ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿದ್ಯಾರ್ಥಿಗಳಿಂದ ಹೆದ್ದಾರಿ ಬಂದ್!

Rashmi Kasaragodu
Updated On : 18 Jun 2014, 11:32 am

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಾಲಾ ಕೋಣೆಗಳಿಗಾಗಿ ಆಗ್ರಹಿಸಿ ಬೀದಿಗಿಳಿದು ಹೋರಾಟ ಪ್ರತಿಭಟನೆ ಮಾಡಿದರು.
ಮಂಗಳವಾರ ಬೆಳಗ್ಗೆ ಪ್ರೌಢಶಾಲೆಯ 190 ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಖಾನಾಪುರ ಗ್ರಾಮದಲ್ಲಿ ದಿಢೀರನೇ ಹೆದ್ದಾರಿ ಬಂದ್ ಪ್ರತಿಭಟಿಸಿದರು.
ವಿದ್ಯಾರ್ಥಿಗಳಿಗೆ ಕೋಣೆಗಳಿಲ್ಲದೆ ಬಯಲಿನಲ್ಲಿ ಪಾಠ ನಡೆಯುತ್ತಿವೆ. ಬೀಳುವ ಹಂತದ ಕೋಣೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವಂತಾಗಿದೆ. ವಿದ್ಯಾರ್ಥಿಗಳಿಗೆ ಕೋಣೆ ಒದಗಿಸುವಂತೆ ಶಹಾಪುರ ಬಿಇಒ ಅವರಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗುತ್ತಿಲ್ಲ. ಮೊಬೈಲ್ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
3 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತ: ಕಳೆದ 6 ವರ್ಷಗಳಿಂದ ಗ್ರಾಮದ ಹೊರವಲಯದಲ್ಲಿ ಅರ್ಧಕ್ಕೆ ನಿಂತಿದ್ದ ಕಟ್ಟಡವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪೂರ್ಣಗೊಳಿಸಲು ಮುಂದಾಗುತ್ತಿಲ್ಲ ಎಂದು ಮಕ್ಕಳು ಮತ್ತು ಗ್ರಾಮಸ್ಥರು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಪ್ರತಿಭಟನೆಯಿಂದಾಗಿ ಶಹಾಪುರ, ಸುರಪುರ, ಯಾದಗಿರಿ ಕಡೆಗೆ ಹೋಗುವ ನೂರಾರು ವಾಹನಗಳು ಸುಮಾರು 5 ಕಿ.ಮೀ.ವರೆಗೆ ನಿಂತಿರುವುದು ಕಂಡುಬಂತು. ಇದರಿಂದ ಸುಮಾರು 3 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ಸ್ಥಳಕ್ಕೆ ಯಾದಗಿರಿ ಶಿಕ್ಷಣ ಇಲಾಖೆಯ ಪ್ರಭಾರಿ ಡಿಡಿಪಿಐ ಡಿ.ಎಂ. ಹೊಸ್ಮನಿ, ಡಿವೈಎಸ್ಪಿ ಬಿ.ಎಸ್. ಬಸರಗಿ, ವಡಗೇರಾ ಠಾಣೆ ಪಿಎಸ್‌ಐ ಮಲ್ಲಿಕಾರ್ಜುನ ಇಕ್ಕಳಿಕಿ ಭೇಟಿ ನೀಡಿದರು. ವಿದ್ಯಾರ್ಥಿಗಳು ಮತ್ತು ಪ್ರತಿಭಟನೆಕಾರರ ಮನವೊಲಿಸಲು ಯತ್ನಿಸಿದರು. ಪ್ರತಿಭಟನೆಕಾರರು ಅಧಿಕಾರಿಗಳ ಮಾತಿಗೆ ಮಣಿಯಲಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಪಂ ಇಇ ಆಗಮಿಸುವವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪಟ್ಟಹಿಡಿದರು.
ಪೊಳ್ಳು ಭರವಸೆ: ಪೊಳ್ಳು ಭರವಸೆಯಿಂದ ಬೇಸತ್ತಿದ್ದೇವೆ. ಕೊನೆಯ ಅಸ್ತ್ರ ಎಂದು ವಿದ್ಯಾರ್ಥಿಗಳು ಶಾಲೆ ಬಿಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಧಿಕಾರಿಗಳು ಜಿಲ್ಲಾಧಿಕಾರಿ, ಸಿಇಒ ಅವರಿಗೆ ಮೊಬೈಲ್‌ನಲ್ಲಿ ಗಮನಕ್ಕೆ ತಂದರು. ಪ್ರಭಾರಿ ಡಿಡಿಪಿಐ ಡಿ.ಎಂ. ಹೊಸ್ಮನಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ವಿದ್ಯಾಭ್ಯಾಸಕ್ಕಾಗಿ ಉರ್ದು ಶಾಲೆಯಲ್ಲಿನ 3 ಕೋಣೆಗಳ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಪ್ರತಿಭಟನೆ ಹಿಂದಕ್ಕೆ ಪಡೆಯಬೇಕು. ಮಾತುಕತೆಗೆ ಯಾದಗಿರಿಗೆ ಆಹ್ವಾನಿಸಿದ ಬಳಿಕ ಪ್ರತಿಭಟನೆ ಹಿಂಪಡೆದರು. ಬಳಿಕ ಹೆದ್ದಾರಿ ಸಂಚಾರ ಸುಗಮಗೊಂಡಿತ್ತು.
5 ಲಕ್ಷ ಹಣ ಬಿಡುಗಡೆ: ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಮರಿಲಿಂಗಪ್ಪ ಕೊಂಚೆಟ್ಟಿ, ಪರಶುರಾಮ ಪದ್ಮಾಕರ್, ಪಾಂಡುರಂಗ ಪದ್ಮಾಕರ್, ಬಸವರಾಜ ಕಟ್ಟಿಮನಿ, ರಾಮಲಿಂಗಪ್ಪ ಕೊಂಚೆಟ್ಟಿ, ಕೆ. ರಂಗಪ್ಪ, ರಂಗಪ್ಪ ಅಲ್ಲೂರ, ಅಬ್ಬಣ್ಣ ಉಳ್ಳೆಸುಗೂರ, ಯಂಕಪ್ಪ ನಾಯ್ಕಲ್, ಸಿದ್ರಾಮಪ್ಪ ನಾಯ್ಕಲ್, ನೀಲಪ್ಪ ಸಾಹು, ದಂಡಪ್ಪ ಕವಲಿ, ಯಂಕಪ್ಪ ಯಲ್ಹೇರಿ, ರಾಯಪ್ಪ ಹಳಿಮನಿ, ಶರಣಪ್ಪ ತಿಪನಟಿಗಿ, ಪಾಂಡು ಪೂಜಾರಿ, ಮಾಳಿಂಗರಾಯ, ಬಾಲಪ್ಪ, ರಾಮು ಹೂಗಾರ, ರೆಡ್ಡಿ, ಜಿಲ್ಲಾಧಿಕಾರಿ ಮತ್ತು ಶಿಕ್ಷಣ ಇಲಾಖೆ, ಪ್ರತಿಭಟನೆಕಾರರ ಸಭೆ ಯಾದಗಿರಿಯಲ್ಲಿ ನಡೆಯಿತು.
ಸದ್ಯ ಕಟ್ಟಡ ಕಾಮಗಾರಿ ಪ್ರಾರಂಭಿಸಲು 5 ಲಕ್ಷ ಹಣ ಬಿಡುಗಡೆ ಮಾಡುವುದಾಗಿ ಹೇಳಿದರು. ಹಂತ ಹಂತವಾಗಿ ಹಣ ಬಿಡುಗಡೆಗೊಳಿಸಿ ಒಂದು ತಿಂಗಳೊಳಗೆ ಅರ್ಧಕ್ಕೆ ನಿಂತ ಪ್ರೌಢಶಾಲಾ ಕಟ್ಟಡವನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವುದಾಗಿ ಎಂಬ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಪ್ರತಿಭಟನೆಕಾರರ ಮುಖಂಡ ಕೆ. ರಂಗಪ್ಪ ತಿಳಿಸಿದರು.
ಅಧಿಕಾರಿಗಳು ಪುನಃ ಮೌನ ವಹಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೂಡ ಪ್ರತಿಭಟನೆಕಾರರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement