ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹತ್ತರ ಕನ್ನಡಕ್ಕೆ... ಗುಣಗ್ರಾಣಿ ಪ್ರಶಸ್ತಿ ಪ್ರದಾನ

Vishwanath S
Updated On : 16 Jun 2014, 10:55 am

ಗುಲ್ಬರ್ಗ: ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಮಗು ಮಾತೆಯ ಅಮೃತದಂತೆಯೇ ಸುಲಲಿತವಾಗಿ ಜ್ಞಾನ ಪಡೆಯುತ್ತದೆ. ಮಗುವಿನ ಪ್ರತಿಭೆ ಸಹಜ, ಸ್ವಾಭಾವಿಕವಾಗಿ ಅರಳಲು ಪಾಲಕರು, ಶಿಕ್ಷಕರು ಸಹಕರಿಸಬೇಕು ಎಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು. ನಗರದ ಎಚ್‌ಕೆಇ ಸಂಸ್ಥೆಯ ಎಂಎಸ್‌ಐ ಕಾಲೇಜಿನ ಸಭಾಂಗಣದಲ್ಲಿ ಹತ್ತನೇ ತರಗತಿಯ ಕನ್ನಡದಲ್ಲಿ ಉತ್ತಮ ಅಂಕ ಪಡೆದ ಹಿನ್ನೆಲೆಯಲ್ಲಿ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯು ಏರ್ಪಡಿಸಿದ್ದ ಹತ್ತರ ಕನ್ನಡಕೆ... ಗುಣಾಗ್ರಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು. ಅಂಕಗಳೇ ಎಲ್ಲವೂ ಅಲ್ಲ, ಅಂಕಗಳಿಗೂ ಮೀರಿದ ಪ್ರತಿಭಾ ಸೆಲೆ ಮನದಾಳದಲ್ಲಿರುತ್ತದೆ. ಸಾಧಿಸುವ ಛಲ, ಆತ್ಮ ಬಲವಿದ್ದರೆ ಸ್ವಾಭಿಮಾನದ ಬದುಕಿಗೆ ಯಾವುದೇ ಅಡ್ಡಿ ಇರುವುದಿಲ್ಲ. ಮಗುವಿನ ಮೇಲೆ ಒತ್ತಡ ಹೇರುವುದರಿಂದ ಅವರ ಮನದ ಒತ್ತಾಸೆಯನ್ನು ಕಸಿದುಕೊಂಡಾಂತಾಗುತ್ತದೆ ಎಂದು ಹೇಳುತ್ತಾ ವಚನ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳ ಬಗ್ಗೆ ತಮ್ಮ ಮುಕ್ತ ಕಂಠದಿಂದ ಶ್ಲಾಘಿಸಿದರು. ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಸಾಹಿತಿ ಮುಡಬಿ ಗುಂಡೇರಾವ್ ಹಾಗೂ ಅಕಾಡೆಮಿಯ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಪ್ರಾಚಾರ್ಯ ಪ್ರೊ. ನರೇಂದ್ರ ಬಡಶೇಷಿ ಅಧ್ಯಕ್ಷತೆ ವಹಿಸಿದ್ದರು. ಕವಿ ರಾಜಶೇಖರ ಯಾಳಗಿ, ಶಂಕರಗೌಡ, ಶಿವರಾಜ ಅಂಡಗಿ, ಮಹಾದೇವ ಬಡಾ ಅವರು ಹಾಡಿದ ಜನಪದ ಹಾಡು ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಮನೆ ಮಾಡಿದ ಭ್ರಷ್ಟಾಚಾರವನ್ನು ಬಿಂಬಿಸುವ ಮೂಲಕ ಜನಮನ ರಂಜಿಸಿತು. ಬಿಜೆಪಿಯ ಯುವ ಮುಖಂಡ ಪ್ರವೀಣ ತೆಗನೂರ, ಎಂ.