ಕಸ ವಿಲೇವಾರಿಗೆ ಹಲವು ತೊಡರು
ಮಂಜುನಾಥ ಸ್ವಾಮಿ
ಯಾದಗಿರಿ: ನಗರದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದೆ. ನಗರಾದ್ಯಂತ ಎಲ್ಲಿ ಸುತ್ತಾಡಿದರೂ, ತೆರೆದ ಚರಂಡಿ, ವಿಲೇವಾರಿಯಾಗದ ಕಸ, ಅವುಗಳ ಮಧ್ಯೆದಲ್ಲೇ ಜನಸಂಚಾರ ದೃಶ್ಯಗಳು ಸಾಮಾನ್ಯ.
ಜಿಲ್ಲಾ ಕೇಂದ್ರ ಜನಸಂಖ್ಯೆ ಸುಮಾರು 80 ಸಾವಿರದಷ್ಟಿದೆ. ಯಾದಗಿರಿ ಹಾಗೂ ಸ್ಟೇಷನ್ ಏರಿಯಾ ಎಂಬ ಎರಡು ಭಾಗಗಳನ್ನು ಒಳಗೊಂಡಿರುವ ನಗರದಲ್ಲಿ ತೆರೆದ ಚರಂಡಿಗಳೇ ಆಧಾರ. ಮನೆಯ ತ್ಯಾಜ್ಯವೆಲ್ಲ ಇದೇ ಚರಂಡಿ ಮೂಲಕ ಹರಿದುಹೋಗಬೇಕು. ಇದರ ಜೊತೆಗೆ ಕಸದ ರಾಶಿಯೂ ಎಲ್ಲೆಡೆ ಕಂಡುಬರುತ್ತಿದೆ. ಚರಂಡಿಗಳು ತೆರದೇ ಇರುವುದರಿಂದ ಕಸವೆಲ್ಲ ಚರಂಡಿಯಲ್ಲಿಯೇ ಸೇರುತ್ತಿದೆ.
ದುರ್ಗಂಧ: ಇದು ಕೇವಲ ಒಂದು ಪ್ರದೇಶದ ಸಮಸ್ಯೆಯಲ್ಲ. ನಗರದ ಪ್ರಮುಖ ಬಡಾವಣೆಗಳು, ಶೈಕ್ಷಣಿಕ ಸ್ಥಳಗಳಲ್ಲಿಯೂ ಇದೇ ಚಿತ್ರಣ. ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿಂಭಾಗದಲ್ಲಂತೂ ದೊಡ್ಡ ಚರಂಡಿ ಇದ್ದು, ಅದರ ಪಕ್ಕದಲ್ಲಿಯೇ ಕಸವನ್ನು ಹಾಕಲಾಗುತ್ತದೆ. ಇದೇ ಮಾರ್ಗದಲ್ಲಿ ನ್ಯೂ ಕನ್ನಡ ಕಾಲೇಜು ಇದ್ದು, ನಿತ್ಯ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಬಸ್ ಇಳಿದು ಕಾಲೇಜಿನ ಹಾದಿ ಹಿಡಿಯುವ ಮುನ್ನ ಎಲ್ಲ ವಿದ್ಯಾರ್ಥಿಗಳು ಮೂಗಿಗೆ ಕರವಸ್ತ್ರ ಹಿಡಿದುಕೊಂಡು ಹೋಗುತ್ತಾರೆ. ಒಂದೆಡೆ ಚರಂಡಿಯೂ ದುರ್ವಾಸನೆಯಾದರೆ, ಇನ್ನೊಂದೆಡೆ ಕಸದ ರಾಶಿಯ ದುರ್ಗಂಧ. ಇನ್ನು ಈ ಚರಂಡಿಗೆ ಹೊಂದಿಕೊಂಡಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಂತೂ ಕೊಠಡಿಗಳಲ್ಲಿ ಕುಳಿತು ಪಾಠ ಕೇಳುವುದು ಅನಿವಾರ್ಯವಾಗಿದೆ. ನಿತ್ಯ ಇದೆ ಗೋಳು ಎನ್ನುತ್ತಾರೆ ಕಾಲೇಜಿನ ವಿದ್ಯಾರ್ಥಿನಿಯರು. ಅಕ್ಕಪಕ್ಕದಲ್ಲಿಯೇ ಎರಡು ಕಾಲೇಜುಗಳಿದ್ದು, ಶಾಲೆಯ ಶಿಕ್ಷಕರು ಹೇಳಿದಾಗ ಮಾತ್ರ ಇಲ್ಲಿ ಸ್ವಚ್ಛತೆ ಕಂಡು ಬರುತ್ತಿದೆ. ದಿನ ಕಳೆದಂತೆ ಮತ್ತದೇ ಸ್ಥಿತಿ. ಹೀಗಾದರೆ, ಪಾಠ ಮಾಡುವುದಕ್ಕೂ ತೊಂದರೆ ಆಗುತ್ತದೆ ಎನ್ನುವುದು ಶಿಕ್ಷಕರ ಗೋಳು.
ಅರಿವಿನ ಕೊರತೆ: ನಗರವೂ ಬೆಳೆಯುತ್ತಿದ್ದರೂ, ಜನರಲ್ಲಿ ಕಸದ ವಿಲೇವಾರಿಯು ಬಗ್ಗೆ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಈ ಹಿಂದೆ ನಗರಸಭೆ ವತಿಯಿಂದ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಕೆಲಸವನ್ನು ಸ್ತ್ರಿಶಕ್ತಿ ಗುಂಪುಗಳಿಗೆ ವಹಿಸಲಾಗಿತ್ತು. ಆದರೆ ಜನರು ಮಾತ್ರ ಹಿಂದೇಟು ಹಾಕಿದ್ದರಿಂದ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಕಾರ್ಯವು ನೆನಗುದಿಗೆ ಬಿತ್ತು.
ನಂತರ ನಗರಸಭೆಯಿಂದ ಪ್ರಯತ್ನ ಮಾಡಿದರೂ, ಜನರು ಕಸವನ್ನು ತೊಟ್ಟಿಗಳಲ್ಲಿ ಹಾಕುತ್ತಿಲ್ಲ. ಹೀಗಾಗಿ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಆಗುತ್ತಿಲ್ಲ ಎನ್ನುತ್ತದೆ ನಗರಸಭೆ.
ಗ್ರಾಮಸ್ಥರ ಆಕ್ರೋಶ: ಇದೀಗ ಒಳಚರಂಡಿ ಕಾಮಗಾರಿ ಆರಂಭವಾಗಿದ್ದು, ಇನ್ನು ವರ್ಷದಲ್ಲಿ ಚರಂಡಿ ಸಮಸ್ಯೆ ನೀಗಲಿದೆ. ಆದರೆ ಕಸದ ವಿಲೇವಾರಿ ಮಾತ್ರ ಪರಿಹಾರ ಕಾಣದಂತಾಗಿದೆ. ಜನರು ಎಲ್ಲ ಕಸವನ್ನು ಚರಂಡಿಯಲ್ಲೇ ಹಾಕುವುದರಿಂದ ಚರಂಡಿ ನೀರು ನಿಂತು ದುರ್ವಾಸನೆ ಬೀರುವಂತಾಗಿದೆ. ನಗರಸಭೆಯ ನಗರದಲ್ಲಿನ ಎಲ್ಲ ಕಸವನ್ನು ತೆಗೆದುಕೊಂಡು ಹೋಗಿ ಯಾದಗಿರಿ ಹೊರವಲಯದಲ್ಲಿರುವ ಬಬಲಾದ ಗ್ರಾಮದ ಹತ್ತಿರ ಇರುವ ಸುಮಾರು 20ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸಂಗ್ರಹ ಮಾಡುತ್ತಿದೆ.
ಮೊದಲೇ ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣುವ ರಸ್ತೆ, ಕುಡಿವ ನೀರು, ಶೌಚಾಲಯ ಇತ್ಯಾದಿ ಸಮಸ್ಯೆಗಳು ಹಾಸುಹೊಕ್ಕಾಗಿವೆ. ಇವೆಲ್ಲ ಸಮಸ್ಯೆಗಳ ಬಗ್ಗೆ ಜನ ತೆಲೆಕೆಡಿಸಿಕೊಂಡಿಲ್ಲ. 20ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ದಿನೇ ದಿನೇ ಬೆಟ್ಟದಂತೆ ಬೆಳೆಯುತ್ತಿರುವ ತ್ಯಾಜ್ಯದ ಬಗೆ ಇಡೀ ಗ್ರಾಮಸ್ಥರು ಅನೇಕ ಬಾರಿ ಅಧಿಕಾರಿಗಳ ಮುಂದೆ ತಮ್ಮ ನೋವನ್ನು ತೋಡಿಕೊಂಡು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರ ಆಕ್ರೋಶ.