ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಮಸ್ಯೆಗಳಿಗೆ ಪರಿಹಾರ ಯತ್ನ

Vishwanath S
Updated On : 14 Jun 2014, 11:55 am

ಗುಲ್ಬರ್ಗ: ಈಶಾನ್ಯವಲಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರರಾಗಿ (ಕಾಂಗ್ರೆಸ್ ಬಂಡಾಯ ಅಭ್ಯರ್ಥಿ) ಸ್ಪರ್ಧಿಸಿರುವ ಲಿಂಗರಾಜ ಬಿರಾದಾರ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಮತ ನೀಡಿದ್ದಲ್ಲಿ ದಶಕಗಳಿಂದ ಕಾಡುತ್ತಿರುವ ಸಮಸ್ಯೆಗಳಿಗೆಲ್ಲದಕ್ಕೂ ಪರಿಹಾರ ಹುಡುಕುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು , ಉಪನ್ಯಾಸಕರುಗಳಿಗೆ ಸೂಕ್ತ ಸೇವಾ ಭದ್ರತೆ ಒದಗಿಸುವ ವಿಚಾರದಲ್ಲಿ ತಾವು ಪ್ರಯತ್ನಿಸುವುದಾಗಿ ಹೇಳಿದರಲ್ಲದೆ ಶಿಕ್ಷಕರು, ಉಪನ್ಯಾಸಕರುಗಳ ವೇತನದಲ್ಲಿ ಆಗಿರುವ ವೇತನ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿ ವಿಧಾನ ಸಭೆಯಲ್ಲಿ ಹೋರಾಟ ಮಾಡಲಾಗುವುದು. ವರ್ಗಾವಣೆ ಸಮಸ್ಯೆ, ಅಲ್ಲಿನ ಗೊಂದಲಗಳಿಗೆಲ್ಲದಕ್ಕೂ ತೆರೆ ಎಳೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಯೂ ಹೇಳಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರಿಗೆ ಬಿಎಡ್ ಕಡ್ಡಾಯ ಎಂಬ ಆದೇಶ ಅವೈಜ್ಞಾನಿಕ. ಈಗ ಸೇವೆಯಲ್ಲಿರುವವರಿಗೆ ಈ ಆದೇಶ ಅನ್ವಯಿಸುವುದು ಸರಿಯಲ್ಲ. ಇಂತಹ ಗೊಂದಲಮಯ ಆದೇಶದ ವಿರುದ್ಧ ತಾವು ಹೋರಾಡುವುದಾಗಿ ಹೇಳಿದ ಲಿಂಗರಾಜ 1.4.2006 ರಿಂದ ನೇಮಕಗೊಂಡ ಎಲ್ಲಾ ನೌಕರಿಗೆ ಈ ಹಿಂದೆ ಜಾರಿಯಲ್ಲಿದ್ದಂತೆಯೇ ಪಿಂಚಣಿ ಯೋಜನೆ ಜಾರಿಗೆ ತರುವಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಗುಲ್ಬರ್ಗ ನಗರಕ್ಕೆ ಬಿ ದರ್ಜೆ ಘೋಷಣೆ ಮಾಡುವುದು, ಸರ್ಕಾರಿ ಶಾಲೆಗಳಲ್ಲಿ 50 ಮಕ್ಕಳಿಗೆ ಒಬ್ಬ ಶಿಕ್ಷಕ ಎಂದು ಪರಿಗಣಿಸಿ ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ಜಾರಿಗೆ ತರುವುದು, ಹಾಗೂ 70 ಮಕ್ಕಳಿಗೆ ಒಬ್ಬ ಶಿಕ್ಷಕ ನೀತಿ ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ತರುವಲ್ಲಿಯೂ ಯತ್ನ ಮಾಡುವುದಾಗಿ ಅವರು ಹೇಳಿದ್ದಾರೆ.
ಬಿಇಓ ಕಚೇರಿಗಳಲ್ಲಿನ ಸಿಬ್ಬಂದಿ ಕೊರತೆ ಹೋಗಲಾಡಿಸಲು ಶ್ರಮ ವಹಸಿರುವುದಾಗಿ ಹೇಳಿರುವ ಲಿಂಗರಾಜ ಶಿಕ್ಷಕ ಬಂಧುಗಳು ಈ ಬಾರಿ ತಮ್ಮ ಮತ ಶಿಕ್ಷಣ ಇಲಾಖೆಯಲ್ಲಿನ ಅನುಭವಿ ಕೆಲಸಗಾರನಿಗೆ ನೀಡುವ ಮೂಲಕ ಬೆಂಬಲಿಸುತ್ತಾರೆ ಎಂಬ ಭರವಸೆ ತಮಗಿದೆ ಎಂದು ಹೇಳಿದ್ದಾರೆ.
ಮತಯಾಚನೆ
ಶಿಕ್ಷಣ ಕ್ಷೇತ್ರ ದೇಶದಲ್ಲಿ ಪ್ರಜ್ಞಾವಂತ ನಾಗರಿಕರನ್ನು ಸೃಷ್ಟಿ ಮಾಡುತ್ತದೆ. ಅಭಿವೃದ್ಧಿ ಮತ್ತು ಕ್ರೀಯಾಶಿಲತೆ ಸೃಷ್ಟಿ ಮಾಡುವವರೇ ಶಿಕ್ಷಕರು. ಶಿಕ್ಷಕರ ಸಮಸ್ಯೆ ಅರಿತ ಸರ್ಕಾರ ಅದರ ಬಗ್ಗೆ ಚರ್ಚಿಸಲು ಶಿಕ್ಷಕ ಪ್ರತಿನಿಧಿಯನ್ನು ವಿಧಾನ ಪರಿಷತ್ತಿಗೆ ಆರಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಲಿಂಗರಾಜ ಬಿರಾದರ ಹೇಳಿದರು. ನಗರದ ಸರ್ವಜ್ಞ ಪಿ.ಯು ಕಾಲೇಜು, ಶ್ರೀ ಗುರು ಪಿ.ಯು ಕಾಲೇಜು, ಶಂಕರಗೌಡ ಡಿ.ಇಡಿ ಕಾಲೇಜು, ನಳಂದಾ ಪಿ.ಯು ಕಾಲೇಜು, ಸರ್ಕಾರಿ ಪ್ರೌಢ ಶಾಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ಅವರು ಪ್ರಚಾರ ನಡೆಸಿ ಶಿಕ್ಷಕರಲ್ಲಿ ಮತ ಯಾಚಿಸಿದರು. ಜಾತ್ಯಾತೀತ ಮತ್ತು ಪ್ರಜಾತಂತ್ರ ವ್ಯವಸ್ಥೆ ಗೌರವಿಸುತ್ತೇನೆ. ಶಿಕ್ಷಕರ ಸಮಸ್ಯೆ ಮತ್ತು ಅವರ ಭಾವನೆ ಅರಿತು ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಅವರು ಶಿಕ್ಷಕರಿಗೆ ಭರವಸೆ ನಿಡಿದರು. ಪ್ರಚಾರ ಸಭೆಯಲ್ಲಿ ರಾಜೇಂದ್ರ ರಾಜವಾಳ, ಜೀತೇಂದ್ರ ಎಸ್.ರಕೀಬ್, ರಾಜಾ ಹುಲಿ, ಚನ್ನಮಲ್ಲಮ್ಮ ಕಲ್ದೆ, ಭಗವಾನ ಸಿಂಗ್ ರಜಪೂತ, ಬಸವರಾಜ ಬಿರಾದರ, ಸಾಯಿಬಣ್ಣ ಕೊಲ್ಲುರು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement