ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಬ್ಬು ಕೊಟ್ಟವ ಕೋಡಂಗಿ

Vishwanath S
Updated On : 11 Jun 2014, 11:36 am

ಗುಲ್ಬರ್ಗ: ಹೊಲದಲ್ಲಿ ಕಷ್ಟಪಟ್ಟು ಉಳುಮೆ ಮಾಡಿ ಬೆಳೆಸಿದ್ದ ಕಬ್ಬು ಕೊಟ್ಟು 3 ತಿಂಗಳಾದ್ರೂ, ಇನ್ನೂ ಕಾರ್ಖಾನೆ ಮಂದಿ ಹಣ ಕೊಟ್ಟಿಲ್ಲ.  ಸಂಸಾರದ ತಾಪತ್ರಯಗಳು ಹೆಚ್ಚುತ್ತಿವೆ. ಬದುಕನ್ನೇ ಕಟ್ಟಬೇಕಿದ್ದ ಕಬ್ಬು ಕೃಷಿ ಇಲ್ಲಿ ಯಾತಕ್ಕೂ ಬಾರದಂತಾಯ್ತು, ಕಬ್ಬು ಕೊಟ್ಟವ್ರು ನಾವು (ರೈತರು) ಕೋಡಂಗಿ ಆದ್ರೆ, ಇಸ್ಕೊಂಡವ್ರು (ಕಾರ್ಖಾನೆ ಮಂದಿ) ಈರಭದ್ರ ಆಗ್ಯಾರ್ರಿ... ಕಬ್ಬು... ಬಿಲ್... ಎಲ್ಲಾ ಹಸಿ ಗ್ವಾಡ್ಯಾಗ ಹಳ್ಳ ಹೊಡದ್ಹಂಗ... ಅಂತಾರಲ್ಲ ಹಂಗ ಆಗೈತಿ...
ಇಲ್ಲಿನ ಭಸನೂರ್ ಕಾರ್ಖಾನೆಗೆ ಕಬ್ಬು ಪೂರೈಸಿದ್ದರೂ ಸಮಯಕ್ಕೆ ಸರಿಯಾಗಿ ಹಣ ಬಾರದೆ ಬೇಸತ್ತಿರುವ ರೈತರು ಗ್ರಾಮೀಣ ಭಾಗದಲ್ಲಿ ಜನಪ್ರಿಯವಾಗಿರುವ ಈ ಗಾದೆಯಂತೆ ತಾವು ಕಾರ್ಖಾನೆ ಜೊತೆಗೆ ಮಾಡಿರುವ ವ್ಯವಹಾರವನ್ನು ಮನದಲ್ಲೇ ಹಳಿಯುತ್ತಿದ್ದಾರೆ.
ಪೂರೈಸಿದ ಕಬ್ಬಿಗೆ ಹಣ ಪಡೆಯದೆ, ಹಣಕ್ಕಾಗಿ ಕಾರ್ಖಾನೆ ಗೇಟಿಗೇ ಬೀಗ ಜಡಿದರೂ ಸಮಸ್ಯೆಗೆ ಪರಿಹಾರ ಕಾಣದೆ ಪರೇಶಾನ್ ಆಗಿದ್ದಾರೆ ರೈತರು. ಕಳೆದ 3 ವರ್ಷದಿಂದ ಕಾರ್ಖಾನೆ ನಡೆಸುತ್ತಿದ್ದೇವೆ. ಮೊದಲ ವರ್ಷ ಕಬ್ಬು ಅರೆದದ್ದು ಅಷ್ಟಕ್ಕಷ್ಟೆ. 2ನೇ ವರ್ಷ ಲಕ್ಷಾಂತರ ಟನ್ ಕಬ್ಬು ಅರೆದಿದ್ದೇವೆ. ಎಲ್ಲರಿಗೂ ಹಣ ನೀಡಿದ್ದೇವೆ. ಇದು ಮೂರನೇ ವರ್ಷ 11 ಸಾವಿರ ರೈತರ  7. 34 ಲಕ್ಷ ಟನ್ ಕಬ್ಬು ನುರಿಸಲಾಗಿದೆ. ನವೆಂಬರ್ 2013ರಿಂದ ಶುರರುವಾಗಿದ್ದ ನುರಿಸುವಿಕೆ ಏಪ್ರಿಲ್ 24ರಂದು ಸ್ಥಗಿತವಾಯ್ತು. ಫೆಬ್ರುವರಿವರೆಗೂ ಕಬ್ಬು ಪೂರೈಸಿದ ರೈತರಿಗೆ ಹಣ ಚುಕ್ತಾ ಮಾಡಲಾಗಿದೆ. ಮಾರ್ಚ್ ಏಪ್ರಿಲ್‌ನಲ್ಲಿ ಕಬ್ಬು ಕೊಟ್ಟವರಿಗೆ ಹಣ ಕೊಡಬೇಕಷ್ಟೆ.
ಕಾರ್ರ್ಖಾನೆ ಗೋಡೌನ್‌ನಲ್ಲಿ 3. 50 ಲಕ್ಷ ಕ್ವಿಂಟಾಲ್ ಸಕ್ಕರೆ ಇದೆ. ಇದನ್ನು ಮಾಕಿ ರೈತರ ಹಣ ಪಾವತಿಸುತ್ತೇವೆ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ತುಂಬ ಕುಸಿತ ಕಂಡಿದ್ದೇ ಬಿಲ್ ಪಾವತಿಯಲ್ಲಾದ ವಿಳಂಬಕ್ಕೆ ಕಾರಣ, ರೈತರು ಸಹಕರಿಸಲಿ ಎಂಬುದು ಕಾರ್ಖಾನೆ ಆಡಳಿತ ಮಂಡಲಿ ವಾದ.
