ಸ್ಲಂ ನಿವಾಸಿಗಳ ಒಕ್ಕಲೆಬ್ಬಿಸುವಿಕೆ ನಿಲ್ಲಿಸಲು ಆಗ್ರಹ
ಯಾದಗಿರಿ: ಬೆಂಗಳೂರಿನ ನಿಮ್ಹಾನ್ಸ್ ಬಳಿಯ ಸ್ಲಂ ಜನರನ್ನು ಒಕ್ಕಲೆಬ್ಬಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಸಾವಿತ್ರಿ ಬಾಯಿ ಫುಲೆ ಸಂಘಟನೆ ಹಾಗೂ ಆಮ್ ಆದ್ಮಿ ಪಾರ್ಟಿ ಜಂಟಿಯಾಗಿ ನಿಲ್ಲಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಆ ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಾವಿತ್ರಿಬಾಯಿ ಫುಲೆ ಸಂಘಟನೆ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ ಮಾತನಾಡಿ, ಸರ್ಕಾರ ಬಡವರು ಹಾಗೂ ಸ್ಲಂ ಜನರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿರುವುದಕ್ಕೆ ಸ್ಲಂ ಜನರನ್ನು ಒಕ್ಕಲೆಬ್ಬಿಸುತ್ತಿರುವುದೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಕ್ರೋಶ: ಸದ್ರಿ ಸ್ಲಂ ಪ್ರದೇಶದ ಜನರು ಈಗಾಗಲೇ ಹೈಕೋರ್ಟ್ನಲ್ಲಿ ದಾವೆ ಹೂಡಿ ತಡೆಯಾಜ್ಞೆ ತಂದಿದ್ದರೂ, ಪೊಲೀಸರ ನೆರವಿನಿಂದ ಒಕ್ಕಲೆಬ್ಬಿಸುತ್ತಿರುವುದು ಮಾನವೀಯತೆಗೆ ಹಾಗೂ ಕಾನೂನಿಗೆ ಮಾಡಿದ ಅಪಚಾರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಆಮ್ ಆದ್ಮಿ ಪಾರ್ಟಿ ಜಿಲ್ಲಾ ಸಂಚಾಲಕ ವೈಜನಾಥಸ್ವಾಮಿ ಗುರುಮಠಕಲ್ ಹಿರೇಮಠ ಮಾತನಾಡಿ, ಏಕಾಏಕಿ ಸ್ಲಂ ಜನತೆಯನ್ನು ಒಕ್ಕಲೆಬ್ಬಿಸುತ್ತಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಬೆಂಗಳೂರಿನ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು ಹೈಕೋರ್ಟ್ ಆದೇಶಕ್ಕೆ ಕವಡೆ ಕಿಮ್ಮತ್ತು ನೀಡಿಲ್ಲ. ಈ ಅಪಚಾರ ಎಸಗಿದ ಸಂಬಂಧಪಟ್ಟವರ ಮೇಲೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ ರಾಘವೇಂದ್ರರಾವ್ ಹಳ್ಳೂರು ಮನವಿ ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನೇತೃತ್ವ ವಹಿಸಿದ್ದ ಡಿಎಸ್ಎಸ್ ಸಂಚಾಲಕ ಶರಣು ನಾಟಿಕಾರ, ಮಲ್ಲಿಕಾರ್ಜುನ ಕೂಡ್ಲಿಕರ್, ಶಾಮರಾವ್ ಶಿಂಧೆ, ಆಮ್ ಆದ್ಮಿ ಪಾರ್ಟಿಯ ಸ್ವಾಮಿನಾಥನ್ ಅಪ್ಪುಕುಟಿನ್, ರಮೇಶ ರಾಠೋಡ್, ಹಂಪಮ್ಮ ರುದ್ರಯ್ಯಸ್ವಾಮಿ, ವಿಜಯಲಕ್ಷ್ಮೀ ಎಂ, ಖಾಸಿಂ ಬಿ, ಮಲ್ಲಮ್ಮ, ಮಹೆಬೂಬಿ, ನಿರ್ಮಲಾ ನಾಟೀಕರ್, ಹೊನ್ನಮ್ಮ ಟೋಕಾಪುರ ಇನ್ನಿತರರು ಉಪಸ್ಥಿತರಿದ್ದರು.