ಎಫ್ಐ ತಾ. ಸಮಿತಿ ಪದವಿ ವಿದ್ಯಾರ್ಥಿಗಳಿಗೆ ವಸತಿ ನಿಲಯ ಪ್ರಾರಂಭಿಸಲು ಒತ್ತಾಯಿಸಿ ತಾ. ಸಮಾಜ ಕಲ್ಯಾಣ ಅಧಿಕಾರಿ ಎಸ್.ಎನ್. ನಾಯಕ ಅವರಿಗೆ ಮನವಿ ಸಲ್ಲಿಸಿತು. ಸಮಾಜ ಕಲ್ಯಾಣ ಅಧಿಕಾರಿ ಎಸ್.ಎನ್. ನಾಯಕ ಮಾತನಾಡಿ, ಆ.10ರೊಳಗೆ ಪದವಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ಪ್ರಾರಂಭಿಸುವ ಭರವಸೆ ನೀಡಿದರು. ಎಸ್ಎಫ್ಐ ತಾಲೂಕು ಅಧ್ಯಕ್ಷ ಹೊನ್ನಪ್ಪ ಹೋತಪೇಟ, ಕಾರ್ಯದರ್ಶಿ ಮಾನಪ್ಪ ಚಂದಾಪುರ, ಶಿವು ಬೀರನೂರ, ಶರಣು ಚಂದಾಪೂರ, ನಾಗರಾಜ ಕುರಕುಂದ, ಸುಚೀತಕುಮಾರ ಹುಂಡೇಕಲ್, ಮಲ್ಲು ಬಳಬಟ್ಟಿ, ಯಮನಪ್ಪ, ನಾಗರಾಜ ಇಬ್ರಾಹಿಂಪೂರ. ಧರ್ಮರಾಜ ಶಹಾಪುರ, ಸುರೇಶ ಕುರಿಹಾಳ, ನಾಗು ಬೀರನೂರ, ಶಿವು ಭಾಗವಹಿಸಿದ್ದರು.
ವೃತ್ತಿಯಲ್ಲಿ ಸೇವೆ ಜೀವಾಳ
ಹುಣಸಗಿ: ಸಮೀಪದ ಕಲ್ಲದೇವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಸುದರ್ಶನ್ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಸಿಬ್ಬಂದಿ ವರ್ಗ ಸನ್ಮಾನಿಸಿ ಬೀಳ್ಕೊಟ್ಟಿತು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಪ್ರಕಾಶ ಮಾತನಾಡಿ, ನಾವು ನಿರ್ವಹಿಸುವ ಕೆಲಸ, ಹುದ್ದೆ ದೊಡ್ಡದೇ ಇರಲಿ ಅಥವಾ ಸಣ್ಣದಿರಲಿ ಅದು ಅಷ್ಟು ಮುಖ್ಯವಲ್ಲ. ಆದರೆ ನಮ್ಮ ಕೆಲಸವನ್ನು ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಎಲ್ಲರೂ ಗುರುತಿಸಿ ಗೌರವಿಸುತ್ತಾರೆ. ಸೇವೆ ನಮ್ಮ ಜೀವಾಳವಾಗಬೇಕು ಎಂದು ಹೇಳಿದರು. ಸಿಬ್ಬಂದಿಗಳಾದ ಸುಮತಿ ವಸಂತಕುಮಾರ್ ಹಾಗೂ ಶ್ರೀನಾಥ ಮಾತನಾಡಿದರು.
ಅಮೃತ ಸಿಂಚನ
ಗುರುಮಠಕಲ್: ಪಪಂ ವತಿಯಿಂದ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಅಮೃತ ಸಿಂಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಪಟ್ಟಣ ಪಂಚಾಯತಿ ಅಧ್ಯಕ್ಷ ರೇಣುಕಾ ಸಂಜೀವ ಕುಮಾರ ಚಂದಪೂರ ಹಾಗೂ ಉಪಾಧ್ಯಕ್ಷರಾದ ಚಿನ್ನ ಬಾಲಪ್ಪ ನಿರೇಟಿಯವರು ಉದ್ಘಾಟಿಸಿದರು. ಪಟ್ಟಣದ ಜನತೆಯ ಆರೋಗ್ಯದ ದೃಷ್ಟಿಯಿಂದ ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಲಿದ್ದು, ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಅಧ್ಯಕ್ಷ ರೇಣುಕಾ ಸಂಜೀವ ಕುಮಾರ ತಿಳಿಸಿದರು. ಉಪಾಧ್ಯಕ್ಷ ಬಾಲಪ್ಪ ನಿರೇಟಿ, ಸದಸ್ಯ ಪ್ರಕಾಶ ನಿರೇಟಿ, ರವೀಂದ್ರ ರಡ್ಡಿ, ಪ್ರಮುಖರಾದ ರವಿ ಕೊಟಕೊಂಡಿ, ಭೀಮಶಪ್ಪ ಗುಡಿಸೇ, ಸತೀಶ ತೀವಾರಿ, ಮುಖ್ಯಾಧಿಕಾರಿಗಳಾದ ಭೀಮಾಶಂಕರ, ಮರಲಿಂಗಪ್ಪ, ಆರೋಗ್ಯ ನಿರೀಕ್ಷರಾದ ರಾಮುಲು, ನಾಗರಾಜ, ವೆಂಕಟಪ್ಪ ಸೇರಿದಂತೆ ಇತರರು ಹಾಜರಿದ್ದರು.
ಶಾಂತಿ ಸಭೆ
ಶಹಾಪುರ: ಸಾಮರಸ್ಯ ಹಾಗೂ ಪರಸ್ಪರ ಸಹೋದರ ಭಾವನೆಯಿಂದ ರಂಜಾನ್ ಹಬ್ಬವನ್ನು ಆಚರಿಸುವಂತೆ ಪಿಐಜೆ ಎಸ್. ನ್ಯಾಮಗೌಡರ ತಿಳಿಸಿದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರಂಜಾನ್ ನಿಮಿತ್ತವಾಗಿ ಶಾಂತಿ ಸಭೆ ನಡೆಸಿದ ಸಂದರ್ಭದಲ್ಲಿ ಸರ್ವ ಸಮುದಾಯದ ಮುಖಂಡರನ್ನು ಮತ್ತು ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶಹಾಪುರ ಪಟ್ಟಣ ಶಾಂತಿ, ನೆಮ್ಮದಿಗೆ ಹೆಸರಾಗಿದ್ದು ಸಹಬಾಳ್ವೆ ಇಲ್ಲಿನ ಮೇಲ್ಪಂಕ್ತಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಮತ್ತು ಮುಖಂಡರು ಇದ್ದರು.
ಗೃಹ ಸಾಲಕ್ಕಾಗಿ ಅರ್ಜಿ
ಯಾದಗಿರಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2014-15ನೇ ಸಾಲಿಗೆ ಮನೆ ನಿರ್ಮಾಣ ಮಾಡಲು ಗೃಹ ಸಾಲದ ಮೇಲಿನ ಬಡ್ಡಿ ರಿಯಾಯ್ತಿ ಸಹಾಯಧನ ಯೋಜನೆಗಳಲ್ಲಿ ಅರ್ಹ ಮತೀಯ ಅಲ್ಪಸಂಖ್ಯಾತರ ಸಮುದಾಯದ ಜನರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆ.25ರೊಳಗಾಗಿ ಅರ್ಜಿ ಸಲ್ಲಿಸಬೇಕು. ವಿವರಕ್ಕೆ ದೂ. 08473- 253785.