ಚೆನ್ನಮ್ಮ ವಸತಿ ಶಾಲೆ ಈಗ ದನದ ಕೊಟ್ಟಿಗೆ
ಚಿಂಚೋಳಿ: ತಾಲೂಕಿನ ಕೋಡ್ಲಿ ಗ್ರಾಮದಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಸೌಲಭ್ಯ ವಂಚಿತವಾಗಿದೆ. ಸರ್ಕಾರದಿಂದ ಸ್ವಂತ ಕಟ್ಟಡವಿಲ್ಲದೆ ದನದ ಕೊಟ್ಟಿಗೆಯಂತಹ ಖಾಸಗಿ ಮನೆಯಲ್ಲಿ ಬಾಡಿಗೆ ಆಧಾರದ ಮೇಲೆ ಕಿತ್ತೂರ ರಾಣಿ ಚೆನ್ನಮ್ಮ ಶಾಲೆ ನಡೆಸಲಾಗುತ್ತಿದೆ. ಕಟ್ಟಡಕ್ಕಾಗಿ ನಿವೇಶನ ಗುರುತಿಸಲಾಗಿದ್ದು ಸರ್ಕಾರಿ ಮತ್ತು ಖಾಸಗಿ ಜಮೀನು ವಿವಾದದಿಂದಾಗಿ ಕಟ್ಟಡ ನಿರ್ಮಾಣ ನೆನೆಗುದಿಗೆ ಬಿದ್ದಿದೆ ಎನ್ನಲಾಗಿದೆ.
ಈ ವಸತಿ ಶಾಲೆಯಲ್ಲಿರುವ ವಿದ್ಯಾರ್ಥಿನಿಯರು ಪಡಬಾರದ ಕಷ್ಟಗಳನ್ನು ಪಡುವಂತಾಗಿದೆ. ದನದ ಕೊಟ್ಟಿಗೆಯಂತಹ ಕೋಣೆಯಲ್ಲಿ ವಿದ್ಯುತ್ ದೀಪಗಳಿಲ್ಲ. ಶೌಚಾಲಯವಿಲ್ಲ. ಸೊಳ್ಳೆಗಳ ಕಾಟದೊಂದಿಗೆ ಮಲಗುವ ಕೋಣೆಯಲ್ಲಿ ಫ್ಯಾನ್‌ಗಳಿಲ್ಲದೆ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಗಬ್ಬು ವಾಸನೆಯಿಂದ ಕೂಡಿದ ಭೋಜನ ಕೋಣೆ, ಪ್ರತಿಭಾವಂತ ವಿದ್ಯಾರ್ಥಿನಿಯರ ವಿದ್ಯಾಭ್ಯಾಸ ಕತ್ತಲಮಯವಾಗಿದೆ.
ಶಾಸಕ ಡಾ. ಉಮೇಶ ಜಾಧವ್ ಕಳೆದ ವರ್ಷ ಭೇಟಿ ನೀಡಿ ಸರ್ಕಾರದ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಯಾವದೇ ಸೌಲಭ್ಯ ನೀಡಿಲ್ಲ ಎಂದು ವಿದ್ಯಾರ್ಥಿಗಳು ಅವಲತ್ತುಕೊಂಡರು.