ಉದ್ಯೋಗ ಖಾತ್ರಿ ಕೂಲಿ ಹಣ ಬಿಡುಗಡೆಗೆ ಆಗ್ರಹ
ಯಾದಗಿರಿ: ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣ ಬಿಡುಗಡೆ ಮಾಡದೆ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಕಾರ್ಮಿಕರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಮರೆಪ್ಪ ನಾಯಕ ಮೊಗಂದಪೂರ ಆರೋಪಿಸಿದ್ದಾರೆ. 2013-14ನೇ ಸಾಲಿನಲ್ಲಿ ನಿರ್ವಹಿಸಿದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರು ಮತ್ತು ಸಾಮಗ್ರಿ ಸರಬರಾಜು ಮಾಡಿದ ಮಾಲೀಕರು ತೊಂದರೆ ಅನುಭವಿಸುವಂತಹ ಸ್ಥಿತಿ ಬಂದಿದೆ. ಪ್ರತಿ ವರ್ಷ ಇದೇ ಸ್ಥಿತಿ ಆದರೆ ಕಾರ್ಮಿಕರು ಪಟ್ಟಣಗಳಿಗೆ ಗುಳೇ ಹೋಗಬೇಕಾದ ಸ್ಥತಿ ಎದುರಾಗಲಿದೆ. ತನಿಖಾ ತಂಡ ಭೇಟಿ ನೀಡಿದಾಗ ಕಾಮಗಾರಿ ಮುಗಿಯುವ ಹಂತದಲ್ಲಿದ್ದವು. ತಾಂತ್ರಿಕ ತಂಡದವರು ಕಳೆದ ಫೆಬ್ರವರಿಯಲ್ಲಿ ಕೆಲಸ ಚೆನ್ನಾಗಿ ಆಗಿದೆ ಎಂಬ ವರದಿ ನೀಡಿದ್ದಾರೆ. ಸಾಮಾಜಿಕ ಲೆಕ್ಕ ಪರಿಶೋಧಕರು ಖುದ್ದು ಸ್ಥಳಕ್ಕೆ ಭೇಟಿ ನೀಡದೆ ಕುಂತಲ್ಲೇ ವರದಿ ನೀಡುತ್ತಿದ್ದಾರೆ. ಕೆಲಸ ನಿರ್ವಹಿಸಿದ ಪಂಚಾಯತಿಗಳಿಗೆ ತುಂಬಾ ತೊಂದರೆ ಮತ್ತು ಅನ್ಯಾಯವಾಗುತ್ತಿದೆ. ವಾರದೊಳಗೆ ಜಿಪಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮರೆಪ್ಪ ನಾಯಕ ಎಚ್ಚರಿಕೆ ನೀಡಿದ್ದಾರೆ.