ಭಾವಿ ಪ್ರಜೆಗಳಿಂದ ಪರಿಸರ ಸಂರಕ್ಷಣೆ ಸಾಧ್ಯ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.4
ಭವಿಷ್ಯದ ಪ್ರಜೆಗಳಾದ ಮಕ್ಕಳಿಂದಲೇ ಪರಿಸರ ಸಂರಕ್ಷಣೆ ಸಾಧ್ಯವಿದ್ದು, ಅವರಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಶಿಕ್ಷಕ ಮತ್ತು ಪಾಲಕರ ಮೇಲಿದೆ ಎಂದು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತರಾದ ನಾಗರತ್ನ ಮೂರ್ತಿ ಅನಪೂರ ಹೇಳಿದರು.
ನಗರದ ಆರ್.ವಿ. ವಿದ್ಯಾಸಂಸ್ಥೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಆರ್.ವಿ ವಿದ್ಯಾ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪರಿಸರ ಪ್ರೇಮ ಮತ್ತು ಪರಿಸರ ನಾಶದಿಂದಾಗುವ ದುಷ್ಟರಿಣಾಮಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಇದರ ಫಲಿತಾಂಶ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.
ಶಿಕ್ಷಕರ ಜವಾಬ್ದಾರಿ ಅಪಾರ: ಪಠ್ಯದಲ್ಲೂ ಪರಿಸರ ಸಂರಕ್ಷಣೆಯ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಕ್ಕಳಿಗೆ ಸಸಿ ನೆಟ್ಟು ಬೆಳೆಸುವ ಹೊಣೆ ನೀಡಿ ಅವರ ನೆನಪು ಗಿಡದ ಮೂಲಕ ಉಳಿಯುವಂತೆ ಮಾಡುವ ಕೆಲಸ ಶಿಕ್ಷಕರಿಂದಾಗಬೇಕೆಂದರು.
ಜಿಲ್ಲಾ ಕಾರ್ಯದರ್ಶಿ ಸಿ.ಎಂ. ಪಟ್ಟೇದಾರ ಮಾತನಾಡಿ, ಗಿಡ-ಮರಗಳ ನಾಶದಿಂದಾಗಿ ಇಂದು ಮಳೆಯಿಲ್ಲದೇ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಹಾಗೆಯೇ ನೀರಿನ ಸದ್ಬಳಕೆ ಮಾಡಿಕೊಳ್ಳದ ಕಾರಣ ಇಂದು ಅಂತರ್ಜಲ ಮಟ್ಟ ಕುಸಿದು ಸಂಕಷ್ಟ ಅನುಭವಿಸುತ್ತಿದ್ದೇವೆ. ಪರಿಸರ ನಾಶದಿಂದ ಮನುಕುಲ ನಾಶವಾಗುವ ಕಾಲ ಸನ್ನಿಹಿತವಾಗುತ್ತಿದೆ. ಇದನ್ನು ಅರಿತು ಮರ-ಗಿಡಗಳನ್ನು ಬೆಳೆಸಿ ಪರಿಸರ ಅಸಮತೋಲನವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಸುಜಿತಾ, ಜಿಲ್ಲಾ ತರಬೇತಿದಾರ ರಾಜೇಂದ್ರ, ಜಿಲ್ಲಾ ಆಯುಕ್ತರಾದ ರಾಘವೇಂದ್ರ ಇದ್ದರು. ವಿದ್ಯಾರ್ಥಿಗಳಾದ ಸಂಗೀತಾ ಮತ್ತು ಸೃಷ್ಟಿ ಪ್ರಾರ್ಥಿಸಿದರು. ಸ್ಕೌಟ್ಸ್ ಮಾಸ್ಟರ್ ಹಣಮಯ್ಯ ನಿರೂಪಿಸಿದರು. ಶಿಕ್ಷಕಿ ಜಯಶ್ರೀ ಸ್ವಾಗತಿಸಿ ವಂದಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿತ್ರಕಲಾ ಮತ್ತು ಪ್ರಬಂದ ಸ್ಪರ್ಧೆ ಏರ್ಪಡಿಸಲಾಗಿತು. ವಿಜೇತ ವಿದ್ಯಾರ್ಥಿಗಳಿಗೆ ಜಿಲ್ಲಾ ಸಂಸ್ಥೆಯಿಂದ ಬಹುಮಾನ ವಿತರಿಸಲಾಯಿತು.