ಕಾಲುವೆಗೆ ಅಕ್ರಮ ಮರಳು
ಯಾದಗಿರಿ: ಕೆಬಿಜೆಎನ್ನೆಲ್ನಿಂದ ನಡೆಯುತ್ತಿರುವ ನಾರಾಯಣಪುರ ಎಡದಂಡೆ ಕಾಲುವೆ ನಿರ್ಮಾಣ ಕಾಮಗಾರಿಗೆ ಅಕ್ರಮ ಮರಳು ಸಾಗಿಸುತ್ತಿದ್ದಾರೆಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆರೊಪಿಸಿದ್ದಾರೆ.
ಸರ್ಕಾರಕ್ಕೆ ಯಾವುದೇ ರೀತಿಯ ಕಂದಾಯ ಕಟ್ಟದೆ ಸರ್ಕಾರಿ ಕೆಲಸಗಳಿಗೆ ಗುತ್ತಿಗೆದಾರರು ದಿನಗಟ್ಟಲೇ ಮರಳು ಸಂಗ್ರಹಣೆ ಮಾಡಿ ಎಗ್ಗಿಲ್ಲದೇ ಸಾಗಿಸುತ್ತಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ತಾಲೂಕಿನ ಹೆಡಗಿಮದ್ರಿ, ತಯಳಕ, ಠಾಣಗುಂದಿ, ಬೋಮ್ಮಶೆಟ್ಟಹಳ್ಳಿ, ಹೋರುಂಚಿ, ಅಲ್ಲೀಪುರ, ಅರಕೇರಾ(ಬಿ), ಖಾನಳ್ಳಿ, ವಡ್ನಳ್ಳಿ, ಯರಗೊಳ ಸೇರಿದಂತೆ ಇನ್ನಿತರ ಗ್ರಾಮಗಳ ಮೂಲಕ ಹಾದು ಹೋಗುವ ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್ ಮೂಲಕ ಏತ ನೀರಾವರಿ ಕಾಮಗಾರಿಗಳಿಗೆ ಟನ್ಗಟ್ಟಲೇ ಮರಳು ಸಂಗ್ರಹಿಸಿದ್ದರೂ ಸಂಬಂಧಿತ ಅಧಿಕಾರಿಗಳು ಮಾತ್ರ ಕಂಡೂ ಕಾಣದಂತಿದ್ದಾರೆ. ಕಾಮಗಾರಿಗೆ ಕಳಪೆ ಗುಣಪಟ್ಟದ ಮರಳು ಉಪಯೋಗಿಸುತ್ತಿದ್ದು, ಇದರ ಬಗ್ಗೆ ತನಿಖೆಯಾಗಬೇಕು. ಇಲ್ಲದಿದ್ದರೆ ಜೂ.23ರಂದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.