ಒಣಭೂಮಿಗೆ ಬಿತ್ತನೆ ಮಾಡದಂತೆ ಸೂಚನೆ
ಚಿಂಚೋಳಿ: ತಾಲೂಕಿನಲ್ಲಿ ಮಳೆಯ ಅಭಾವ ಮತ್ತು ಮಣ್ಣಿನಲ್ಲಿ ತೇವಾಂಶದ ಕೊರತೆಯಿದ್ದರೂ ರೈತರು ಒಣ ಮಣ್ಣಿನಲ್ಲಿಯೇ ಬಿತ್ತನೆ ಕಾರ್ಯ ಪ್ರಾರಂಭಗೊಳಿಸಿದ್ದಾರೆ. ಒಣ ಮಣ್ಣಿನಲ್ಲಿ ಬಿತ್ತನೆ ಕೈಕೊಳ್ಳದಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಬಿ.ಎನ್. ಚೂಡೆ ರೈತರಿಗೆ ಸಲಹೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ತಾಲೂಕಿನ ಚಿಮ್ಮನಚೋಡ ಮತ್ತು ಐನಾಪೂರ ವಲಯದಲ್ಲಿ ಅಲ್ಪ ಮಳೆಯಾಗಿದ್ದರಿಂದ ರೈತರು ಜೂನ್ 6 ರಿಂದಲೇ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ. ಇಗಾಗಲೇ ಸಾವಿರ ಹೆಕ್ಟೇರ್ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಹೀಗಾಗಿ ಬೆನೆಕೆಪಳ್ಳಿ, ಗಡಿಲಿಂಗದಳ್ಳಿ, ರೂಪ್ಲಾ ನಾಯಕ ತಾಂಡಾ, ಹೇಮಲಾ ನಾಯಕ ತಾಂಡಾ ಸೇರಿದಂತೆ ಚೌಕಿ ತಾಂಡಾ, ಸಲಗರ ಬಸಂತಪೂರ ಗ್ರಾಮದ ಸುತ್ತಲಿನ ತಾಂಡಾಗಳಲ್ಲಿ ಮೊಳಕೆ ಒಡೆದಿವೆ ಎಂದು ಹೇಳಿದರು. ತಾಲೂಕಿನಲ್ಲಿ ಜೂನಿನಲ್ಲಿ ವಾಡಿಕೆಯಂತೆ 147.9 ಮಿ.ಮೀ ಮಳೆಯಾಗಬೇಕು. ಸರಿಯಾದ ಪ್ರಮಾಣದಲ್ಲಿ ಮಳೆಯಾಗಿಲ್ಲ. ಬಿಸಿಲಿನ ತಾಪದಿಂದ ಮಣ್ಣಿನಲ್ಲಿ ತೇವಾಂಶ ಕೊರತೆಯಿರುವುದರಿಂದ ಬೆಳೆಗೆ ಹಾನಿಯಾಗಲಿದೆ. ರೈತರು ಒಣ ಮಣ್ಣಿನಲ್ಲಿ ಮುಂಗಾರು ಬಿತ್ತನೆ ಕಾರ್ಯ ಕೈಕೊಳ್ಳದಿರುವಂತೆ ಮನವಿ ಮಾಡಿದ್ದಾರೆ. ತಾಲೂಕಿನಲ್ಲಿ ಮುಂಗಾರು ಬಿತ್ತನೆ ಬೀಜದ ಕೊರತೆಯಿಲ್ಲ. ಹೆಸರು, ಉದ್ದು, ತೊಗರಿ, ಸೋಯಾಬೀನ್ ಸೇರಿದಂತೆ ಎಲ್ಲ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರದಲ್ಲಿ ಸಂಗ್ರಹವಿದೆ ಎಂದು ತಿಳಿಸಿದ್ದಾರೆ.