ಗಡಿಪಾರು ಮಾಡಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.10
ಕರ್ನಾಟಕದ ಹಿರಿಯ ಸಾಹಿತಿ ಗುಲ್ಬರ್ಗದ ಪ್ರೊ.ಎಂ.ಎಂ ಕಲ್ಬುರ್ಗಿ ಅವರನ್ನು ಕೂಡಲೆ ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಬಿಜೆಪಿ ಯುವ ಮೋರ್ಚ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವ ಕೆ.ಜೆ. ಜಾರ್ಜ್ಗೆ ಮನವಿ ಮಾಡಿದೆ.
ಸಾಹಿತಿ ಪ್ರೊ.ಎಂ .ಎಂ ಕಲ್ಬುರ್ಗಿ ಹಿಂದು ಧರ್ಮದ ಮೇಲೆ ಗದಪ್ರಹಾರ ಮಾಡಿ ಮತ್ತು ಕೋಟ್ಯಾಂತರ ದೇಶವಾಸಿಗಳು ಪೂಜೆ ಮಾಡುವ ಭಗವಂತನ ಪ್ರತೀಕವಾದ ಮೂರ್ತಿಯನ್ನು ಕೇವಲ ಕಲ್ಲು ಎಂದು ಹೇಳಿದ್ದರು. ಮೂರ್ತಿಯಲ್ಲಿ ಯಾವುದೇ ರೀತಿಯ ಶಕ್ತಿ ಇಲ್ಲ ಎಂದಿದ್ದರು. ಗಂಗಾ ನದಿ, ಕಾಶಿ ವಿಶ್ವನಾಥನ ಪಾವಿತ್ರತೆಯ ಬಗ್ಗೆ ಬಾಲಿಶ ಹೇಳಿಕೆ ನೀಡಿ ಕೋಟ್ಯಂತರ ಜನರ ಧಾರ್ಮಿಕ ನಂಬಿಕೆ ಕೆರಳಿಸಿದ್ದಾರೆ. ಈ ಜನವಿರೋಧಿ ಹೇಳಿಕೆಯನ್ನು ಕೂಡಲೇ ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಹಾಗೂ ಪ್ರಕರಣ ದಾಖಲಿಸಿಕೊಂಡು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳದೇ ಹೋದರೆ ರಾಜ್ಯಾದ್ಯಂತ ಬಿ.ಜೆ.ಪಿ ಯುವ ಮೋರ್ಚಾ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುವುದು ಎಂದು ಪರಶುರಾಮ ನಸಲವಾಯಿ ಎಚ್ಚರಿಸಿದ್ದಾರೆ. ರಾಜಕುಮಾರ ಪಾಟೀಲ ತೇಲ್ಕೂರ, ವಿದ್ಯಾಸಾಗರ ಶಾಬಾದಿ, ಅಪ್ಪುಕಣಕಿ, ಮಾರುತಿ ಗೌಳಿ ಮುಂತಾದವರು ಇದ್ದರು.
ನವಲಿ ಖಂಡನೆ
ಗುಲ್ಬರ್ಗ: ಎಂ. ಎಂ. ಕಲ್ಬುರ್ಗಿ ದೇವತೆಗಳ ಕುರಿತಂತೆ ನೀಡಿರುವ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ವಿಶ್ವ ಮಾಧ್ವ ಮಹಾ ಪರಿಷತ್ನ ಜಿಲ್ಲಾಧ್ಯಕ್ಷ ಅರವಿಂದ ನವಲಿ ಅವರು ಬುದ್ದಿಜೀವಿಗಳು, ಸಾಹಿತಿಗಳು, ವಿಮರ್ಶಕರು ಎಂದು ಹೇಳಿಕೊಳ್ಳುವ ಕಲ್ಬುರ್ಗಿ ಇಂತಹ ಕೀಳು ಹೇಳಿಕೆ ಮೂಲಕ ಪುಕ್ಕಟೆ ಪ್ರಚಾರ ಪಡೆಯುವ ಹುನ್ನಾರ ಮಾಡಿದ್ದಾರೆ. ಒಂದು ಧರ್ಮದ ನಂಬಿಕೆಗಳಿಗೆ ಚ್ಯುತಿ ಬರುವಂತೆ ಹೇಳಿಕೆ ನೀಡುವುದು ಪ್ರಜಾಪ್ರಭುತ್ವ ನಂಬಿರುವ ಈ ದೇಶದಲ್ಲಿ ಸರಿಯಾದ ಕ್ರಮವಲ್ಲ ಎಂದು ಅರವಿಂದ ನವಲಿ ಹೇಳಿದ್ದಾರೆ.
ಬಾಲಿಶ ಹೇಳಿಕೆ
ಇಂದಿರಾ ಡ್ವಾಕ್ವಾ ಗುಂಪಿನ ಅಧ್ಯಕ್ಷೆ ರಾಜಶ್ರೀ ದೇಶಮುಖ ಅವರು ದೇವತೆಗಳ ಕುರಿತಂತೆ ಕಲ್ಬುರ್ಗಿ ಅವರ ಹೇಳಿಕೆ ಅವರ ಚಿಂತನೆಯಲ್ಲಿನ ಬಾಲಿಶತನ ತೋರಿಸುತ್ತದೆ, ಅವರು ಬುದ್ದಿ ಜೀವಿಗಳು ಅಲ್ಲವೇ ಅಲ್ಲ ಎಂದು ಕಿಡಿ ಕಾರಿದ್ದಾರೆ. ಒಂದು ಸಮುದಾಯದ ನಂಬಿಕೆಯನ್ನೇ ಕೆಣಕುವ ಇಂತಹ ಹೇಳಿಕೆ ಬುದ್ದಿಜೀವಿಗಳಾದವರಿಗೆ ಶೋಭಿಸುವುದಿಲ್ಲ. ಕಲ್ಬುರ್ಗಿಯವರು ಯಾಕೆ ಇಂತಹ ಹೇಳಿಕೆ ನೀಡಿ ಶಾಂತ ಕೊಳದಲ್ಲಿ ಕಲ್ಲೆಸೆದು ಶಾಂತಿ, ನೆಮ್ಮದಿ ಕದಡುವ ಪ್ರಯತ್ನ ಮಾಡುತ್ತಾರೋ, ದೇವರು ಇಂತಹವರಿಗೆ ಉತ್ತಮ ಬುದ್ಧಿ, ಒಳ್ಳೆಯ ಚಿಂತನೆ ಕರುಣಿಸಲಿ ಎಂದು ರಾಜಶ್ರೀ ದೇಶಮುಖ ಪ್ರಾರ್ಥಿಸಿದ್ದಾರೆ. ಎಂ.ಎಸ್. ಪಾಟೀಲ್ ನರಿಬೋಳ ಹಾಗೂ ನಾಗಲಿಂಗಯ್ಯ ಮಠಪತಿ ಖಂಡಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.