ನಿಧಿಗಾಗಿ ಮಗಳ ಬಲಿ ಕೊಟ್ಟ ಧೂರ್ತ
ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಹಣವೆಂದರೆ ಹೆಣವೂ ಬಾಯಿ ಬಿಡುತ್ತದೆ. ಸಂಬಂಧಗಳ ಕೊಂಡಿ ಕಳಚುತ್ತದೆ.... ಈ ಮಾತಿಗೆ ಫಿರೋಜಾಬಾದ್ ಗ್ರಾಮದ ಹಸುಳೆ ಸಾದಿಯಾದ್ ಬರ್ಬರ ಕೊಲೆ ಪ್ರಸಂಗ ಕನ್ನಡಿ ಹಿಡಿದಿದೆ. ಮೇ ತಿಂಗಳು ಫಿರೋಜಾಬಾದ್ ಸಾಕ್ಷಿಯಾಗಿದ್ದ ಹಸುಳೆಯ ಅಪಹರಣ ಹಾಗೂ ಶಿರಚ್ಚೇದಿಸಿ ಕೊಲೆ ಮಾಡಿದ್ದ ಅಮಾನವೀಯ ಪ್ರಸಂಗದ ಸುತ್ತ ಸುತ್ತಿಕೊಂಡಿದ್ದ ರಹಸ್ಯದ ಪೊರೆ ಕಳಚಿ ಬಿದ್ದಿದೆ. ನಿಧಿಯಾಸೆಗಾಗಿ ನಡೆದಂತಹ ಈ ಕೊಲೆಯಲ್ಲಿ ಜನ್ಮ ನೀಡಿದ ತಂದೆಯೇ ಆರೋಪಿಗಳ ಸಾಲಲ್ಲಿ ನಿಂತಿದ್ದಾನೆ.
ನಿಗೂಢವಾಗಿ ಕಣ್ಮರೆಯಾಗಿ ಮೇ 26ರ ಸೋಮವಾರ ಮನೆಪಕ್ಕ ತೊಗರಿ ಕಟ್ಟಿಗೆ ರಾಶಿಯಲ್ಲಿ ರುಂಡ- ಮುಂಡ ಬೇರ್ಪಡಿಸಿದ ಹಾಗೂ ಅಂಗಾಂಗ ಕತ್ತರಿಸಲ್ಪಟ್ಟಂತಹ ಸ್ಥಿತಿಯಲ್ಲಿ ದೊರಕಿದ್ದ ಒಂದೂವರೆ ವರ್ಷದ ಹಸುಳೆ ಸಾದಿಯಾದ್ ಅಯಾತ್ ಸಾವು ನಿಧಿಯಾಸೆಗಾಗಿ ನಡೆದಂತಹ ನರಬಲಿ ಎಂಬುದು ಪೊಲೀಸರ ತನಿಖೆಯಿಂದ ಸಾಬೀತಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೂ 7 ಆರೋಪಿಗಳನ್ನು ಬಂಧಿಸಿದ್ದು (ಮಶಾಕ್ ಸಾವನ್ನಪ್ಪಿದ್ದಾನೆ) ಇವರ ಪೈಕಿ ಬರ್ಬರ ಕೊಲೆಯಾಗಿರುವ ಮಗು ಸಾದಿಯಾದ್‌ಗೆ ಜನ್ಮ ನೀಡಿದ ತಂದೆ ಶಂಶದ್ ಅಲಂ ಸಹ ಆರೋಪಿ ಸ್ಥಾನದಲ್ಲಿ ಪ್ರತ್ಯಕ್ಷನಾಗಿದ್ದಾನೆ
ಕೂಸನ್ನು ಕತ್ತರಿಸಿದ್ರು
ಮೇ 24 ರಂದು ಕೋಟೆಯಲ್ಲೇ ಪೂಜೆ ನಡೆಸಿ ಮಗುವಿನ ಕತ್ತು, ಬಲಗಾಲು, ಬಲಕೈ ಕತ್ತರಿಸಿ ರಕ್ತತರ್ಪಣ ನೀಡಲಾಗಿದೆ. ಇದೆಲ್ಲ ನಡೆಯುವಾಗ ಬಲಿಯಾಗುತ್ತಿದ್ದ ಮಗು ಸಾದಿಯಾದ್‌ಳ ತಂದೆ ಶಂಶದ್ ಅಲ್ಲೇ ನಿಂತು ಮಂತ್ರ ಪಠಿಸುತ್ತಿದ್ದನಂತೆ! ವಿಚಾರಣೆ ಹಂತದಲ್ಲಿ ಆರೋಪಿ ರಝಾಕ್ ಹಾಗೂ ಇತರರು ಈ ಹೇಳಿಕೆ ನೀಡಿದ್ದಾರೆ. ಪೂಜೆ ಸರಿಯಾಗಲಿಲ್ಲ ಎಂದು ಎಲ್ಲರು ದೇಹ ಎಸೆದು ಅಲ್ಲಿಂದ ಹೋಗಿದ್ದರಂತೆ.
ಲಾಕಪ್‌ನಲ್ಲಿ ಆರೋಪಿ ಸಾವು
ಮಗುವಿನ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ತೀವ್ರಗೊಳಿಸಿದ್ದ ಗುಲ್ಬರ್ಗ ಪೊಲೀಸ್ ಈ ಪ್ರಕರಣದಲ್ಲಿ ಬಂಧಿಸಿದ್ದ 7 ಆರೋಪಿಗಳ ಪೈಕಿ ಪ್ರಮುಖ ಆರೋಪಿ ಮಶಾಕ್ (38) ಕಸ್ಟಡಿಯಲ್ಲಿದ್ದಾಗಲೇ ಸಾವನ್ನಪ್ಪಿದ್ದಾನೆ. ಈ ಲಾಕಪ್ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಎಂದು 7 ಜನ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಿ ಗುಲ್ಬರ್ಗ ಎಸ್ಪಿ ಅಮೀತ್ ಸಿಂಗ್ ಆದೇಶ ಹೊರಡಿಸಿದ್ದಾರೆ