'ಸೇಡಂ ರಿಂಗ್ ರೋಡ್ ವೃತ್ತಕ್ಕೆ ಬಂಡೆ ಹೆಸರಿಡಿ'
ಗುಲ್ಬರ್ಗ: ಪ್ರಾಮಾಣಿಕತೆಗೆ ಹಾಗೂ ಸೇವಾ ನಿಷ್ಠೆಗೆ ಹೆಸರಾದ ದಿ. ಮಲ್ಲಿಕಾರ್ಜುನ ಬಂಡೆ ಹೆಸರನ್ನು ಸೇಡಂ ರೋಡ್ ರಿಂಗ್‌ನ ವೃತ್ತಕ್ಕೆ ಇಟ್ಟು, ಅವರ ಪುತ್ಥಳಿಯನ್ನು ಸ್ಥಾಪಿಸಬೇಕೆಂದು ಸುಲಫಲ ಮಠದ ಡಾ. ಮಹಾಂತ ಶಿವಾಚಾರ್ಯ ಆಗ್ರಹಿಸಿದರು.
ದಿ. ಮಲ್ಲಿಕಾರ್ಜುನ ಬಂಡೆ 40ನೇ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳ ಸಂಘದಿಂದ ಬಾಲ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಧೈರ್ಯ, ಸಾಹಸದಿಂದ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಸಮಾಜಘಾತುಕ ಶಕ್ತಿಗಳಿಗೆ ಸಿಂಹಸ್ವಪ್ನರಾಗಿದ್ದರಾಗಿದ್ದ ಮಲ್ಲಿಕಾರ್ಜುನ ಬಂಡೆ ವಿದ್ಯಾರ್ಥಿಗಳಿಗೆ, ಯುವಕರಿಗೆ ಆದರ್ಶ ವ್ಯಕ್ತಿಯಾಗಿದ್ದರು. ಅವರ ವೀರ ಮರಣ ಶಾಶ್ವತವಾಗಿ ಉಳಿಯಲಿದೆ ಎಂದು ಹೆಳಿದರು.
ಪ್ರತಿಷ್ಠಾನ ಪ್ರಾರಂಭ: ಮಲ್ಲಿಕಾರ್ಜುನ ಬಂಡೆ ಅವರ ಪತ್ನಿ ಮಲ್ಲಮ್ಮ ಮಾತನಾಡಿ, ಮುಂದಿನ ವರ್ಷದಿಂದ ಮಲ್ಲಿಕಾರ್ಜುನ ಬಂಡೆ ಹೆಸರಿನಲ್ಲಿ ಪ್ರತಿಷ್ಠಾನ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ ಮಕ್ಕಳಿಗೆ ಸಹಾಯ ಮಾಡುವುದು ಸೇರಿದಂತೆ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ರೇಶ್ಮೆ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಭಾರತಿ ರೇಷ್ಮಿ, ಅಶೋಕ ಎಸ್. ಶರಣಬಸಪ್ಪ ಹೀರಾ, ಲಕ್ಷ್ಮಣ ದಸ್ತಿ, ಕಿಶೋರ ಗಾಯಕವಾಡ, ನಾಗಲಿಂಗಯ್ಯ ಮಠಪತಿ, ಚಿದಾನಂದ ಪಾಟೀಲ್, ಮಂಜುನಾಥ ನಾಲವಾರಕರ್, ಕಿರಣಕುಮಾರ, ಸಿದ್ದು ಪಾಟೀಲ್, ಶಿವರಾಜ ಪಾಟೀಲ್, ಶರಣು ಅರಮನೆ ಸೇರಿದಂತೆ ಖಜೂರಿ ಗ್ರಾಮಸ್ಥರು ಮತ್ತಿತರರು ಇದ್ದರು.
ಸಂಘದ ಜಿಲ್ಲಾಧ್ಯಕ್ಷ ಪ್ರಮೋದ ಬಿ. ಮಿಲಿಂದ ಸ್ವಾಗತಿಸಿದರು. ಹಣಮಂತ ಖಜೂರಿ ನಿರೂಪಿಸಿದರು.