ಸರ್ಕಾರಿ ಐಟಿಐ ಕಾಲೇಜು ಪ್ರವೇಶಕ್ಕೆ ಅರ್ಜಿ ಕರೆ
ರಾಯಚೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಮಸ್ಕಿ ಪಟ್ಟಣದಲ್ಲಿ ಹೊಸದಾಗಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾರಂಭಿಸಿದ್ದು ಪ್ರವೇಶಕ್ಕೆ ಅರ್ಜಿ ಕರೆಯಲಾಗಿದೆ. ಫಿಟ್ಟರ್ ಮತ್ತು ಎಲೆಕ್ಟ್ರಿಶಿಯನ್ ವೃತ್ತಿಗಳ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿಗಳನ್ನು ಇಲಾಖೆಯ ವೆಬ್ ಸೈಟ್ ಮೂಲಕ ಪಡೆದು ಜೂ.21ರೊಳಗೆ ಸಲ್ಲಿಸಲು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಕಟಣೆ ತಿಳಿಸಿದೆ.
ಉದ್ಯೋಗಿನಿ ಯೋಜನೆಯಡಿ ಅರ್ಜಿ ಆಹ್ವಾನ
ರಾಯಚೂರು: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ ಉದ್ಯೋಗಿನಿ ಯೋಜನೆಯಡಿ ಸ್ವಯಂ ಉದ್ಯೋಗಿಗಳಾಗಲು ಸಹಾಯ ಧನ ಮತ್ತು ಬ್ಯಾಂಕಿನ ಮುಖಾಂತರ ಸಾಲ ಒದಗಿಸಲು ಅರ್ಜಿ ಕರೆದಿದೆ. ಸ್ವಯಂ ಉದ್ಯೋಗಿಗಳಾಗಲು ಮಹಿಳಾ ಅಭಿವೃದ್ಧಿ ನಿಗಮವು ಆರ್ಥಿಕ ನೆರವು ನೀಡುತ್ತಿದ್ದು, ಜಿಲ್ಲೆಗೆ 368 ಫಲಾನುಭವಿಗಳ ಗುರಿ ನಿಗದಿಪಡಿಸಿದೆ. ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು ಜು.10ರೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂಪರ್ಕಿಸಲು ಕೋರಲಾಗಿದೆ.
ಪದಾಧಿಕಾರಿಗಳ ನೇಮಕ
ಗುಲ್ಬರ್ಗ: ನಗರದ ಕನ್ನಡ ಭವನದಲ್ಲಿ ಕಳೆದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಡಾ. ಕೆ. ಲಿಂಗಪ್ಪ (ಅಧ್ಯಕ್ಷ), ಡಾ. ಅಮೃತಾ ಕಟಕೆ, ಡಾ. ಜಯಕುಮಾರ (ಉಪಾಧ್ಯಕ್ಷ), ಸಂದೀಪ. ಬಿ (ಕಾರ್ಯದರ್ಶಿ), ಡಾ.ಪಿ. ಪರಶುರಾಮ, ಸಂತೋಷ ಮೇಲಿನಮನೆ (ಸಹ ಕಾರ್ಯದರ್ಶಿ), ಜಗದೀಶ ಅಕ್ಕಿ (ಖಜಾಂಚಿ), ಸುನೀಲ್ ವಂಟಿ, ಶಂಕರಯ್ಯಾ ಆರ್ ಘಂಟಿ, ಎಚ್.ಎಸ್ ಬಸವಪ್ರಭು, ಬಿ.ವಿ. ಚಕ್ರವರ್ತಿ, ಬಾಬುರಾವ್ ಎಚ್., ರಾಘವೇಂದ್ರ ಹಳೆಪೇಟೆ, ಕಲ್ಯಾಣಿ ಬಜಂತ್ರಿ, ಶಿವಶರಣಪ್ಪ ನೀಲೂರಕರ್, ಮಮತಾ ಗೌರೆ (ಸದಸ್ಯರಾಗಿ) ನೇಮಕ ಮಾಡಲಾಯಿತು ಎಂದು ಜಿಲ್ಲಾ ಕಾರ್ಯದರ್ಶಿ ಸಂದೀಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಲ್ಬರ್ಗ ಜಿಪಂ ಸಭೆ
ಗುಲ್ಬರ್ಗ: ಇಲ್ಲಿನ ತಾಪಂ ಸಭಾಂಗಣದಲ್ಲಿ ಜೂ. 23ರ ಬೆಳಗ್ಗೆ 11ಕ್ಕೆ ಹಂಗಾಮಿ ಅಧ್ಯಕ್ಷ ಎಚ್. ತೆಲ್ಲೂರ ನೇತೃತ್ವದಲ್ಲಿ ತಾಪಂ ಸಭೆ ಜರುಗಲಿದೆ.
ಹಾವು ಕಚ್ಚಿ ಬಾಲಕಿ ಸಾವು
ರಾಯಚೂರು: ಮಾನವಿ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಹಾವು ಕಚ್ಚಿ ಬಾಲಕಿ ಸಾವಿಗೀಡಾಗಿದ್ದಾಳೆ. ಮೃತಳನ್ನು ಲಕ್ಷ್ಮೀ(16) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಹೊಲದಲ್ಲಿನ ತನ್ನ ಮನೆ ಮುಂದೆ ಮಲಗಿದ್ದ ವೇಳೆ ಹಾವು ಕಚ್ಚಿದ್ದು, ಕೂಡಲೇ ಕವಿತಾಳ ಮತ್ತು ಜಿಲ್ಲಾ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೆ ಮೃತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಕ್ಕಿ: ಬಾಲಕ ಸಾವು
ರಾಯಚೂರು: ಮಾನವಿ ತಾಲೂಕಿನ ನೀರಮಾನವಿ ಬಳಿ ಬೈಕ್‌ಗೆ ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಬಾಲಕ ಮೃತಪಟ್ಟಿದ್ದಾನೆ. ಮೃತನನ್ನು ವೀರೇಂದ್ರ(4) ಎಂದು ಗುರುತಿಸಲಾಗಿದೆ. ಈತ ತನ್ನ ಪಾಲಕರೊಂದಿಗೆ ಬೈಕ್‌ನಲ್ಲಿ ಮಾನವಿಯಿಂದ ಮರ್ಚಟ್ಹಾಳ್‌ಗೆ ಮರಳುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಮೃತನಾಗಿದ್ದು, ಈತನ ತಂದೆ ರಘು ಮತ್ತು ತಾಯಿ ಈರಮ್ಮ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.