ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ಗುಲ್ಬರ್ಗ: ಗೊಂಡ, ಕಾಡುಕುರುಬ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಿಕೆಯ ತಾರತಮ್ಯದ ವಿರುದ್ಧ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಕಿರುಕುಳ ಕೊಡುತ್ತಿರುವುದು ಖಂಡಿಸಿ, ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹವನ್ನು ಜೂ.23ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಗೊಂಡ, ಕಾಡು ಕುರುಬ ಸಂಘದ ಅಧ್ಯಕ್ಷ ಮಹಾಂತೇಶ ಎಸ್.ಕೌಲಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ರಾಜ್ಯ ಪತ್ರದಲ್ಲಿ ಗೊಂಡ ಮತ್ತು ಕಾಡು ಕುರುಬ ಪರಿಶಿಷ್ಟ ಪಂಗಡದಲ್ಲಿ ಇದ್ದರೂ ಗುಲ್ಬರ್ಗ, ಬೀದರ, ಯಾದಗಿರಿ ಜಿಲ್ಲೆಯಲ್ಲಿ ಜಾತಿ ಪ್ರಮಾಣ, ಸಿಂಧುತ್ವ ಪ್ರಮಾಣ ಪತ್ರ ನಿರಾಕರಣೆ ಮಾಡಿ ತಾರತಮ್ಯ ಮಾಡಲಾಗುತ್ತಿದೆ ಎಂದರು. ಜೂ.23ರಂದು ಜಗತ್ ವೃತ್ತದಿಂದ ತಿಮ್ಮಾಪುರ ವೃತ್ತದ ಮೂಲಕ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸಿದ್ದಪ್ಪ ರುಸ್ತಂಪೂರ, ಕಾರ್ಯದರ್ಶಿ ದೇವರಾಜ ಪೂಜಾರಿ, ಸಹ ಕಾರ್ಯದರ್ಶಿ ನಾಗೇಂದ್ರಪ್ಪ ಪೂಜಾರಿ, ಖಜಾಂಚಿ ಹೈಯಾಳಪ್ಪ ಪೂಜಾರಿ ಇದ್ದರು.