ಸಚಿವರಿಗೆ ಮನವಿ
ಚಿಂಚೋಳಿ: ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ಕಳೆದ 20 ವರ್ಷಗಳಿಂದ ದುಡಿಯತ್ತಿರುವ ದಿನಗೂಲಿ ನೌಕರರನ್ನು ಸಕ್ರಮಗೊಳಿಸಲು ಮತ್ತು ಎಸ್ಎಫ್ಸಿ ಅನುದಾನದಲ್ಲಿ ವೇತನ ಪಾವತಿಸಲು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಪಪಂ ಪೌರ ನೌಕರರ ಸಂಘದ ಅಧ್ಯಕ್ಷ ಮಹಮ್ಮದ್ ಮಶಾಕ ಮತ್ತು ಕಾರ್ಯದರ್ಶಿ ಮಹ್ಮದ್ ಏಜಾಜ್ ಜಂಟಿಯಾಗಿ ತಿಳಿಸಿದ್ದಾರೆ. ಪಟ್ಟಣ ಪಂಚಾಯಿತಿಯಲ್ಲಿ ಕಳೆದ 20 ವರ್ಷಗಳಿಂದ ಪೌರ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ಕಾಯಂಗೆ ಅರ್ಹರಾಗಿದ್ದೇವೆ. ಆದರೂ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ನಮ್ಮ ಸೇವೆಯನ್ನು ಕಾಯಂಗೊಳಿಸಿ ವೇತನ ಪಾವತಿಸುವಂತೆ ಅನೇಕ ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ. ಕಳೆದ 4 ತಿಂಗಳಿಂದ ವೇತನ ನೀಡಿಲ್ಲ. ಎಸ್ಎಫ್ಸಿ ಅನುದಾನದಲ್ಲಿ ವೇತನ ನೀಡುವುದಾಗಿ ಸರಕಾರ ಅನೇಕ ಸಲ ತಿಳಿಸಿದೆ. ಆದರೆ ಅನುದಾನ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜೀವನ ಸಾಗಿಸಲು ತುಂಬಾ ತೊಂದರೆಯಾಗುತ್ತಿದೆ. ಸಚಿವರು ನಮ್ಮ ಮನವಿಗೆ ಸ್ಪಂದಿಸಬೇಕು. ಒಂದು ವೇಳೆ ಬೇಡಿಕೆ ಈಡೇರಿಸದಿದ್ದಲ್ಲಿ ಸಚಿವರ ಮನೆ ಮುಂದೆ ಉಪವಾಸ ಸತ್ಯಾಗ್ರಹ ಕೈಕೊಳ್ಳಲು ನಿರ್ಧರಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.