ಪಾಸ್ ತೋರ್ಸಿ ಫೇಲಾಯ್ತು NEKSRTC
ಗುಲ್ಬರ್ಗ: ತನ್ನ ಬಸ್ ಸೇವೆಗಳತ್ತ ಹಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಸೆಳೆಯಲು ಹಲವು ಮೌಲ್ಯವರ್ಧಿತ ಸೇವೆಗಳನ್ನು ನೀಡುತ್ತಲಿದ್ದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇದೀಗ ಅಂತಹವುಗಳಲ್ಲಿ ಕೆಲವು ಸವಲತ್ತುಗಳನ್ನು ರದ್ದುಪಡಿಸಿದೆಯೇ ಎಂಬ ಪ್ರಶ್ನೆ ಇತ್ತೀಚಿನ 2 ವಾರಗಳಿಂದ ಪ್ರಯಾಣಿಕರನ್ನು ಕಾಡುತ್ತಿದೆ.
ಏಕೆಂದರೆ ತನ್ನ ದಿನದ ಪಾಸ್ ಪಡೆದ ಪ್ರಯಾಣಿಕರಿಗೆ ನೃಪತುಂಗ ನಗರ ಸಾರಿಗೆ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದ ಸಾರಿಗೆ ಸಂಸ್ಥೆ ಇದೀಗ ಈ ಸೇವೆಯನ್ನು ಸ್ಥಗಿತಗೊಳಿಸಿದೆ. ದಿನದ ಪಾಸ್ ಪಡೆದು ಸುರಪುರ, ಶಹಾಪುರ ಸೇರಿದಂತೆ ದೂರದ ಊರುಗಳಿಂದ ನಗರಕ್ಕೆ ಬರುವ ಪ್ರಯಾಣಿಕರು ಎಂದಿನಂತೆ ನಗರ ಸಾರಿಗೆಯ ನೃಪತುಂಗ ವಾಹನ ಹತ್ತಿದರೆ ಅಲ್ಲಿನ ನಿರ್ವಾಹಕರು ಟಿಕೆಟ್ ಕೇಳುತ್ತಿದ್ದಾರೆ.
ದಿನದ ಪಾಸ್ ಹಿಂಬದಿಯಲ್ಲಿ 'ನಗರ ಸಾರಿಗೆ ಸೇವೆ ಉಚಿತ' ಎಂದು ಸ್ಪಷ್ಟವಾಗಿ ಅಚ್ಚಾಗಿದೆ. ಪ್ರಯಾಣಿಕರು ಈ ಸೂಚನೆಯಿರುವ ದಿನದ ಪಾಸ್ ನಿರ್ವಾಹಕರಿಗೆ ತೋರಿಸಿದರೂ ಅವರ ಇದ್ಯಾವುದನ್ನು ಕೇಳದೆ ಟಿಕೆಟ್ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಸುರಪುರ ಪ್ರಯಾಣಿಕರು ಕಂಗಾಲು: ಜೂ.16ರ ಬೆಳಗ್ಗೆ ದಿನದ ಪಾಸ್(125 ಮುಖಬೆಲೆ) ಪಡೆದು ಸುರಪುರದಿಂದ ಗುಲ್ಬರ್ಗಕ್ಕೆ ಬಂದಿದ್ದ ಪ್ರಯಾಣಿಕರೆಲ್ಲರಿಗೂ ನಗರ ಸಾರಿಗೆ ಉಚಿತ ಸೇವೆ ದೊರಕಲೇ ಇಲ್ಲ. ಇವರೆಲ್ಲರೂ ಬಸ್ ನಿಲ್ದಾಣದಿಂದ ಸೂಪರ್ ಮಾರ್ಕೆಟ್‌ಗೆ ಹೋಗಲು ನಗರ ಸಾರಿಗೆ ಸೌಕರ್ಯ ಪಡೆಯಬೇಕಿತ್ತು. ಉಚಿತ ಸೌಕರ್ಯವಿದೆಯಲ್ಲ ಎಂದು ಅವರೆಲ್ಲರೂ ನೃಪತುಂಗ ಬಸ್ ಹತ್ತಿದರೆ, 'ಇದೆಲ್ಲ ಈಗಿಲ್ಲ, ಟಿಕೆಟ್ ತಗೆದುಕೊಳ್ಳಿ..' ಎಂದು ಕಂಡಕ್ಟರ್ ಟಿಕೆಟ್ ಕೊಟ್ಟೇಬಿಟ್ಟ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಕಳೆದ 8-10 ದಿನಗಳಿಂದ ನೃಪತುಂಗ ನಗರ ಸಾರಿಗೆ ಉಚಿತ ಸೇವೆಯನ್ನು ಸ್ಥಗಿತಗೊಳಿಸಿದ್ದು ನಿಜ. ಈ ಕುರಿತು ಸಾರ್ವಜನಿಕರ ಗಮನಕ್ಕೆ ತರಬೇಕಿತ್ತು. ಆದರೆ ಈ ಬಗ್ಗೆ ಮೇಲಧಿಕಾರಿಗಳು ಗಮನ ಹರಿಸದಿರುವುದು ಸೋಜಿಗ ಎನ್ನುತ್ತವೆ ಸಾರಿಗೆ ಸಂಸ್ಥೆ ಮೂಲಗಳು.