ಮನೆ ಮನೆಗೆ ಮಾತ್ರೆ
ಚಿತ್ತಾಪುರ: ಡಿಇಸಿ ಮಾತ್ರೆ ಸೇವಿಸುವ ಮೂಲಕ ರಾಷ್ಟ್ರದಿಂದ ಆನೆಕಾಲು ಮಹಾಮಾರಿ ರೋಗವನ್ನು ಕಿತ್ತೊಗೆಯಲು ನಿರ್ಧಾರ ಮಾಡಿ. ಯಾವುದೇ ವದಂತಿಗಳಿಗೆ ಕಿವಿಕೊಡದೆ, ಧೈರ್ಯದಿಂದ ಮಾತ್ರೆಗಳನ್ನು ಸೇವಿಸಿ ಸರ್ಕಾರದ ಯೋಜನೆಗಳನ್ನು ಯಶಸ್ವಿಗೊಳಿಸಿ ಎಂದು ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಹೊಸಮನಿ ಇಂಗನಕಲ್ ಕರೆ ನೀಡಿದರು.
ತಾಲೂಕಿನ ತೆಂಗಳಿಯ ಹನುಮಾನ ಮಂದಿರದ ಆವರಣದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಆನೆಕಾಲು ರೋಗ ನಿರ್ಮೂಲನೆ ಕಾರ್ಯಕ್ರಮದಲ್ಲಿ ಡಿಇಸಿ ಮಾತ್ರೆಗಳನ್ನು ಮನೆ ಮನೆಗೆ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪೋಲಿಯೊ ನಿರ್ಮೂಲನೆ ಮಾಡಿದ ರೀತಿಯಲ್ಲಿ ಪ್ರತಿಯೊಬ್ಬರೂ ಡಿಇಸಿ ಮಾತ್ರೆ ಸೇವಿಸಿದ್ದಲ್ಲಿ ಆನೆ ಕಾಲು ರೋಗವನ್ನು ಕೂಡಾ ನಿರ್ಮೂಲನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಮನೋಹರ ಮಾತನಾಡಿ, ಡಿಇಸಿ ಮಾತ್ರೆ ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಯಾರದೋ ಹೇಳಿಕೆಗಳಿಗೆ ಕಿವಿಗೊಡದೆ ನಿಶ್ಚಿಂತೆಯಿಂದ ಮಾತ್ರೆ ಸೇವಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ನಂದೂರ, ಗುರಪ್ಪ ಹಡಪದ್, ಪರಮೇಶ್ವರ ಬೆನಕಮಪಳ್ಳಿ ಲ್ಯಾಬ್ ಟೆಕ್ನೀಶಿಯನ್ ಸಿರಾಜ್‌ವುದ್ದೀನ್, ಫಾರ್ಮಾಸಿಸ್ಟ ಮಹೇಶ ಪತ್ತಾರ್, ಮುಖಂಡರಾದ ರವಿಂದ್ರ ಹಾಳಕಾಯಿ, ಈರಣ್ಣ ದಂಡೋತಿ, ಅಂಗನವಾಡಿ ಕಾರ್ಯಕರ್ತೆ ಹೀರಾಬಾಯಿ ಪಾಟೀಲ್, ಆಶಾ ಕಾರ್ಯಕರ್ತೆ ನಾಗಮ್ಮ ತಮ್ಮನಗೌಡರ್, ತಾರಾಚಂದ್ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.