ಮಗು ಬಲಿ ಕೇಸ್ ತನಿಖೆಗೆ ತಂಡ
ಗುಲ್ಬರ್ಗ: ತಾಲೂಕಿನ ಫಿರೋಜಾಬಾದ ನಿಧಿಗಾಗಿ ಮಗು ಬಲಿ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿನ ಆರೋಪಿಯ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿ ತಂಡ ಪ್ರಾರಂಭಿಸಿದೆ. ಫೀರೋಜಾಬಾದಿನ ಹಸನಾಪುರ ಕೋಟೆಯಲ್ಲಿ ನಿಧಿ ಇದೆ ಎಂದು ಅದನ್ನು ತೆಗೆಯಲು ಒಂದುವರೆ ವರ್ಷದ ಮಗುವನ್ನು ಬಲಿಕೊಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಈ ಆರೋಪಿಗಳ ಪೈಕಿ ಮಶಾಕ (38) ಎಂಬ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಎಡವಿ ಬಿದ್ದು ಸಾವನ್ನಪ್ಪಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿತ್ತು.
ಸಿಐಡಿ ವಿಭಾಗದ ಡಿಎಸ್ಪಿ ಶಿವಲಿಂಗ ಆರಾಧ್ಯ ನೇತೃತ್ವದ ತಂಡ ನಗರದ ಮಹಾತ್ಮಾ ಬಸವೇಶ್ವರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಸೇರಿದಂತೆ ಈ ಪ್ರಕರಣದ ದಾಖಲೆಗಳ ಸಂಗ್ರಹ ಮತ್ತು ಪರಿಶೀಲನೆ ಆರಂಭಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಮತ್ತು ಎಸ್ಪಿ ಡಾ.ಅಮೀತಸಿಂಗ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವುದಾಗಿ ಮತ್ತು ಮಾನವ ಹಕ್ಕುಗಳ ಆಯೋಗಕ್ಕೂ ವರದಿ ನೀಡುವುದಾಗಿ ಪ್ರಕಟಿಸಿದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಬಿ ನಗರ ಸಿಪಿಐ ಬಸವರಾಜ ತೆಲಿ, ಪಿಎಸ್ಐ ಗಜಾನನ ನಾಯಕ, ಫರತಾಬಾದ್ ಪಿಎಸ್ಐ ಮುರಳಿ, ಎಂಬಿ ಠಾಣೆಯ ಪೇದೆಗಳು, ಗುವಿವಿ ಹಾಗೂ ಫರತಾಬಾದ್ ತಲಾ ಒಬ್ಬ ಪೇದೆ ಸೇರಿ ಒಟ್ಟು 7 ಜನ ಪೊಲೀಸರನ್ನು ಅಮಾನತು ಮಾಡಲಾಗಿದೆ.
ನ್ಯಾಯಾಧೀಶರ ಕಾರಿಗೆ ಕಲ್ಲು!: ಮನೆ ಮುಂದೆ ನಿಲ್ಲಿಸಿದ ನ್ಯಾಯಾಧೀಶರೊಬ್ಬರ ಕಾರಿಗೆ ಕಿಡಿಗೇಡಿಗಳು ಕಲ್ಲು ಹೊಡೆದ ಘಟನೆ ಅಫಜಲ್ಪುರದ ಪಟ್ಟಣದಲ್ಲಿ ನಡೆದಿದೆ. ಅಫಜಲಪುರದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ವಾಸುದೇವ ಆರ್. ಗುಡಿಗೆ ಸಂಬಂಧಿಸಿದ ಮಾರುತಿ ಸ್ವಿಫ್ಟ್ ಕಾರಿಗೆ ಕಿಡಿಗೇಡಿಗಳು ಕಲ್ಲು ಹೊಡೆದು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.
ಯುವತಿಯ ಅಪಹರಣ: ನಿವೃತ್ತ ಪೊಲೀಸ್ ಅಧಿಕಾರಿ ಪುತ್ರನೋರ್ವ ಯುವತಿಯೋಬ್ಬಳನ್ನು ಅಪಹರಿಸಿದ ಘಟನೆ ಗುಲ್ಬರ್ಗ ನಗರದ ವೆಂಕಟೇಶ ನಗರದಲ್ಲಿ ನಡೆದಿದೆ. ಅಂಬರೀಶ ಬಾಬು ಚವ್ಹಾಣ ಎಂಬಾತನೆ ಯುವತಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಯುವತಿ ತಂದೆ ಮಹಿಳಾ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.