ಪಂಚಾಯ್ತಿ ಕಾಯ್ದೆ ತಿದ್ದುಪಡಿ ಅ.2ರಿಂದ
ಕ.ಪ್ರ. ವಾರ್ತೆ ್ಣ ಗುಲ್ಬರ್ಗ ್ಣ ಜೂ.8
ಗ್ರಾಮೀಣ ಸ್ಥಳೀಯ ಸರ್ಕಾರವಾದ ಗ್ರಾಮಪಂಚಾಯತ್ಗಳು ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯು ತನ್ನ ನಿಜ ಸ್ವರೂಪದಲ್ಲಿ ಕಾರ್ಯ ನಡೆಸಲು ಅಗತ್ಯವಾದ ತಿದ್ದುಪಡಿಗಳನ್ನು ಗಾಂಧಿ ಜಯಂತಿಯಂದು ಜಾರಿಗೆ ತರಲಾಗುವುದು ಎಂದು ಶಾಸಕ ಹಾಗೂ ಕರ್ನಾಟಕ ಪಂಚಾಯತ್ ಕಾಯ್ದೆ ತಿದ್ದುಪಡಿ ಶಿಫಾರಸು ಸಮಿತಿ ಅಧ್ಯಕ್ಷ ಕೆ.ಆರ್. ರಮೇಶಕುಮಾರ ತಿಳಿಸಿದ್ದಾರೆ. .
ರಂಗಮಂದಿರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯು ಗುಲ್ಬರ್ಗ ವಿಭಾಗದಲ್ಲಿ ಬರುವ ಆರು ಜಿಲ್ಲೆಗಳ ಜಿಪಂ, ತಾಲೂಕು ಹಾಗೂ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು, ಆಸಕ್ತಿಯುಳ್ಳ ಮಾಜಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗಾಗಿ ಹಮ್ಮಿಕೊಂಡಿದ್ದ ಪಂಚಾಯತ್ರಾಜ್ ತಿದ್ದುಪಡಿ ಶಿಫಾರಸ್ಸು ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿಭಾಗ ಮಟ್ಟದ ಸಭೆ: ಈಗಾಗಲೇ ಮೈಸೂರು, ಬೆಳಗಾವಿಗಳಲ್ಲಿ ವಿಭಾಗ ಮಟ್ಟದ ಸಭೆಯನ್ನು ನಡೆಸಲಾಗಿದೆ. ಇಂದು ಗುಲ್ಬರ್ಗ ವಿಭಾಗ ಮಟ್ಟದ ಸಭೆ ನಡೆಯುತ್ತಿದೆ. ಸೋಮವಾರದಂದು ಬೆಂಗಳೂರು ವಿಭಾಗ ಮಟ್ಟದ ಸಭೆ ನಡೆಸಿದ ನಂತರ ವಿಷಯತಜ್ಞರು ಹಾಗೂ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಸಭೆಯನ್ನು ನಡೆಸಿ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿಯ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿ ಕರಡು ಸಿದ್ಧಪಡಿಸಲಾಗುವುದು. ಜೂ. 23ರಿಂದ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಕರಡನ್ನು ಮಂಡಿಸಿ ಅನುಮೋದನೆ ಪಡೆಯಲಾಗುವುದು. ಈ ಅನುಮೋದನೆಯನ್ನು ಕಾನೂನು ರೂಪದಲ್ಲಿ ಪರಿವರ್ತಿಸಿ ಜಾರಿಗೊಳಿಸಲಾಗುವುದು ಎಂದರು.
ಮಾಹಿತಿ ಪಡೆಯಲಾಗುತ್ತಿದೆ: ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣ ಹಾಗೂ ವ್ಯವಸ್ಥೆಯಲ್ಲಿ ಹೆಚ್ಚು ಶಕ್ತಿ ತುಂಬಲು ಬೇಕಾಗುವ ಬದಲಾವಣೆ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಸಂಖ್ಯಾಬಲದ ಹಿನ್ನೆಲೆಯಲ್ಲಿ ಕೈಗೊಳ್ಳುವ ನಿರ್ಣಯದಿಂದ ತಪ್ಪುಗಳು ಆಗಬಾರದೆಂಬ ಉದ್ದೇಶದಿಂದ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಯ ಸದಸ್ಯರೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುತ್ತಿದೆ. ಎಲ್ಲ ಅಭಿಪ್ರಾಯದೊಂದಿಗೆ ರಚಿಸಲಾದ ಕಾನೂನನ್ನು ಜಾರಿಗೊಳಿಸಿದರೆ ಅನುಕೂಲವಾಗುವುದೆಂಬ ಉದ್ದೇಶ ಸರ್ಕಾರಕ್ಕಿದೆ. ಚುನಾಯಿತ ಪ್ರತಿನಿಧಿಗಳು ಜನರಿಗೆ ಬದ್ಧರಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಜಾತಂತ್ರ ವ್ಯವಸ್ಥೆ ಗಟ್ಟಿಯಾಗುತ್ತದೆ. ಅದಕ್ಕೆ ಗ್ರಾಮ ಸಭೆಗಳನ್ನು ಸರ್ವೋಚ್ಚ ಸಭೆಯೆಂದು ಕರೆಯಲಾಗುತ್ತದೆ ಎಂದರು.
ಅಧಿಕಾರಾವಧಿ 5 ವರ್ಷ: ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ನೇರ ಚುನಾವಣೆ ನಡೆದು ಅವರ ದ್ದಾಗಿರಬೇಕು. ಗ್ರಾಮ ಪಂಚಾಯತ್ಗಳಿಗೆ ಬಿಡುಗಡೆಯಾಗುವ ಅನುದಾನವು ಅವುಗಳ ಅವಶ್ಯಕತೆಗಳಿಗೆ ತಕ್ಕಂತೆ ಬಳಸಿಕೊಳ್ಳುವ ಅಧಿಕಾರವನ್ನು ನೀಡಬೇಕು. ಪಂಚಾಯತ್ ವ್ಯವಸ್ಥೆಯಡಿಯ ಅಧ್ಯಕ್ಷರಿಗೆ, ಆಕಸ್ಮಿಕ ಅನಾಹುತಗಳು ಸಂಭವಿಸಿದಾಗ ತಕ್ಷಣ ಪರಿಹಾರ ನೀಡುವ ಅಧಿಕಾರ ದೊರಕಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯ ಅಧಿಕಾರಿಗಳ ಕಾರ್ಯದಕ್ಷತೆಯನ್ನು ಗುರುತಿಸಿ ಅವರ ರಹಸ್ಯ ವರದಿ ಬರೆಯುವ ಅಧಿಕಾರ ಅಧ್ಯಕ್ಷರಿಗೆ ಇರಬೇಕು. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುವ ಮಹಿಳಾ ಚುನಾಯಿತ ಪ್ರತಿನಿಧಿಗಳು ಪಂಚಾಯತ್ ರಾಜ್ವ್ಯವಸ್ಥೆಯ ಬಗ್ಗೆ ತಿಳಿದುಕೊಂಡಿರಬೇಕು ಹಾಗೂ ಐದು ವರ್ಷದ ಅವಧಿಯಲ್ಲಿ ಒಂದು ಬಾರಿಯಾದರು ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಸಿಗಬೇಕು ಎಂದು ಚುನಾಯಿತ ಸದಸ್ಯರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಅಧ್ಯಕ್ಷರಿಗೆ ತಿಳಿಸಿದರು.
ಸಭೆಯಲ್ಲಿ ತಿದ್ದುಪಡಿ ಶಿಫಾರಸ್ಸು ಸಮಿತಿ ಸದಸ್ಯರಾದ ಸಿ.ನಾರಾಯಣ ಸ್ವಾಮಿ, ಡಿ.ಆರ್. ಪಾಟೀಲ್, ಅಲ್ಲಮಪ್ರಭು ಪಾಟೀಲ್, ಕೆ.ಬಿ.ಶಾಣಪ್ಪ, ಸಿಂತಿಯಾ ಸ್ಟೀಫನ್, ಶಾಂತವ್ವ ಗುಜ್ಜಲ್, ಟಿ. ಜನಾರ್ಧನ, ಸುಶೀಲಕುಮಾರ ಭೀಮಪ್ಪ ಬೆಳಗಲಿ, ಚಿಂಚೋಳಿ ಶಾಸಕ ಉಮೇಶ ಜಾಧವ, ಸಮಿತಿ ಸದಸ್ಯ-ಕಾರ್ಯದರ್ಶಿಜಿ. ದಕ್ಷಿಣಾಮೂರ್ತಿ, ಗುಲ್ಬರ್ಗ ಜಿಪಂ ಅಧ್ಯಕ್ಷೆ ಕಸ್ತೂರಿಬಾಯಿ ಎಸ್. ಪಾಟೀಲ್, ಜಿಪಂ ಸಿಇಒ ಟಿ.ಎಚ್.ಎಂ.ಕುಮಾರ, ಆರು ಜಿಲ್ಲೆಗಳ ಜಿಪಂ, ತಾಪಂ, ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.