ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮೇಲ್ಮನೆ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶೇ.60 ಮತದಾನ

Rashmi Kasaragodu
Updated On : 21 Jun 2014, 11:35 am

ಗುಲ್ಬರ್ಗ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಮೇಲ್ಮನೆ ಚುನಾವಣೆ ಶುಕ್ರವಾರ ಶಾಂತಿಯುತವಾಗಿ ನಡೆಯಿತು.
ಈಶಾನ್ಯ ಶಿಕ್ಷಕ ಕ್ಷೇತ್ರದಡಿಲ್ಲಿ ಬರುವ ಗುಲ್ಬರ್ಗ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ ಹಾಗೂ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿನ ಶಿಕ್ಷಕರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದರು. ಶೇ.60.30ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯಾ ಬಿಸ್ವಾಸ್ ತಿಳಿಸಿದ್ದಾರೆ.
ಈಶಾನ್ಯ ಶಿಕ್ಷಕರ ಮತಕ್ಷೇತ್ರದಲ್ಲಿ 22998 ಪುರುಷರು, 8811 ಮಹಿಳಾ ಮತದಾರರು ಸೇರಿದಂತೆ ಒಟ್ಟು 31,809 ಮತದಾರರಿದ್ದಾರೆ. ಈ ಪೈಕಿ 14, 370 ಪುರುಷ ಮತ್ತು 4,812 ಮಹಿಳೆಯರು ಸೇರಿ 19,182 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಚಿಂಚೋಳಿ: ಶೇ.68.66
ಚಿಂಚೋಳಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ.68.66ರಷ್ಟು ಮತದಾನವಾಗಿದ್ದು ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂದು ತಹಸೀಲ್ದಾರ್ ಯಲ್ಲಪ್ಪಾ ಸುಬೇದಾರ ತಿಳಿಸಿದ್ದಾರೆ.
ಪಟ್ಟಣದ ಚಂದಾಪುರ ನಗರದಲ್ಲಿರುವ ಮಿನಿ ವಿಧಾನಸೌಧ ಆವರಣದಲ್ಲಿ ಸ್ಥಾಪಿತಗೊಂಡ ಮತದಾನ ಕೇಂದ್ರಕ್ಕೆ ಶಿಕ್ಷಕರು ತಮ್ಮ ಮತ ಚಲಾಯಿಸಲು ಬೆಳಿಗ್ಗೆ 9 ಗಂಟೆಯಿಂದಲೇ ಮತದಾನ ಕೇಂದ್ರಕ್ಕೆ ಬಂದು ತಮ್ಮ  ಹಕ್ಕು ಚಲಾಯಿಸಿದರು.
ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಒಳಪಟ್ಟಿರುವ ಚಿಂಚೋಳಿ ತಾಲೂಕಿನಲ್ಲಿ ಒಟ್ಟು 300 ಶಿಕ್ಷಕ ಮತದಾರರಿದ್ದು ಶುಕ್ರವಾರ ನಡೆದ ಚುನಾವಣೆಯಲ್ಲಿ ಒಟ್ಟು 206 ಶಿಕ್ಷಕರು ತಮ್ಮ ಮತ ಚಲಾಯಿಸಿದ್ದಾರೆ. 173 ಪುರುಷರು ಮತ್ತು 33 ಮಹಿಳೆಯರು ಮತದಾನದ ಹಕ್ಕು ಚಲಾಯಿಸಿದ್ದಾರೆ.
ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ಪರ ಶಾಸಕ ಡಾ.ಉಮೇಶ ಜಾಧವ್ ಮತ್ತು ಕಾರ್ಯಕರ್ತರು ಮತದಾನ ಕೇಂದ್ರದ ಹೊರಗೆ ಶಿಕ್ಷಕರಿಗೆ ಮತಯಾಚಿಸಿದರು. ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಪರವಾಗಿ ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ಮಧುಸೂಧನ ಕಾಟಾಪೂರ, ಸಿ.ಬಿ.ಪಾಟೀಲ್, ಕಾಲೇಜು ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಹಾಗೂ ಪಕ್ಷದ ಮುಖಂಡರಾದ ಶ್ರೀಧರ ಪಾಟೀಲ್, ವಿಷ್ಣುಕಾಂತ ಮೂಲಗೆ, ಮಲ್ಲಿಕಾರ್ಜುನ ಹಡಪದ ಇನ್ನಿತರರು ಶಿಕ್ಷಕರಲ್ಲಿ ಮತಯಾಚಿಸಿದರು.
ಜೆಡಿ(ಎಸ್) ಅಭ್ಯರ್ಥಿ ಮಹಾಂತಪ್ಪಾ ಅಂಬಲಗಿ ಪರ ಯಾರು ಮತಯಾಚಿಸಲಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರೇ ಮತದಾನ ಕೇಂದ್ರದಲ್ಲಿ ಹೆಚ್ಚಾಗಿ ಜಮಾಯಿಸಿದರು. ಚಿಂಚೋಳಿ ಪೋಲಿಸರು ಸೂಕ್ತ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದರು.
ಜೇವರ್ಗಿ: ಶಾಂತಿಯುತ
ಜೇವರ್ಗಿ: ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶಾಂತಿಯುತ ಮತದಾನವಾಗಿದೆ. ತಾಲೂಕಿನಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಶಿಕ್ಷಕರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ಕಂಡು ಬಂತು. ಪಟ್ಟಣದ ಹಳೆ ತಹಸೀಲ್ದಾರ್ ಕಚೇರಿ ಹಾಗೂ ಯಡ್ರಾಮಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆಗಳಿಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ತಹಸೀಲ್ದಾರ್ ಎಂ.ಎನ್. ಚೋರಗಸ್ತಿ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement