ಸಮ್ಮೇಳನಕ್ಕೆ ಯಾದಗಿರಿ ಸಜ್ಜು
ಯಾದಗಿರಿ: ಜೂ.14ರಂದು ತಾಲ್ಲೂಕು ಸಮ್ಮೇಳನದಲ್ಲಿ ಜನರಿಗೆ ಸಾಹಿತ್ಯವನ್ನು ಉಣಬಡಿಸಲು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಜ್ಜಾಗಿದೆ.
ಜಿಲ್ಲೆಯಾದ ನಂತರ ಪ್ರಥಮ ಬಾರಿಗೆ ನಡೆಯುತ್ತಿದ್ದರೂ, ಇದು ಎರಡನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ. ನಗರದ ಶಹಾಪುರ ಪೇಟ್‌ನ ಸಿನ್ನೂರ ಜಿನ್ ಆವರಣದಲ್ಲಿ ಸಾಹಿತ್ಯದ ಜಾತ್ರೆ ನಡೆಯಲಿದೆ. ಶರಣರ ವೇದಿಕೆ ಸಿನ್ನೂರ ಜಿನ್ ಆವರಣದಲ್ಲಿ ವಿಶಾಲವಾದ ವೇದಿಕೆ ನಿರ್ಮಿಸಲಾಗುತ್ತಿದ್ದು, ಅದಕ್ಕೆ ಕುಡಲೂರು ಬಸವಲಿಂಗ ಶರಣರ ಹೆಸರನ್ನು ಇಡಲಾಗಿದೆ. ಮೋಟ್ನಳ್ಳಿ ಹಸನ್ಸಾಬ್ರ ಹೆಸರಿನ ಮಹಾಮಂಟಪ, ಯಲ್ಹೇರಿ ಕೇತಯ್ಯ ಶರಣರ ಹೆಸರಿನ ಮಹಾದ್ವಾರ ಹಾಗೂ ಶರಣ ಕೌಳೂರು ಸಿದ್ಧರಾಮ ಶಿವಯೋಗಿ, ಶರಣ ಗಾಜರಕೋಟ್ ಚನ್ನಪ್ಪಯ್ಯನವರು, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು, ಕಾವ್ಯ ತೀರ್ಥ ಜಿ.ಎಂ. ಗುರುಸಿದ್ಧ ಶಾಸ್ತ್ರಿಗಳ ಹೆಸರಿನಲ್ಲಿ ನಾಲ್ಕು ದ್ವಾರ ನಿರ್ಮಾಣ ಮಾಡಲಾಗಿದೆ. ಸುಮಾರು 2 ಸಾವಿರ ಸಾಹಿತ್ಯಾಸಕ್ತರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಆರು ಕೃತಿಗಳ ಬಿಡುಗಡೆ, ಸಮ್ಮೇಳನಾಧ್ಯಕ್ಷರ ಬದುಕುಬರಹ, ಯಾದಗಿರಿ ತಾಲ್ಲೂಕು ದರ್ಶನ, ಜನಪದ ವಿದ್ವಾಂಸ ಡಾ.ಶಂಭು ಬಳೇಗಾರ ಅವರಿಂದ ಜನಪದ ಸಾಹಿತ್ಯದಲ್ಲಿ ಹಾಸ್ಯ ಮತ್ತು ಶೃಂಗಾರ ವಿಷಯದ ಕುರಿತು ವಿಶೇಷ ಉಪನ್ಯಾಸ, ಯುವ ಕವಿಗಳಿಂದ ಕವಿಗೋಷ್ಠಿಗಳು ನಡೆಯಲಿವೆ.
ಕುಳಿತುಕೊಳ್ಳಲು ಸರಿಯಾದ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾಹಿತ್ಯಾಸಕ್ತರಿಗೆ ಸಾಹಿತ್ಯದ ರಸದೌತಣದ ಜೊತೆಗೆ ರುಚಿಯಾದ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಹುಗ್ಗಿ, ಶೇಂಗಾ ಹಿಂಡಿ, ಮೊಸರು, ಎಣ್ಣೆ ಬದನೆಕಾಯಿ, ಕಾಳು ಪಲ್ಯೆ, ಬೆಳ್ಳುಳ್ಳಿ ಸಾರು, ಅನ್ನ ಸೇರಿದಂತೆ ಹಲವಾರು ಭಕ್ಷ ಭೋಜನ ಉಣಬಡಿಸಲು ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಸಿದ್ಧತೆ ಮಾಡಿಕೊಂಡಿದೆ.
ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದು, ಸಮ್ಮೇಳನವನ್ನು ಅಚ್ಚುಕಟಾಗಿ ನಿರ್ವಹಣೆ ಮಾಡಲು ವಿವಿಧ ಸಮಿತಿ ರಚನೆ ಮಾಡಿದ್ದು, ವಿವಿಧ ಕನ್ನಡಪರ ಸಂಘಟನೆಗಳು ಕೈಜೋಡಿಸಿದ್ದು, ಅವರ ಸಹ ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದ್ದಾರೆ.
ಶ್ರೀನಿವಾಸ್ ಕರ್ಲಿ, ತಾಲೂಕಾಧ್ಯಕ್ಷರು, ಯಾದಗಿರಿ ಕಸಾಪ
ಈ ಸಾಹಿತ್ಯ ಸಮ್ಮೇಳನದಲ್ಲಿ ಗಿರಿ ಸೊಬಗು ಎಂಬ ಪುಸ್ತಕ ಬಿಡುಗಡೆ ಮಾಡುತ್ತಿದ್ದು, ಈ ಪುಸ್ತಕದಲ್ಲಿ ಜಿಲ್ಲೆಗೆ ಸಂಬಂಧಿಸಿದ ಕಲೆ, ಸಾಹಿತ್ಯ ಸಾಂಸ್ಕೃತಿಕ ಇತಿಹಾಸ, ಹಾಗೂ ಜಿಲ್ಲೆಯಲ್ಲಿನ ಪ್ರೇಕ್ಷಣಿಯ ಸ್ಥಳಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ.
ಸಾಹೇಬಗೌಡ ಬಿರಾದಾರ, ಗೌರವ ಕಾರ್ಯದರ್ಶಿ, ತಾಲ್ಲೂಕು ಕಸಾಪ