ಜಿಲ್ಲೆಯಲ್ಲಿ ನೀಗದ ಶಿಕ್ಷಕರ ಕೊರತೆ
ಕ.ಪ್ರ. ವಾರ್ತೆ , ಯಾದಗಿರಿ , ಜೂ. 12
ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಗ್ರೂಪ್ ಡಿ ಹುದ್ದೆಗಳು ಸೇರಿ ಒಟ್ಟು 1368 ಶಿಕ್ಷಕರ ಖಾಲಿ ಇದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಕಡಿಮೆ ಮಕ್ಕಳಿರುವ ಶಾಲೆಗಳನ್ನು ವಿಲೀನಗೊಳಿಸುವ ಸರ್ಕಾರ, ಹೆಚ್ಚಿನ ಸಂಖ್ಯೆಯ ಮಕ್ಕಳಿರುವಲ್ಲಿ ಶಿಕ್ಷಕರನ್ನು ನೇಮಿಸುವ ಬಗ್ಗೆ ಮಾತ್ರ ಗಮನಹರಿಸುತ್ತಿಲ್ಲ. ಆದ್ದರಿಂದ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಂಜೂರಾದ ಹುದ್ದೆಗಿಂತ ಕಡಿಮೆ ಸಂಖ್ಯೆಯ ಶಿಕ್ಷಕರು ಕಾರ್ಯನಿರ್ವಹಿಸುವಂತಾಗಿದೆ.
ಜಿಲ್ಲೆಯ ಅನೇಕ ಶಾಲೆಗಳು ಒಬ್ಬರೇ ಶಿಕ್ಷಕರನ್ನು ಅವಲಂಬಿಸಿವೆ. ಹೈಸ್ಕೂಲ್ಗಳಲ್ಲಿ ವಿಜ್ಞಾನ, ಗಣಿತ, ಇಂಗ್ಲಿಷ್ ಪ್ರಮುಖ ವಿಷಯಗಳ ಶಿಕ್ಷಕರೇ ಇಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ಹಿನ್ನಡೆಯಾಗಿದೆ.
1137 ಹುದ್ದೆ ಖಾಲಿ: ಶಿಕ್ಷಕರ ವರ್ಗಾವಣೆ ಪರ್ವ ಚಾಲ್ತಿಯಲ್ಲಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪಟ್ಟಿ ಪ್ರಕಟವೂ ಆಗಿದೆ. ಇಲಾಖೆ ಆದೇಶಕ್ಕೆ ಕಾಯುತ್ತಿರುವ ಶಿಕ್ಷಕರು, ಆದೇಶ ಸಿಕ್ಕ ತಕ್ಷಣ ಜಿಲ್ಲೆಯಿಂದ ಸ್ಥಳ ಖಾಲಿ ಮಾಡಲಿದ್ದಾರೆ.
ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಒಟ್ಟು 4725 ಶಿಕ್ಷಕರ ಹುದ್ದೆ ಮಂಜೂರಾಗಿದೆ. 3688 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಆದರಲ್ಲಿ ಕಳೆದ ಮೇವರೆಗೂ 1137 ಶಿಕ್ಷಕರು ಹುದ್ದೆಗಳು ಖಾಲಿ ಇದೆ. ಇನ್ನೂ ಕೆಲವರು ಬೇರೆ ಇಲಾಖೆಗಳಿಗೆ ನಿಯೋಜನೆ ಮೇಲೆ ಹೋಗಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹುದೊಡ್ಡ ಸಮಸ್ಯೆಯಾಗಿ ಪರಣಮಿಸಿದೆ.
ಈ ವರ್ಷದ ವರ್ಗಾವಣೆಯಲ್ಲಿ ಮತ್ತೆ ಶಿಕ್ಷಕರು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಬಯಸುತ್ತಿರುವುದರಿಂದ ಇನ್ನಷ್ಟು ಹುದ್ದೆಗಳು ಖಾಲಿಯಾಗುವ ಸಂಭವಿದೆ. ಆದ್ದರಿಂದ ಪ್ರಾಥಮಿಕ ಶಿಕ್ಷಣದಲ್ಲಿ ಬಹಳಷ್ಟು ಹಿಂದುಳಿಯುತ್ತಲಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
ಹೈಸ್ಕೂಲ್ನಲ್ಲಿ 140: ಪ್ರಾಥಮಿಕ ಶಾಲೆ ಶಿಕ್ಷಕರ ಕೊರತೆ ಒಂದೆಡೆಯಾದರೆ ಇನ್ನೂ ಪ್ರೌಢಶಾಲೆಗಳ ಪರಿಸ್ಥಿತಿಯೂ ಅದೇ ರೀತಿ ಇದೆ. ಸರ್ಕಾರಿ ಶಾಲೆಗಳನ್ನು 1280 ಹುದ್ದೆಗಳು ಮಂಜೂರಾಗಿದ್ದು, 1140 ಕಾರ್ಯನಿರ್ವಹಿಸುತ್ತಿದ್ದು, ಕಳೆದ ಮೇ ಅಂತ್ಯದವೆರಗೂ 140 ಶಿಕ್ಷಕರು ಹುದ್ದೆ ಖಾಲಿ ಇವೆ.
ಗ್ರೂಪ್ ಡಿ. 35 ಹುದ್ದೆ: ಇನ್ನೂ ಶಿಕ್ಷಕರು ಹುದ್ದೆಗಳಲ್ಲದೆ ಜಿಲ್ಲೆಯಾದ್ಯಂತ ಗ್ರೂಪ್ ಡಿ. ನೌಕರರ ಹುದ್ದೆಗಳು ಸಹ ಖಾಲಿ ಇರುವುದರಿಂದ ಕಚೇರಿ ಕೆಲಸಗಳಿಗೆ ಅನೇಕ ತೊಂದರೆಯಾಗುತ್ತಿದೆ.
ಜಿಲ್ಲೆಯಾದ್ಯಾಂತ 144 ಗ್ರೂಪ್ ಡಿ. ಹುದ್ದೆಗಳು ಮಂಜೂರಾಗಿದ್ದು, 109 ನೌಕರರ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 35 ಹುದ್ದೆಗಳು ಖಾಲಿ ಉಳಿದಿವೆ. ತಾಲ್ಲೂಕಿನ ವಿವಿದ ಬಿಇಓ ಕಚೇರಿಗಳಲ್ಲಿ ಹುದ್ದೆಗಳು ಖಾಲಿ ಇವೆ.
ಜಿಲ್ಲೆಯ ಶೈಕ್ಷಣಿಕ ಜಿಲ್ಲೆಯಾಗಿ ಐದಾರು ವರ್ಷಗಳಾದರೂ ಇಲ್ಲಿನ ಶಿಕ್ಷಕರ ಸಮಸ್ಯೆಗೆ ಪರಿಹಾರ ಕಾಣುತ್ತಿಲ್ಲ. ಹೆಚ್ಚಿನ ಸಂಖ್ಯೆಯ ಮಕ್ಕಳಿರುವ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಬಗ್ಗೆ ಗಮನ ಹರಿಸುತ್ತಿಲ್ಲ. ಜಿಲ್ಲೆಯಲ್ಲಿ ಬಹುತೇಕ ಶಾಲೆಗಳಲ್ಲಿ ಮಂಜೂರಾಗಿರುವ ಹುದ್ದೆಗಿಂತ ಕಡಿಮೆ ಸಂಖ್ಯೆಯ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.