ಕಂದಾಯ ಗ್ರಾಮವನ್ನಾಗಿಸಲು ತಾಂಡಾಗಳ ಸಮೀಕ್ಷೆ
ಚಿಂಚೋಳಿ: ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಮುಖ್ಯ ಗ್ರಾಮಗಳಿಗೆ ನೀಡುವ ನಾಗರಿಕ ಸವಲತ್ತುಗಳನ್ನು ತಾಂಡಾಗಳಿಗೆ ನೀಡಲು ತಜ್ಞರ ಸಮಿತಿ ರಚನೆಯಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳ ತಾಂಡಾಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳ ಬಗ್ಗೆ ಸಮಾಲೋಚಿಸಿ ಸಮೀಕ್ಷೆ ನಡೆಸಲಿದ್ದಾರೆ ಎಂದು ಕರ್ನಾಟಕ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ತಜ್ಞ ಸಮಾಲೋಚಕರ ಸಮಿತಿ ಸದಸ್ಯ ಪುಟ್ಟಮಾದಯ್ಯ ಹೇಳಿದರು.
ತಾಲೂಕಿನ ಹೇಮಲಾ ನಾಯಕ ತಾಂಡಾ, ಕಾನೂ ನಾಯಕ ತಾಂಡಾ, ರೂಪ್ಲಾ ನಾಯಕ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು. ಇದಕ್ಕಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ತೊಡಕುಗಳ ಕುರಿತು ಅಧ್ಯಯನ ನಡೆಸಲು ನೇಮಕಗೊಂಡ ತಜ್ಞ ಸಮಾಲೋಚಕರ ಸಮಿತಿ ಮಂಗಳವಾರ ಭೇಟಿ ನೀಡಿತ್ತು.
ಲಂಬಾಣಿ ಜನಾಂಗದವರೊಂದಿಗೆ ಚರ್ಚಿಸಿ, ತಾಂಡಾಗಳು ಅಭಿವೃದ್ಧಿ ಹೊಂದಬೇಕು. ಮುಖ್ಯ ಗ್ರಾಮಗಳಿಗೆ ನೀಡುವ ನಾಗರಿಕ ಸವಲತ್ತು ತಾಂಡಾಗಳಿಗೂ ಸಿಗಬೇಕಾಗಿದೆ. ಇದಕ್ಕಾಗಿ ಅಧ್ಯಯನ ಸಮಿತಿ ರಚನೆಯಾಗಿದೆ. ತಮ್ಮ ತಾಂಡಾಗಳ ಬಗ್ಗೆ ಮಾಹಿತಿ ನೀಡಬೇಕೆಂದು ಸಮಿತಿಯ ಸದಸ್ಯ ಪುಟ್ಟಮಾದಯ್ಯ ಹೇಳಿದರು.
ಶಾಸಕ ಡಾ. ಉಮೇಶ ಜಾಧವ್ ಮಾತನಾಡಿ, ನಮ್ಮ ತಾಲೂಕಿನಲ್ಲಿ 120 ತಾಂಡಾಗಳಿವೆ. ತಾಂಡಾಗಳಿಗೆ ಶಾಶ್ವತ ಪರಿಹಾರಕ್ಕಾಗಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ತಜ್ಞರ ಸಮಿತಿ ಸರಕಾರ ರಚಿಸಿದೆ. ಇದರ ಬಗ್ಗೆ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿದ್ದರಿಂದ ಈಗ ತಾಂಡಾಗಳ ಅಧ್ಯಯನ ನಡೆಯುತ್ತಿದೆ ಎಂದು ಹೇಳಿದರು.
ಸಮಿತಿ ಸಂಪನ್ಮೂಲ ವ್ಯಕ್ತಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ ರಾಜ್ಯಾಧ್ಯಕ್ಷ ರಾಮಾನಾಯಕ ಡಿ, ಸಮಿತಿ ಸಂಚಾಲಕ ತಾಂಡಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜ ಚವ್ಹಾಣ, ಸಮಿತಿ ಸಂಯೋಜಕ ಡಾ. ರಮೇಶ ನಾಯಕ ಇನ್ನಿತರರು ಭೇಟಿ ನೀಡಿದ್ದರು.
ಪ್ರಭು ಚವ್ಹಾಣ, ರಾಜು ರತಿಬಾಯಿ ರಾಠೋಡ ಇನ್ನಿತರರಿದ್ದರು.