ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಾತಿ ಸೀಮಿತ ಯೋಜನೆ 'ಕೈ' ಬಿಡಲಿ

Lingaraj Badiger
Updated On : 17 Jun 2014, 10:55 am

ಗುಲ್ಬರ್ಗ: ತಮ್ಮ ಸಿಎಂ ಅವಧಿಯಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲ ರೈತರಿಗೆ ಹೆಚ್ಚಿನ ಪ್ರೋತ್ಸಾಹಧನ ನೀಡಲಾಗಿತ್ತು. ಆದರೀಗ ಹೈನುಗಾರಿಕೆ ಮಾಡುವ ದಲಿತರಿಗೇ ಪ್ರೋತ್ಸಾಹ ನೀಡುವ ಪದ್ಧತಿ ಜಾರಿಗೆ ತಂದಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಸಂಸದ ಬಿ.ಎಸ್. ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರು ಡೇರಿಗೆ ಹಾಲು ಕೊಟ್ಟಲ್ಲಿ ಅಂತಹವರಿಗೆ ಉಳಿದವರಿಗಿಂತ 2 ಸಹಾಯ ಧನ ಜಾಸ್ತಿ ನೀಡುವುದು ಸರಿಯಾದ ಕ್ರಮವಲ್ಲ. ಹೈನುಗಾರಿಕೆ ಮಾಡುವವರಲ್ಲಿ ಅದೆಂತಹ ಜಾತಿ ಭೇದ, ಹಾಲಿನಲ್ಲೂ ಜಾತಿಭೇದದ ಹುಳಿ ಹಿಂಡುವ ಇಂತಹ ಪ್ರಯತ್ನಗಳನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಯೋಜನೆ ಕೈಬಿಡಿ: ಈ ಬಗ್ಗೆ ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗುವುದು. ಸರ್ಕಾರ ತಕ್ಷಣ ಇಂತಹ ಜಾತಿ ಭೇದ ಹೆಚ್ಚಿಸುವ ಯೋಜನೆಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಎಲ್ಲ ರೈತರು, ಹೈನುಗಾರರು ಪ್ರೋತ್ಸಾಹ ಧನ ಹೆಚ್ಚಿಗೆ ಪಡೆಯಬೇಕು. ಅಂದಾಗ ಮಾತ್ರ ರಾಜ್ಯದಲ್ಲಿ ಹಾಲಿನ ಹೊಳೆ ಹರಿಯಲು ಸಾಧ್ಯ. ಅದೆಲ್ಲ ಬಿಟ್ಟು ಜಾತಿಗೆ ಸೀಮಿತ ಸರಿಯಲ್ಲ ಎಂದರು.
ರೈಲು ಯೋಜನೆಗಳಿಗೆ ಬೆಂಬಲಿಸಿ: ರಾಜ್ಯ ಸರ್ಕಾರ ರೈಲು ಯೋಜನೆಗಳಿಗೆ ಕೊಡಬೇಕಾದಂತಹ ಭೂಮಿ, ಹಣಕಾಸಿನ ಪಾಲು ಬೇಗ ನೀಡಿ ಯೋಜನೆಗಳನ್ನು ಬೆಂಬಲಿಸಲಿ ಎಂದು ತಿಳಿಸಿದರು. ಹಿಂದೆ ಕನ್ನಡಿಗ ಖರ್ಗೆ ರೈಲು ಸಚಿವರಾಗಿದ್ದರು. ಇದೀಗ ಆ ಸ್ಥಾನದಲ್ಲಿ ಕನ್ನಡಿಗ ಸದಾನಂದಗೌಡರಿದ್ದಾರೆ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಹಿಂದೆ ಹೇಗೆ ಬೆಂಬಲ ನೀಡುತ್ತ ಬಂದಿರುವುದೋ ಹಾಗೆಯೇ ಬೆಂಬಲ ನೀಡಲಿ. ತನ್ನ ಪಾಲಿನ ಎಲ್ಲಾ ಸವಲತ್ತುಗಳನ್ನು ಬಿಡುಗಡೆ ಮಾಡುವ ಮೂಲಕ ಹೆಚ್ಚಿನ ರೈಲು ಯೋಜನೆಗಳು ಕರ್ನಾಟಕ ಸೇರುವಂತೆ ಮಾಡಲಿ ಎಂದರು.
 ಶಿಕ್ಷಣ ರಂಗಕ್ಕೆ ಕಾಯಕಲ್ಪ ಕೊಡುವಲ್ಲಿ ಬಿಜೆಪಿ ಸರ್ಕಾರದ ಪಾತ್ರ ಪ್ರಧಾನವಾದದ್ದು. ಬಿಜೆಪಿಯ ಕೊಡುಗೆ ಶಿಕ್ಷಕರು, ಪದವೀಧರರು ಮರೆಯೋದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದ ಅವರು, ಎಲ್ಲಾ 4 ಕಣಗಳಲ್ಲಿ ಬಿಜೆಪಿ ಗೆಲವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರ ಶ್ವೇತಪತ್ರ ಹೊರಡಿಸಲಿ
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಹಣಕಾಸಿನ ಸ್ಥಿತಿಗತಿ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸುವಂತೆ ಸಂಸದ ಬಿ.ಎಸ್ ಯಡಿಯೂರಪ್ಪ ಆಗ್ರಹಿಸಿದರು. ವಿಧಾನ ಪರಿಷತ್ ಚುನಾವಣಾ ಪ್ರಚಾರ ಪ್ರಯುಕ್ತ ನಗರಕ್ಕೆ ಆಗಮಿಸಿದ್ದ ಅವರು, ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. ಮುಂಗಾರು ಆರಂಭಗೊಂಡಿದ್ದರೂ ರಾಜ್ಯದಲ್ಲಿ ಮಳೆ ಇಲ್ಲ. ಮುಂದೆ ಉತ್ತಮ ಮಳೆ ಬರುತ್ತದೆ ಎಂಬ ಆಶಾಭಾವನೆ ಇದ್ದರೂ ರಾಜ್ಯ ಸರ್ಕಾರ ಬಿತ್ತನೆ ಬೀಜ ರಸಗೊಬ್ಬರ ಪೂರೈಕೆ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಕೆಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ತಿಳಿಸಿದ್ದಾರೆ ಎಂದರು. ಗುಲ್ಬರ್ಗ, ಬೀದರ್, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ತಕ್ಷಣ ಪೂರ್ಣಗೊಳಿಸಬೇಕು. ಈ ಕುರಿತು ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಸಿದ್ದೇಶ್ವರ ಜೊತೆ ಮಾತನಾಡಿದ್ದೇನೆ. ವಿಮಾನ ನಿಲ್ದಾಣ ಪ್ರಾಧಿಕಾರವೇ ಗುಲ್ಬರ್ಗ ವಿಮಾನ ನಿಲ್ದಾಣದ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement