ಪಿಯು ನೂತನ ಪಠ್ಯಕ್ರಮಕ್ಕೆ ವಿರೋಧ
ಗುಲ್ಬರ್ಗ: ಅಧ್ಯಾಪಕರಿಗೆ ಪೂರ್ವ ತರಬೇತಿ ನೀಡದೇ ದ್ವಿತೀಯ ಪಿಯುಸಿಗೆ ನೂತನ ಪಠ್ಯಕ್ರಮ ಅಳವಡಿಸಿದ ಶಿಕ್ಷಣ ಇಲಾಖೆ ನೀತಿಯನ್ನು ಬಿಜೆಪಿ ಮುಖಂಡ ಈಶಾನ್ಯ ಶಿಕ್ಷಕ ಮತಕ್ಷೇತ್ರದ ಅಭ್ಯರ್ಥಿ ಶಶೀಲ್ ನಮೋಶಿ ಖಂಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಠ್ಯಪುಸ್ತಕ ಹೊರಬರಲು 2 ತಿಂಗಳಾದರೂ ಬೇಕಾಗಬಹುದು. ಹೀಗೆ ಏಕಾಏಕಿ ಹೊಸ ಪಠ್ಯಕ್ರಮ ಅಳವಡಿಸಿದ್ದರಿಂದ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮ ಫಲಿತಾಂಶ ಕುಸಿತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಸಮಗ್ರ ನಿರಂತರ ಮೌಲ್ಯಮಾಪನ ಪದ್ಧತಿ ಅಳವಡಿಸಲು ಮುಂದಾಗಿದೆ. ಶೇ. 80 ಪರೀಕ್ಷೆ ಅಂಕಗಳು ಹಾಗೂ ಶೇ.20 ಆಂತರಿಕ ಅಂಕ ಪದ್ಧತಿಯಲ್ಲಿ ವಿದ್ಯಾರ್ಥಿಗಳ ಬಗ್ಗೆ ಗಮನಹರಿಸಲು ಹೆಚ್ಚಿನ ಶಿಕ್ಷಕರು ಬೇಕಾಗುತ್ತದೆ. ಹೈ.ಕ. ಭಾಗದಲ್ಲಿ 70 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ಆದ್ದರಿಂದ ಹೆಚ್ಚಿನ ಶಿಕ್ಷಕರ ನೇಮಕಾತಿ ಮಾಡಿಕೊಂಡು, ಈ ನೂತನ ಪದ್ಧತಿ ಅಳವಡಿಸಬೇಕೆಂದು ಒತ್ತಾಯಿಸಿದರು.