ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮೇಲ್ಮನೆ ಬಹಿರಂಗ ಪ್ರಚಾರ ಅಂತ್ಯ

Rashmi Kasaragodu
Updated On : 19 Jun 2014, 11:57 am

ಕ.ಪ್ರ. ವಾರ್ತೆ     ಗುಲ್ಬರ್ಗ     ಜೂ. 18
ಇದೇ ಜೂ.20ರಂದು ನಡೆಯಲಿರುವ ಈಶಾನ್ಯ ಶಿಕ್ಷಕ ಮತಕ್ಷೇತ್ರ ಮೇಲ್ಮನೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆಬಿತ್ತು. ಅಖಾಡದಲ್ಲಿರುವ ಜೆಡಿಎಸ್ ಅಭ್ಯರ್ಥಿ ಎಂ.ಬಿ. ಅಂಬಲಗಿ ಪರವಾಗಿ ಅವರ ಕುಟುಂಬ ವರ್ಗವೇ ಪ್ರಚಾರದ ಮುಂಚೂಣಿಯಲ್ಲಿದ್ದರೆ, ಇತರೆ ಅಭ್ಯರ್ಥಿಗಳು ತಮ್ಮಷ್ಟಕ್ಕೆ ತಾವು ಸುದ್ದಿಗೋಷ್ಠಿ ನಡೆಸುತ್ತ ಶಿಕ್ಷಕರ ಮತ ಬೇಟೆಗೆ ಯತ್ನಿಸಿದ್ದ ನೋಟಗಳು ಕಂಡುಬಂದವು. ಬಿಜೆಪಿ ಭದ್ರಕೋಟೆಯಾಗಿರುವ ಈ ಕಣವನ್ನು ನಾಲ್ಕನೇ ಬಾರಿಗೆ ಉಳಿಸಿಕೊಳ್ಳಲೇಬೇಕು, ಹೇಗಾದರೂ ಮಾಡಿ ಕಮಲ ಅರಳುವಂತೆ ಮಾಡಬೇಕೆಂದು ಬಿಜೆಪಿ ಹರಸಾಹಸಕ್ಕಿಳಿದರೆ, ಬಿಜೆಪಿ ಕೋಟೆ ಕೈವಶಕ್ಕೆ ಕಾಂಗ್ರೆಸ್‌ನಲ್ಲಿ ಪ್ರಯತ್ನ ಸಾಗಿವೆ. ಇತ್ತ ಜೆಡಿಎಸ್‌ನ ಹುರಿಯಾಳು ಶಿಕ್ಷಕರ ಮತ ಶಿಕ್ಷಕರಿಗೆ ಎಂದು ಭಾವನಾತ್ಮಕವಾಗಿ ಶಿಕ್ಷಕ ಕ್ಷೇತ್ರವನ್ನು ಶಿಕ್ಷಕರೇ ಪ್ರತಿಧಿಸಬೇಕೆಂದು ಮತಬೇಟೆಗೆ ಮುಂದಾಗಿದ್ದಾರೆ. ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಪೈಪೋಟಿ ಕಂಡಿದೆ.


ಜೆಡಿಎಸ್ ಪ್ರಚಾರ


ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಬಿ. ಅಂಬಲಗಿ ಪರವಾಗಿ ನಗರದ ವಿವಿಧೆಡೆ ಪಕ್ಷದ ಮುಖಂಡರು ಬಿರುಸಿನ ಪ್ರಚಾರ ನಡೆಸಿ ಮತ ಯಾಚಿಸಿದರು. ನಗರ ಸೇರಿದಂತೆ ತಾಜಸುಲ್ತಾನಪೂರ, ಹೀರಾಪೂರದ ಶಾಲಾ-ಕಾಲೇಜುಗಳೀಗೆ ಭೇಟಿ ನೀಡಿ, ಶಿಕ್ಷಕರ ಸಮಸ್ಯೆಗಳಿಗೆ ಹೋರಾಡುತ್ತಿರುವ ಎಂ.ಬಿ. ಅಂಬಲಗಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯದರ್ಶಿ ದೇವೇಗೌಡ ತೆಲ್ಲ ಊರ, ಮುಖಂಡ ಡಿ.ಜಿ. ಸಾಗರ, ಉಮೇಶ ನರೋಣ, ರೇವಣಸಿದ್ದ ಜಾಲಿ ಸೇರಿದಂತೆ ಮುಂತಾದವರು ಇದ್ದರು.



ಶಿಕ್ಷಕರು ಕೈಬಿಡೋದಿಲ್ರಿ  ಅಂಬಲಗಿ ಪತ್ನಿ
ಜೆಡಿಎಸ್ ಅಭ್ಯರ್ಥಿ ಅಂಬಲಗಿ ಪತ್ನಿ ಜಗದೇವಿ, ಪುತ್ರ ಗುರುಪ್ರಸಾದ, ಪುತ್ರಿ ಶಕ್ತಿ, ಅಳಿಯ ಡಾ. ಬುಜರಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡ ಕುಟುಂಬದಿಂದ ಬಂದ ಅಂಬಲಗಿ ಸದಾಕಾಲ ಶಿಕ್ಷಕರ ಪರವಾಗಿಯೇ ಕೆಲಸ ಮಾಡುತ್ತಿರುವವರು. ಅವರನ್ನೇ ಗೆಲ್ಲಿಸುವಂತೆ ಮನವಿ ಮಾಡಿದರು. ಶಿಕ್ಷಕರೇ ಈ ಕ್ಷೇತ್ರದಿಂದ ಗೆಲ್ಲಬೇಕು, ಶಿಕ್ಷಕರ ಮತ ಶಿಕ್ಷಕರಿಗೇ ಎಂಬಂತೆ ಶಿಕ್ಷಕರೆಲ್ಲರೂ ತಮ್ಮ ಮತವನ್ನು ಅಂಬಲಗಿಯವರಿಗೆ ನೀಡಬೇಕೆಂದು ಕುಟುಂಬ ಸದಸ್ಯರು ಕೋರಿದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಗದೇವಿ ಅಂಬಲಗಿ, ತಮ್ಮ ಪತಿ ಸದಾಕಾಲ ಸಮಾಜ ಸೇವೆಯಲ್ಲಿದ್ದಾರೆ. ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ನಿಂತಿದ್ದಾರೆ. ಶಿಕ್ಷಕರು ಬೆಂಬಲಿಸುವ ಭರವಸೆ ನೀಡಿದ್ದರಿಂದಲೇ ಅವರು ಸ್ಪರ್ಧಿಸಿದ್ದಾರೆ. ಶಿಕ್ಷಕರು ಕೈ ಬಿಡುವುದಿಲ್ಲ ಎಂಬ ಭರವಸೆ ತಮಗಿದೆ ಎಂದರು.



ಬೋಧಕನಾಗಿದ್ದವ ಡಾ. ರಂಗನಾಥ
ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿ ಡಾ. ರಂಗನಾಥ ತಾವು 13 ಪದವಿಗಳನ್ನು ಪಡೆದವರು. ಬೋಧಕರಾಗಿ ಸೇವೆಯಲ್ಲಿದ್ದು ನಂತರ ಸರ್ಕಾರಿ ಕೆಲಸಕ್ಕೆ ಸೇರಿದವರು ಎಂದು ತಮ್ಮ ಪೂರ್ವಾಪರಗಳನ್ನೆಲ್ಲ ಸುದ್ದಿಗೋಷ್ಠಿ ನಡೆಸಿ ಹೇಳುತ್ತ ಶಿಕ್ಷಕರು ತಮ್ಮನ್ನು ಗೆಲ್ಲಿಸಿದಲ್ಲಿ ಪ್ರಾಮಾಣಿಕವಾಗಿ ಶಿಕ್ಷಕರ ಕುಂದು- ಕೊರತೆ ಪರಿಹಾರಕ್ಕೆ ಯತ್ನಿಸುವುದಾಗಿ ಹೇಳಿದರು. ಶಿಕ್ಷಕರ ವೇತನ ತಾರತಮ್ಯ ನಿವಾರಿಸುವ, ಪಪೂ ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ ಹುಡುಕುವ, ಅನುದಾನ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸದಲ್ಲಿರುವ ಎಲ್ಲ ವಿಧದ ಶಿಕ್ಷಕರು ಸೇರಿದಂತೆ ಒಟ್ಟಾರೆ ಶಿಕ್ಷಕ ವರ್ಗದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುವುದಾಗಿ ರಂಗನಾಥ ಹೇಳಿದ್ದಾರೆ. ಅಲ್ಲದೆ, ನಾನೂ 32 ವರ್ಷಗಳ ಕಾಲ ಸರ್ಕಾರಿ ಕೆಲಸದಲ್ಲಿದ್ದು ಕೊನೆಗೆ ಸೇವೆಯಲ್ಲಿರುವಾಗಲೇ ಕೆಎಟಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಹೊರಬಂದಿದ್ದೇನೆ ಎಂದರು.



ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವೆ: ನಮೋಶಿ
ಕಳೆದ ಮೂರು ಅವಧಿಗೆ ಮೇಲ್ಮನೆಯಲ್ಲಿ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸಿರುವ ತಾವು ನಾಲ್ಕನೇ ಬಾರಿ ಕಣದಲ್ಲಿರುವುದಾಗಿ ಹೇಳುತ್ತ ಶಿಕ್ಷಕರು ತಮ್ಮನ್ನು ಈ ಬಾರಿಯೂ ಹರಸುತ್ತಾರೆಂದು ಬಿಜೆಪಿಯ ಶಶಿಲ್ ನಮೋಶಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ತಾವು 2008ರಲ್ಲಿ ಗೆದ್ದರೂ ಪಕ್ಷದ ಹೈಕಮಾಂಡ್ ಆದೇಶದಂತೆ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗಿ ಹೇಳಿದರಲ್ಲದೆ ಈ ವಿಚಾರದಲ್ಲಿ ಶಿಕ್ಷಕ ಸಮೂಹದಲ್ಲಿದ್ದ ಅನೇಕ ಗೊಂದಲಗಳನ್ನು ಖುದ್ದು ಆಲಿಸಿ ಸ್ಪಷ್ಟನೆ ನೀಡಿದ್ದೇನೆ. ಈಗಾಗಲೇ ಶಿಕ್ಷಕರಿಗೆ ತಮ್ಮ ರಾಜಕೀಯ ನಿಲುವು- ಒಲವುಗಳ ಬಗ್ಗೆ ಹೇಳಿರುವೆ, ಶಿಕ್ಷಕರೂ ನನ್ನ ಮನವಿಯನ್ನು ಗಮನವಿಟ್ಟು ಕೇಳಿದ್ದಾರೆ. ಕೈ ಬಿಡೋದಿಲ್ಲ ಎಂದೂ ಹೇಳಿದ್ದಾರೆಂದು ನಮೋಶಿ ನುಡಿದರು. ಕಾಂಗ್ರೆಸ್‌ನ ಶಿಕ್ಷಕ ವಿರೋಧಿ ಧೋರಣೆಗಳನ್ನು ಪಟ್ಟಿ ಮಾಡಿದ ನಮೋಶಿ, ಶಿಕ್ಷಕರಿಗೆ ಅನೇಕ ಅನುಕೂಲ ಕಲ್ಪಿಸಿರುವ ಬಿಜೆಪಿಗೇ ಈಶಾನ್ಯ ಶಿಕ್ಷಕರು ಒಲಿಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement