ರವಿಂದ್ರನಾಥ ಪ್ರಕರಣ ಸಿಬಿಐಗೆ ಆಗ್ರಹ
ಯಾದಗಿರಿ: ರಾಜ್ಯದಲ್ಲಿ ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಇಲ್ಲದಾಗಿದೆ ಎಂದು ಆರೋಪಿಸಿ ಹಾಗೂ ಎಡಿಜಿಪಿ ಡಾ. ರವೀಂದ್ರನಾಥ ಅವರ ಪ್ರಕರಣವನ್ನು ಸಿಐಡಿ ಬದಲಾಗಿ ಸಿಬಿಐಗೆ ತನಿಖೆ ಮಾಡಲು ವಹಿಸುವಂತೆ ಆಗ್ರಹಿಸಿ ಗುರುವಾರ ಯಾದಗಿರಿ ಜಿಲ್ಲಾ ದಲಿತ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಘಟಕ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಜನರು ರಕ್ಷಣೆಗೆಂದು ಪೊಲೀಸ್ ಇಲಾಖೆಯನ್ನು ಅರಸಿ ಹೋಗುತ್ತಾರೆ. ಆದರೆ, ಇಲಾಖೆಯಲ್ಲಿಯ ಉನ್ನತ ಅಧಿಕಾರಿಗಳಿಗೆ ಭದ್ರತೆ ಇಲ್ಲದೆ ಇಲಾಖೆಯ ಅಧಿಕಾರಿಗಳ ಮೇಲೆಯೇ ಅಮಾನುಷವಾಗಿ ವರ್ತಿಸಿರುವುದು ಜನರಲ್ಲಿ ಆತಂಕ ಮನೆ ಮಾಡಿದೆ ಎಂದರು. ಇಲಾಖೆಯಲ್ಲಿ ಜಾತಿ ವ್ಯಾಮೋಹ ಹೆಚ್ಚಾಗಿದ್ದು, ಅಧಿಕಾರಿಗಳ ವಿರುದ್ಧ ಅಧಿಕಾರಿಗಳೇ ಕುತಂತ್ರ ಮಾಡುವ ಮಟ್ಟಿಗೆ ಮುಂದಾಗಿದ್ದಾರೆ. ಪ್ರಾಮಾಣಿಕ ದಕ್ಷ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು. ಜಿಲ್ಲಾ ಸಂಘಟನಾ ಸಂಚಾಲಕ ಶರಣಪ್ಪ ದಕಣಿ, ನಿಂಗಪ್ಪ ಮಳ್ಳಳ್ಳಿ, ಶಿವಪುತ್ರಪ್ಪ ಜವಳಿ, ಚಂದಪ್ಪ ಮುನಿಯಪ್ಪನೋರ್, ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಮಲ್ಲಿಕಾರ್ಜುನ ತಳ್ಳಳಿ, ಶಿವಲಿಂಗಪ್ಪ ಛಲವಾದಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.