ಬಿ. ನಿಂಗಪ್ಪ, ಶಿವರಾಜ ಅಂಡಗಿ, ನಾಗೇಂದ್ರ ಮಾಡ್ಯಾಳೆ, ಬಿ.ಎಂ. ಪಾಟೀಲ ಕಲ್ಲೂರ, ಶ್ರೀಕಾಂತ, ಹಣಮಂತ ಅಟ್ಟೂರ, ಎಸ್.ಎ. ವಡ್ಡಣಕೇರಿ, ಪೂಜಾ, ಅಯ್ಯಣ್ಣ ನಂದಿ, ಚಿಕ್ಕಣ್ಣ ಬೆಳಮಗಿ, ರಾಜಕುಮಾರ ಕುರ್ಲೆ, ಬಸವರಾಜ ಪುಣ್ಯಶೆಟ್ಟಿ, ವೀರಯ್ಯಸ್ವಾಮಿ ಚಿತ್ತಾಪುರ, ಬಾಲಚೇಂದ್ರ ಯಾದವ್ ಸೇಡಂ, ಶಿವಕುಮಾರ ಇದ್ದರು. ಸಂಗೀತ ಕಲಾವಿದ ಮಾಲಿಪಾಟೀಲ ಪ್ರಾರ್ಥಿಸಿದರು. ನಿಂಗಪ್ಪ ವಂದಿಸಿದರು.
ಶರಣ ಬಸವೇಶ್ವರ ಶಾಲೆಗೆ ಬಹುಮಾನ
ಗುಲ್ಬರ್ಗ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ಶರಣ ಬಸವೇಶ್ವರ ಪಬ್ಲಿಕ್ ಶಾಲೆಯ 8ನೇ ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ. ಭೂಮಿ ಸಂರಕ್ಷಣೆ ಚಿತ್ರಕಲೆಯಲ್ಲಿ ಪ್ರವೀಣ್ ಜಿ. ಮಠಪತಿ ಪ್ರಥಮ, ಜಾಗತಿಕ ಪರಿಸರ ಬದಲಾವಣೆಗಳು ಹಾಗೂ ಅದರ ಪರಿಣಾಮಗಳು ಭಾಷಣದಲ್ಲಿ ಹಾಗೂ ಪರಿಸರ ಮಾಲಿನ್ಯ ಮತ್ತು ಪರಿಹಾರೋಪಾಯಗಳು ಆಶುಭಾಷಣದಲ್ಲಿ ಸ್ಫೂರ್ತಿ ಎಸ್. ಕಮರಡಗಿ ಪ್ರಥಮ, ಆಯೇಶಾ ಸಮ್ರಿನ್ ಭಾಷಣದಲ್ಲಿ ತೃತೀಯ, ಅಪೂರ್ವ ಸಿ. ಮೆಡೆಗಾರ ಭಾಷಣ ಹಾಗೂ ಆಶುಭಾಷಣ ವಿಶೇಷ ಬಹುಮಾನ 8ನೇ ತರಗತಿ ಸಾಕ್ಷಿ ಎ. ಬಿಡವೆ ಚಿತ್ರಕಲೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾಳೆ. ಡಾ. ಶರಣಬಸಪ್ಪ ಅಪ್ಪ ವಿಜೇರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆಂದು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧರಣಿ ಸತ್ಯಾಗ್ರಹ ಇಂದು
ಗುಲ್ಬರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ನಡೆದ ಅವ್ಯವಹಾರವನ್ನು ಸಿಒಡಿ ತನಿಖೆಗೆ ಒತ್ತಾಯಿಸಿ ಜೂ.16ರಂದು ಬೆಳಗ್ಗೆ 11 ಗಂಟೆಗೆ ನಗರದ ಸೂಪರ್ ಮಾರ್ಕೆಟ್ ಕಾಮಂತ್ ಹೋಟೆಲ್‌ನಿಂದ ರೈತರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ಸಿಪಿಐ(ಎಂ) ತಿರ್ಮಾನಿಸಿದೆ ಎಂದು ಜಿಲ್ಲಾ ಮುಖಂಡ ಭೀಮಶೆಟ್ಟಿ ಯಂಪಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಳೆ ಮಕ್ಕಳಿಗೆ ಅವಧಿ ಮುಗಿದ ಕೂಳು
ಆಳಂದ: ಬಡ ಮಕ್ಕಳಿಗೆ ಸರ್ಕಾರ ಅಂಗನವಾಡಿ ಮತ್ತು ಆರೋಗ್ಯ ಇಲಾಖೆಯ ಮೂಲಕ ಪೂರೈಸುತ್ತಿರುವ ಔಷಧಿ, ಪೌಷ್ಠಿಕ ಆಹಾರವೂ ಸಮಯಕ್ಕೆ ವಿತರಣೆ ಮಾಡದೆ, ಅವಧಿ ಮುಗಿದ ಮೇಲೆ ವಿತರಣೆ ಮಾಡುತ್ತಿರುವುದು ಅಲ್ಲದೆ ಕಾಳ ಸಂತೆಗೆ ಮಾರಾಟ ಮಾಡುವ ಪ್ರಕರಣ ತಾಲೂಕಿನಲ್ಲಿ ಆಗಾಗ ನಡೆಯುತ್ತಲೇ ಇದೆ.
ಆದರೂ ಇದುವರೆಗೂ ತಪ್ಪಿತಸ್ಥ ಸಿಬ್ಬಂದಿಗಳ ಮೇಲೆ ಅಥವಾ ಕುಮಕ್ಕು ನೀಡುವ ಅಧಿಕಾರಿಗಳ ಮೇಲೆ ಯಾವುದೇ ಕಠಿಣ ಕ್ರಮ ನಡೆಯದೆ ಇರುವುದು ಆಡಳಿತ ವ್ಯವಸ್ಥೆಗೆ ನಾಚಿಕೆ ಪಡುವಂತೆ ಮಾಡುತ್ತಿದೆ.
ತಾಪಂ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ ಊರಲ್ಲೇ ಅಂಗನವಾಡಿ ಮಕ್ಕಳಿಗೆ ಅವಧಿ ಮುಗಿದ ಪೌಷ್ಠಿಕ ಆಹಾರ ವಿತರಿಸಿದ ಪ್ರಕರಣ ನಡೆದಿದೆ. ಭೂಸನೂರ ಪಂಚಶೀಲ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಅವಧಿ ಮುಗಿದ ಪೌಷ್ಠಿಕ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದು ಗ್ರಾಮದ ದಲಿತ ಸೇನೆಯ ಕಾರ್ಯಕರ್ತರು ಪತ್ತೆ ಹಚ್ಚಿ ಪಾಕೇಟ್‌ಗಳೊಂದಿಗೆ ಸಿಡಿಪಿಒ ಅವರನ್ನು ಭೇಟಿ ಮಾಡಿ ದೂರಿದ್ದಾರೆ. ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಮೇಲಾಧಿಕಾರಿಗಳ ಕುಮ್ಮಕ್ಕಿನಿಂದಲೇ ನಡೆಯುತ್ತಿವೆ ಎಂದು ಬಹಿರಂಗವಾಗಿ ಮಕ್ಕಳ ಪೋಷಕರು ದೂರಿದ್ದಾರೆ.
ಇಲ್ಲಿನ ಕೇಂದ್ರದಲ್ಲಿ 50ಕ್ಕೂ ಹೆಚ್ಚು ಮಕ್ಕಳಿದ್ದು, ಅಕ್ಕಿ ಖೀರ್ ಆಹಾರವನ್ನು ಕಾರ್ಯಕರ್ತೆ ಮತ್ತು ಸಹಾಯಕಿ ಮಕ್ಕಳಿಗೆ ಹಂಚಿದ್ದಾರೆ. ಈ ಆಹಾರ ಪಾಕೇಟ್, 2014ರ ಫೆಬ್ರವರಿ ತಿಂಗಳಲ್ಲಿ ತಯಾರಿಸಿದ್ದು, ಏಪ್ರಿಲ್‌ಗೆ ಅವಧಿ ಮುಗಿದಿದೆ.  ಈ ಕೃತ್ಯ ಎಸಗಿತ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಅಮಾನತುಗೊಳಿಸುವಂತೆ ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.  
ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ
ಆಳಂದ: ಶಾಲಾ ಕಟ್ಟಡ ಜೊತೆಗೆ ಶೌಚಾಲಯ ಮತ್ತು ಕುಡಿವ ನೀರು ಪೂರೈಕೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಶಾಸಕ ಬಿ.ಆರ್. ಪಾಟೀಲ್ ಭೂ ಸೇನಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ತಾಪಂ ಕಚೇರಿಯಲ್ಲಿ ನಡೆದ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಕಳೆದ ಐದಾರು ವರ್ಷಗಳಿಂದಲೂ ಭೂಸೇನಾ ನಿಗಮಕ್ಕೆ ನೀಡಿದ ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಕಲ್ಪಿಸಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದರು.
ಅನೇಕ ಗ್ರಾಮಗಳಲ್ಲಿ ಕಾಮಗಾರಿಗಳು ನೆನೆಗುದ್ದಿಗೆ ಬಿದ್ದಿವೆ. ಇಲ್ಲದ ನೆಪ ಹೇಳಿ ಜಾರಿಕೊಂಡರೆ ಸಹಿಸುವುದಿಲ್ಲ ಎಂದು ನಿಗಮದ ಸಹಾಯಕ ನಿರ್ದೇಶಕ ವಿ.ವಿ. ಕಲಗುರ್ಕಿ ಮತ್ತು ಅವರ ಎಂಜಿನಿಯರ್ ಕೆ.ಟಿ. ಮಾದಶೆಟ್ಟಿ, ಎಸ್.ಎಂ. ನಾಯಕ ಅವರನ್ನು ಸೂಚಿಸಿದರು. ಆರ್ಥಿಕ ಪ್ರಗತಿಗೆ ಶಿಕ್ಷಣ ಬಹುದೊಡ್ಡ ಅಸ್ತ್ರವಾಗಿದೆ. ಶಿಕ್ಷಣ ಸಮಾನತೆ ತರವುಲ್ಲಿ ದೊಡ್ಡ ಕೆಲಸ ಮಾಡುತ್ತಿದೆ. ಶಿಕ್ಷಣದಲ್ಲಿ ಸಾಧನೆ ಮಾಡಿದ್ದಾರೆ. ದೊಡ್ಡ  ಹುದ್ದೆಗಳಿಗೆ ಹೋಗಲು ಅನುಕೂಲವಾಗುತ್ತದೆ ಎಂದರು.
ಬಿಇಒ ವೆಂಕಯ್ಯ ಇನಾಮದಾರ ಹಲವೆಡೆ ಕಾಮಗಾರಿ ಪಡೆದ ಭೂಸೇನಾ ಅಧಿಕಾರಿಗಳು ಶೌಚಾಲಯ, ಶಾಲಾ ಕಟ್ಟಡ ಕಾಮಗಾರಿ ಬಾಕಿ ಉಳಿಸಿಕೊಂಡಿದ್ದು, ಇದರಿಂದ ತೊಂದರೆಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು. ಬಿಆರ್‌ಸಿ ಸಮನ್ವಯಾಧಿಕಾರಿ ಬಸವಂತರಾಯ ಜಿಡ್ಡೆ, ಸರ್ಕಾರಿ ಬಾಲಕರ ಕಾಲೇಜಿನ ಪ್ರಾಚಾರ್ಯ ಶಿವಶರಣಪ್ಪಾ ಮುಳೆಗಾಂವ, ನಿಂಬರಗಾ, ಮಾದನಹಿಪ್ಪರಗಾ, ಯಳಸಂಗಿ ಪ್ರಚಾರ್ಯಾರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement