ತಹಸೀಲ್ದಾರ್ ನಡೆಗೆ ಬೇಸರ
ಅಫಜಲ್ಪುರ: ಮಾರ್ಚ್ ತಿಂಗಳಲ್ಲೇ ರಾಜ್ಯದ ಎಲ್ಲ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಅಕ್ರಮ- ಸಕ್ರಮ ಜಾರಿಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ತಾಲೂಕಿನಲ್ಲಿ ತಹಸೀಲ್ದಾರ್ ಗೌಸುದ್ದೀನ್ ಅವರು ಇದುವರೆಗೂ ಇದರ ಬಗ್ಗೆ ಚಕಾರವೆತ್ತಿಲ್ಲ.
ಸದ್ಯ ದಿಢೀರನೆ ಅಕ್ರಮ- ಸಕ್ರಮ ಮಾಡುವ ಕುರಿತು ಮೂರು ದಿನಗಳ ಗಡುವು ನೀಡಿರುವುದು ಸಂಪೂರ್ಣ ಅವೈಜ್ಞಾನಿಕ ಮತ್ತು ಕೇವಲ ಕೆಲ ವರ್ಗದವರ ಒಳಿತಿಗಾಗಿ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಹೀಗಾಗಿ ತಹಸೀಲ್ದಾರರು ಕೂಡಲೇ ತಮ್ಮ ನಿಲುವನ್ನು ಬದಲಿಸಬೇಕೆಂದು ಜೈ ಕರವೇ ತಾಲೂಕಾಧ್ಯಕ್ಷ ಸುರೇಶ ಅವಟೆ ಆಕ್ರೋಶ ವ್ಯಕ್ತಪಡಿಸಿದರು.
ದಿಢೀರ್ ಆದೇಶ ಸರಿಯಲ್ಲ: ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾನ್ಯವಾಗಿ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ನೀಡಲು ತಹಸೀಲ್ದಾರರು ವಾರದಿಂದ 15 ದಿನಗಳ ಕಾಲಾವಧಿ ತೆಗೆದುಕೊಳ್ಳುತ್ತಾರೆ. ಈಗ ದಿಢೀರನೆ 3 ದಿನಗಳ ಕಾಲಾವಧಿಯನ್ನು ನೀಡಿ ಅಕ್ರಮ- ಸಕ್ರಮ ಮಾಡುವಂತೆ ಆದೇಶ ನೀಡಿದ್ದು ಸಂಪೂರ್ಣ ಅವೈಜ್ಞಾನಿಕ. ಕೇವಲ ಕೆಲ ವರ್ಗದವರ ಒಳಿತಿಗಾಗಿ ಇದನ್ನು ಇಷ್ಟು ದಿವಸ ಮುಚ್ಚಿಟ್ಟು ಈಗ ದಿಢೀರನೆ ಆದೇಶ ಹೊರಡಿಸಿದ್ದಾರೆ.
ಆದರೆ ಸರ್ಕಾರದಿಂದ ಆದೇಶ ಹೊರಬಿದ್ದ ದಿನವೇ ಆಯಾ ಗ್ರಾಪಂ.ಗಳಲ್ಲಿ ಡಂಗೂರ ಸಾರಿ ಆದೇಶದ ಮಾಹಿತಿ ನೀಡಬೇಕು. ಆದರೆ ತಾಲೂಕಿನ ಯಾವ ಗ್ರಾಪಂ.ಗಳಲ್ಲೂ ಡಂಗೂರ ಸಾರದೆ ಗ್ರಾಪಂ ಕಾರ್ಯಾಲಯಗಳ ಗೋಡೆಗಳಿಗೆ ಆದೇಶದ ಮಾಹಿತಿ ಹಚ್ಚಲಾಗಿದೆ. ಇದರಿಂದ ಸಾರ್ವಜನಿಕರಿಗೆ ಏನೂ ಗೊತ್ತಾಗುವುದಿಲ್ಲ ಎಂದ ಅವರು, ಈ ಅಕ್ರಮ- ಸಕ್ರಮಕ್ಕೆ ಇನ್ನೂ 15 ದಿನಗಳ ಕಾಲಾವಕಾಶ ಕೊಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.