ಗೇಟಿಗೆ ಬೀಗ ಹಾಕಿದ್ದರಿಂದ ಕೆಲಸ ಮಾಡಲು ಆಗುತ್ತಿಲ್ಲ. ಕೇಂದ್ರ ಕಚೇರಿಯಿಂದ 5 ಕೋಟಿ ರು ಹಣ ಜಮಾ ಆದರೂ ಅದನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತಿಲ್ಲ. ರೈತರು ಬೀಗ ಹಾಕಿ ಒಳಗೆ ಪ್ರವೇಶಿಸುವದನ್ನೇ ನಿರ್ಬಂಧಿಸಿದ್ದಾರೆ. ಹೀಗಾದ್ರೆ ಬಿಲ್ ಪಾವತಿ ಇನ್ನೂ ವಿಳಂಬವಾಗುವ ಸಾಧ್ಯತೆಗಳಿವೆ ಎನ್ನುವ ಕಾರ್ಖಾನೆ ಅಧಿಕಾರಿಗಳು ಜಿಲ್ಲಾಡಳಿತದ ಮಧ್ಯಸ್ಥಿಕೆ ಕೋರಿದ್ದಾರೆ.
ಸಹಾಯಕ ಆಯುಕ್ತರ ಸಂಧಾನ ವಿಫಲ ರೈತರು ಜೂನ್ 10ರ ಗಡವು ನೀಡಿತ್ತು, ಸಂಪೂರ್ಣ ಬಾಕಿ ಹಣ 27 ಕೋಟಿ ರು. ರೈತರಿಗೆ ಪಾವತಿಸುವಲ್ಲಿ ಕಾರ್ಖಾನೆ ವಿಳಂಬವಾದಲ್ಲಿ ರಸ್ತೆತಡೆ, ಜೈಲ್‌ಭರೋ ಸೇರಿದಂತೆ ಅತ್ಯುಗ್ರ ಹೋರಾಟಕ್ಕೆ ಮುಂದಾಗುವುದಾಗಿಯೂ ಘೋಷಿಸಿದ್ದಾರೆ.
ಭೂಸ್ನೂರ ಎನ್‌ಎಸ್‌ಎಲ್ ಸುತ್ತ
ಭೂಸ್ನೂರ ಸಕ್ಕರೆ ಕಾರ್ಖಾನೆ ಸಾಮರ್ಥ್ಯ- ಪ್ರತಿದಿನ 7, 500 ಟನ್ ಕಬ್ಬು ನುರಿಕೆ ಸಾಮರ್ಥ್ಯ
2013ರ ನವೆಂಬರ್ ನುರಿಕೆ ಆರಂಭ- 2014- ಏಪ್ರಿಲ್ 24 ಕ್ಕೆ ನುರಿಸುವ ಕಾರ್ಯ ಬಂದ್
11,080 ರೈತರಿಂದ, 7.34 ಲಕ್ಷ ಟನ್ ಕಬ್ಬು ರು. 132 ಕೋಟಿಗೆ ಖರೀದಿ ಮಾಡಿದ ಕಂಪನಿ
ಪ್ರತಿ ಕ್ವಿಂಟಲ್‌ಗೆ ಗೇಟ್‌ವರೆಗೂ ಪೂರೈಕೆ ಎಂಬಂತೆ 1, 800 ದರದಲ್ಲಿ ರೈತರಿಂದ ಖರೀದಿ
132 ಕೋಟಿ ಮೊತ್ತದಲ್ಲಿ 105 ಕೋಟಿ ಪಾವತಿ, ಇನ್ನೂ 27 ಕೋಟಿ ರೈತರಿಗೆ ಕೊಡಬೇಕು
ಕಬ್ಬು ಖರೀದಿ ಪ್ರತಿಯಾಗಿ (ಮಾರ್ಚ್- ಏಪ್ರಿಲ್ ಕಬ್ಬು ಪೂರೈಸಿದ) ರೈತರಿಗೆ  27 ಕೋಟಿ ಬಾಕಿ
7. 08 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದನೆ (ಈ ಪೈಕಿ 3. 05 ಲಕ್ಷ ಕ್ವಿಂಟಾಲ್ ಸಕ್ಕರೆ ದಾಸ್ತಾನು ಇದೆ)
ಬಾಕಿ 27 ಕೋಟಿ ಪಾವತಿಸಿ ಎಂದು ಬೀಗ ಜಡಿದು 2 ವಾರದಿಂದ ಹೋರಾಟ ನಡೆಸುತ್ತಿರುವ ರೈತರು
ಸಕ್ಕರೆ ಇಳುವರಿ- ಶೇ. 10ಕ್ಕೂ ಅಧಿಕ, ಕೊನೆಗೂ ಅನ್ನದಾತರ ಹೋರಾಟಕ್ಕೆ ಮಣಿದ ಕಂಪನಿ


-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement