ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವರುಣ ಕೃಪೆಗೆ ಕಾದು ಕುಳಿತ ರೈತ

Vishwanath S
Updated On : 16 Jun 2014, 10:56 am

ಕ.ಪ್ರ. ವಾರ್ತೆ ,  ಯಾದಗಿರಿ ,  ಜೂ. 15
ಜಿಲ್ಲೆಯ ರೈತ ಸಮುದಾಯ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಬಿತ್ತನೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ವರುಣನ ಕೃಪೆ ಆಗಲಿಲ್ಲ ಎಂಬ ಆತಂಕದಲ್ಲಿದ್ದಾರೆ.
ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮೃಗಶಿರಾ ಮಳೆ ಆರಂಭವಾಗುತ್ತದೆ. ಅದಕ್ಕಿಂತ ಮುಂಚೆ ರೋಹಿಣಿ ಮಳೆಯಿಂದ ಭೂಮಿಯಲ್ಲಿ ತೇವಾಂಶ ಬೀಳುತ್ತಿತ್ತು. ಮೃಗಶಿರಾ ಮಳೆ ಆರಂಭವಾದೊಡನೆ ರೈತರು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದರು. ಆದರೆ ಈ ವರ್ಷವೂ ರೋಹಿಣಿ ಮಳೆ ಕೈ ಕೊಟ್ಟಿದೆ. ಇನ್ನು ಮೃಗಶಿರಾ ಮಳೆಯೂ ವಿಳಂಬವಾಗಿದೆ. ಹೀಗಾಗಿ ಹದ ಮಾಡಿರುವ ಹೊಲಗಳು ಬಿತ್ತನೆಯಾಗದೆ ಹಾಗೆಯೇ ಉಳಿದಿವೆ.
ಕಳೆದ ಮೂರು ವರ್ಷಗಳಿಂದ ಮಳೆಯ ಆಟಕ್ಕೆ ನಲುಗಿರುವ ರೈತರು, ಈ ಬಾರಿಯಾದರೂ ಒಳ್ಳೆಯ ಮಳೆ ಆಗಬಹುದು ಎಂಬ ಆಶಾಭಾವ ಹೊಂದಿದ್ದಾರೆ. ಬಿತ್ತನೆಗಾಗಿ ಭೂಮಿಯನ್ನು ಹದ ಮಾಡಿಟ್ಟುಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಇನ್ನೂ ಮಳೆಯ ಆಗಮನ ಆಗದೇ ಇರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.
ನೆಪ ಮಾತ್ರದ ಮಳೆ: ಒಂದು ಬಾರಿ ಮಾತ್ರ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಉತ್ತಮ ಮಳೆ ಬಿದ್ದಿದೆ. ಆದರೆ ಬಿತ್ತನೆಗೆ ಅಷ್ಟು ಮಳೆ ಸಾಕಾಗುವುದಿಲ್ಲ. ಸತತ ಎರಡು ದಿನವಾದರೂ ಮಳೆ ಸುರಿದರೆ ಮಾತ್ರ ಬಿತ್ತನೆಗೆ ಮುಂದಾಗಬಹುದು ಎನ್ನುವ ಮಾತುಗಳನ್ನು ರೈತರು ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಆರಂಭದಲ್ಲಿ ಹೆಸರು ಬಿತ್ತನೆ ಮಾಡುವುದು ವಾಡಿಕೆ. ಬಹುತೇಕ ಪ್ರದೇಶಗಳಲ್ಲಿ ಹೆಸರು ಬಿತ್ತನೆ ಮಾಡಲಾಗುತ್ತದೆ. ಕೇವಲ 45 ದಿನಗಳಲ್ಲಿ ಕಟಾವಿಗೆ ಬರುವ ಹೆಸರಿನಿಂದ, ರೈತರ ಮುಂದಿನ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಅನುಕೂಲ ಆಗುತ್ತದೆ.
ಸದ್ಯಕ್ಕೆ ಹೆಸರು ಬಿತ್ತನೆ ಮಾಡಲು ಸಕಾಲ. ಈಗ ಹೆಸರು ಬಿತ್ತನೆ ಮಾಡಿದರೆ, ಜುಲೈ ಮೂರನೇ ವಾರದಲ್ಲಿ ಹೆಸರು ಕಟಾವಿಗೆ ಬರುತ್ತದೆ. ನಂತರ ಜೋಳ, ಹತ್ತಿ ಬೆಳೆಯುವುದಕ್ಕೆ ಅನುಕೂಲ. ಅಲ್ಲದೇ ಈಗಲೇ ಹೆಸರು ಬಿತ್ತನೆ ಮಾಡದೇ ಇದ್ದರೆ, ಇಳುವರಿಯ ಮೇಲೆಯೂ ಪರಿಣಾಮ ಬೀರುವ ಭೀತಿಯಿದೆ.
1,535 ಕ್ವಿಂಟಾಲ್ ದಾಸ್ತಾನು; ಈ ಬಾರಿ ಜಿಲ್ಲೆಯ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯ ಗುರಿ ಹೊಂದಲಾಗಿದ್ದು, ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು 1,535 ಕ್ವಿಂಟಲ್ ಹೆಸರಿನ ಬೀಜವನ್ನು ಕೃಷಿ ಇಲಾಖೆ ದಾಸ್ತಾನು ಮಾಡಿಕೊಂಡಿದೆ.
ಕಳೆದ ವರ್ಷವೂ ಮುಂಗಾರು ಮಳೆ ತಡವಾಗಿ ಶುರುವಾಗಿದ್ದರಿಂದ ಬಹುತೇಕ ರೈತರು, ಹೆಸರು ಬಿತ್ತನೆಗೆ ಹಿಂದೇಟು ಹಾಕಿದ್ದರು. ಹೀಗಾಗಿ ಹೆಸರಿನ ಇಳುವರಿ ಕಡಿಮೆ ಆಗಿತ್ತು. ಈ ಬಾರಿಯೂ ಇನ್ನೊಂದು ವಾರದಲ್ಲಿ ಮಳೆ ಆಗದೇ ಇದ್ದರೆ, ಹೆಸರು ಬಿತ್ತನೆ ಪ್ರಮಾಣ ಕಡಿಮೆ ಆಗಬಹುದು ಎನ್ನುತ್ತದೆ ಕೃಷಿ ಇಲಾಖೆ. ಜಿಲ್ಲೆಯ ಹೆಸರಿಗೆ ಸಾಕಷ್ಟು ಬೇಡಿಕೆ ಇದ್ದು, ಇಲ್ಲಿ ಬೆಳೆಯುವ ಹೆಸರನ್ನು ಪಂಜಾಬ್, ಹರಿಯಾಣ, ಗುಜರಾತ್, ಪಶ್ಚಿಮ ಬಂಗಾಳ, ಆಂಧ್ರಪ್ರದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರಿಗೂ ಸಾಕಷ್ಟು ಲಾಭ ದೊರೆಯುತ್ತದೆ. ಹೀಗಾಗಿ ಬಹುತೇಕ ರೈತರು ಹೆಸರು ಬಿತ್ತನೆಗೆ ಒಲವು ತೋರುತ್ತಾರೆ. ಆದರೆ ಈ ಬಾರಿ ಮಳೆಯ ವಿಳಂಬವಾಗುತ್ತಿದೆ.
ನೀರು ಹರಿಸುವುದು ವಿಳಂಬ ಸಾಧ್ಯತೆ
ಶಹಾಪುರ, ಸುರಪುರ ತಾಲೂಕಿನಲ್ಲಿಯೂ ಈ ವರ್ಷ ನಾರಾಯಣಪುರ ಎಡದಂಡೆ ಕಾಲುವೆ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಲುವೆಗೆ ನೀರು ಹರಿಸುವುದೂ ವಿಳಂಬವಾಗುವ ಸಾಧ್ಯತೆ ಇದೆ. ಇನ್ನು ಯಾದಗಿರಿ ತಾಲೂಕಿನ ರೈತರು, ಮಳೆಯಾಶ್ರಿತ ಕೃಷಿಯನ್ನೇ ಮಾಡುತ್ತಿದ್ದು, ಒಟ್ಟಾರೆ ಜಿಲ್ಲೆಯ ರೈತರು ಮಳೆಯ ಆಗಮನಕ್ಕಾಗಿ ಕಾಯುವಂತಾಗಿದೆ.
ಉತ್ತಮ ರಸಗೊಬ್ಬರ ವಿತರಣೆಗೆ ಮನವಿ
ಕಳೆದ ವರ್ಷ ಕಳಪೆ ಮಟ್ಟದ ಬಿತ್ತನೆ ಬೀಜಗಳನ್ನು ವಿತರಣೆ ಮಾಡಿದ ಪರಿಣಾ ರೈತರು ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಈ ವರ್ಷ ಗುಣಮಟ್ಟದ ಬೀಜಗಳನ್ನು ಪೂರೈಕೆ ಮಾಡುವಂತೆ ಆಗ್ರಹಿಸಿ ಯುವ ಭಾರತ ಕ್ರಾಂತಿ ದಳದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಸನ್ನದ್ಧರಾಗಿದ್ದಾರೆ. ರೈತರಿಗೆ ಬೀಜ, ರಸ ಗೊಬ್ಬರದ ಕೊರತೆಯಾಗದಂತೆ ವಿತರಣೆಗೆ ಕ್ರಮಕೈಗೊಳ್ಳಬೇಕು. ಸೂಕ್ತ ಸಮಯದಲ್ಲಿ ಅನ್ನದಾತರಿಗೆ ಬೀಜ, ರಸಗೊಬ್ಬರ ದೊರೆಯದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಮೋಸ ಮಾಡುವ ಮೂಲಕ ದಲ್ಲಾಳಿಗಳು ಕಳಪೆ ಮಟ್ಟದ ಬೀಜಗಳನ್ನು ವಿತರಿಸುತ್ತಾರೆ. ಇದರ ಬಗ್ಗೆ ಕೃಷಿ ಇಲಾಖೆ ಎಚ್ಚರ ವಹಿಸುವಂತೆ ಸೂಚಿಸಲು ತಿಳಿಸಿದರು.ಜಿಲ್ಲೆಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಗುಣಮಟ್ಟದ ಬೀಜ, ಗೊಬ್ಬರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆಗ್ರೋ ಏಜೆನ್ಸಿಗಳಲ್ಲಿ ಸರ್ಕಾರದ ದರದಂತೆ ನಿಗದಿತ ಸಮಯದಲ್ಲಿ ವಿತರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಹತ್ತಿ ಬೀಜ ಖರೀದಿ: ಎಚ್ಚರಿಕೆಗೆ ಸೂಚನೆ
ರೈತರು ಯಾವುದೇ ಹತ್ತಿ ಬೀಜ ಖರೀದಿಸುವಾಗ ಅಧಿಕೃತ ಪರವಾನಗಿ ಪತ್ರ ಹೊಂದಿದ ಮಾರಾಟಗಾರರ ಹತ್ತಿರ ಖರೀದಿಸಿ, ರಸೀದಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಕೃಷಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಮಧ್ಯವರ್ತಿಗಳಿಂದ ಅಥವಾ ಅಪರಿಚಿತ ವ್ಯಕ್ತಿಗಳಿಂದ ಬೀಜ ಖರೀದಿ ಮಾಡಬಾರದೆಂದು ಬಿ.ಟಿ. ಹತ್ತಿ ಬೀಜದ ಉತ್ತಮ ಗುಣಮಟ್ಟ ಮತ್ತು ಹೆಚ್ಚಿನ ಇಳುವರಿ ಕೊಡುವ ಸಾಮರ್ಥ್ಯ ಹೊಂದಿದ 15ರಿಂದ 20 ಕಂಪನಿಯ ಬೀಜಗಳು ಮಾರಾಟಕ್ಕೆ ಲಭ್ಯವಾಗಲಿವೆ. ರೈತರು ಒಂದೇ ಕಂಪನಿಯ ಅಥವಾ ಒಂದೇ ಬ್ರ್ಯಾಂಡಿನ ಬೀಜ ಕೇಳುವುದರಿಂದ ಅದರ ಹೆಸರಿನಲ್ಲಿ ಬೇರೆ ನಕಲಿ ಬೀಜ ಮಾರಾಟಕ್ಕೆ ಬರುವ ಸಾಧ್ಯತೆಗಳಿವೆ. ಬಿಟಿ ಹತ್ತಿ ಬೀಜದ ಯಾವುದೇ ಕೊರತೆ ಇರುವುದಿಲ್ಲ. ಆದ್ದರಿಂದ ರೈತರು ಯಾವುದೇ ಆತಂಕ ಪಡುವುದು ಬೇಡ. ಹಲವಾರು ಕಂಪನಿಗಳ ಉತ್ತಮ ಗುಣಮಟ್ಟದ ಬಿಟಿ ಹತ್ತಿ ಬೀಜ ರೈತರಿಗೆ ಲಭ್ಯವಾಗುವಂತೆ ಮತ್ತು ಗುಣಮಟ್ಟ ಕಾಪಾಡುವಂತೆ ಕೃಷಿ ಇಲಾಖೆಯಿಂದ ಎಲ್ಲ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement