ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚರಂಡಿ ದುರ್ಗಂಧದ ಪುರ

Vishwanath S
Updated On : 24 Jun 2014, 11:34 am

ಕನ್ನಡಪ್ರಭ ವಾರ್ತೆ  ಸುರಪುರ  ಜೂ.23
ಪಟ್ಟಣದ ಪುರಸಭೆ ವ್ಯಾಪ್ತಿಯ 27 ವಾರ್ಡ್‌ಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಕೆಲ ವಾರ್ಡ್‌ಗಳಲ್ಲಿ ಚರಂಡಿಗಳಲ್ಲಿ ಕಸ- ಕಡ್ಡಿ ಘನ ತ್ಯಾಜ್ಯ ತುಂಬಿದ್ದು, ನೀರು ಹರಿಯದೆ ಗಬ್ಬೆದ್ದು ನಾರುತ್ತಿವೆ ಎಂದು ನಾಗರಿಕರು ಆರೋಪಿಸಿದ್ದಾರೆ.
  ರಂಗಂಪೇಟೆ- ಸುರಪುರ ಅವಳಿ ನಗರಗಳಲ್ಲಿ 50 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಈಗಾಗಲೇ ಪುರಸಭೆ ನಗರಸಭೆ ಆಗುವ ಹೊಸ್ತಿಲಲ್ಲಿ ಬಂತು ನಿಂತಿದೆ. ಪಟ್ಟಣ ಬೆಳೆದೆಂತೆಲ್ಲಾ ಮೂಲಸೌಲಭ್ಯಗಳ ಅವಶ್ಯಕತೆ ಕೂಡಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಅದಕ್ಕೆ ಸರಿಯಾಗಿ ಪುರಸಭೆಯ ಕೆಲಸ ಮಾಡದಿರುವುದರಿಂದ ಪಟ್ಟಣದಲ್ಲಿ ಅನೈರ್ಮಲ್ಯ ಹೆಚ್ಚಾಗಿದ್ದು ನಾಗರಿಕರು ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
  ಗಾಂಧಿ ವೃತ್ತದಿಂದ ತರಕಾರಿ ಮಾರುಕಟ್ಟೆಗೆ ಹೋಗುವ ದರ್ಬಾರ್ ಶಾಲೆ ಹತ್ತಿರ ಚರಂಡಿ ತುಂಬಿ ಅದರ ನೀರು ರಸ್ತೆ ಮೇಲೆ ಹರಿಯುತ್ತಿದೆ. ಚರಂಡಿ ಪಕ್ಕದಲ್ಲಿ ಕುಳಿತುಕೊಳ್ಳುವ ಬೀದಿ ವ್ಯಾಪಾರಿಗಳು ದಿನನಿತ್ಯ ಮೂಗು ಮುಚ್ಚಿಕೊಂಡೇ ವ್ಯಾಪಾರ ಮಾಡುವ ದೃಶ್ಯ ಸಾಮಾನ್ಯವಾಗಿದೆ.
ನೈರ್ಮಲ್ಯಾಧಿಕಾರಿ ಹೇಳೋದೇನು?: ಪಟ್ಟಣದಲ್ಲಿ 16 ವಾರ್ಡ್‌ಗಳಿಗೆ 22 ಪೌರ ಕಾರ್ಮಿಕರು ಹಾಗೂ ರಂಗಂಪೇಟೆಯ 11 ವಾರ್ಡ್‌ಗಳಿಗೆ 13 ಕಾಯಂ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಾರೆ. ಒಟ್ಟು 27 ವಾರ್ಡ್‌ಗಳಲ್ಲಿ 35 ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಕೆಲ ಅನಿವಾರ್ಯ ಸಂದರ್ಭದಲ್ಲಿ ದಿನಗೂಲಿ ರೂಪದಲ್ಲಿ ಇನ್ನಷ್ಟು ಕಾರ್ಮಿಕರನ್ನು ಸೇವೆಗೆ ತೆಗೆದುಕೊಂಡು ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ನೈರ್ಮಲ್ಯ ಅಧಿಕಾರಿ ಜೀವನಕುಮಾರ ತಿಳಿಸಿದ್ದಾರೆ.
ಖಾಲಿ ಹುದ್ದೆಗಳು: ಪುರಸಭೆಯಲ್ಲಿ ನೈರ್ಮಲ್ಯ ನಿರೀಕ್ಷಕರ 3 ಹುದ್ದೆಗಳು ಖಾಲಿ ಇರುವುದರಿಂದ ಪಟ್ಟಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ರಂಗಂಪೇಟೆ ಪರನಾಲೆ ಮೊಹಲ್ಲಾ, ಪರ್ಕಿ ಮಜೀದ್, ತಿಮ್ಮಾಪುರ ದೊಡ್ಡ ಮಸೀದಿ ಹತ್ತಿರವಿರುವ ಚರಂಡಿ ಪಕ್ಕದಲ್ಲಿ ಹಾಗೂ ಇನ್ನಿತರ ಕಡೆ ಕಂಟೇನರ್(ಕಸದ ತೊಟ್ಟಿ) ಇಡಲಾಗಿದೆ. ಆದರೆ ಅವು ಇಂದು ಕಾಣಸಿಗುತ್ತಿಲ್ಲ. ಹೀಗಾಗಿ ಆ ಗಲ್ಲಿಯ ನಾಗರಿಕರು ಕಸ ಕಡ್ಡಿ, ತ್ಯಾಜ್ಯ ವಸ್ತುಗಳನ್ನು ಚರಂಡಿಗೆ ಎಸೆದು, ಮತ್ತಷ್ಟು ಗಲೀಜು ಸೃಷ್ಟಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
ವೆಂಕಟಾಪುರದಲ್ಲಿ ಘಟಕ: ತ್ಯಾಜ್ಯ ವಿಲೇವಾರಿ ಘಟಕವು ಪಟ್ಟಣದಿಂದ 4 ಕಿಮೀ ಅಂತರದಲ್ಲಿರುವ ವೆಂಕಟಾಪುರದಲ್ಲಿದ್ದು, ಪಟ್ಟಣದ ಎಲ್ಲ ಘನತ್ಯಾಜ್ಯ ವಸ್ತುಗಳನ್ನು ಅಲ್ಲೇ ವಿಲೇವಾರಿ ಮಾಡಲಾಗುತ್ತದೆ. ಒಟ್ಟು 27 ವಾರ್ಡುಗಳಿಗೆ 16 ಕಂಟೇನರ್‌ಗಳಿದ್ದು, ಇನ್ನೂ 20 ಕಂಟೇನರ್‌ಗಳ ಅವಶ್ಯಕತೆಯಿದೆ. ಜತೆಯಲ್ಲಿ 38 ನೌಕರರು, 8 ಜನ ಲೂಡರ್, 2 ಕ್ಲೀಪರ್ ಬೇಕಾಗಿದ್ದಾರೆ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಾರೆ. ಇಷ್ಟೆಲ್ಲಾ ಕೊರತೆ ಮಧ್ಯೆಯೂ ಪಟ್ಟಣಗಳ ಸ್ವಚ್ಛತೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ. ಸ್ವಚ್ಛತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ ಎನ್ನುತ್ತಾರೆ ಅವರು.
 ಒಟ್ಟಾರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾಳಜಿ ವಹಿಸಿ ಪುರಸಭೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಈ ಮೂಲಕ ಪಟ್ಟಣದ ಸ್ವಚ್ಛತೆಗೆ ನೆರವಾಗಬೇಕು ಎನ್ನುತ್ತಾರೆ ನಾಗರಿಕರು.
ಸಿಬ್ಬಂದಿ ಕೊರತೆ ಮಧ್ಯೆಯೇ ಪಟ್ಟಣದ ನೈರ್ಮಲ್ಯ ವೈವಸ್ಥೆ ಸುಧಾರಣೆಗೆ ಪ್ರಯತ್ನಿಸಲಾಗುತ್ತಿದೆ. ಅಸ್ವಚ್ಛತೆ ಪ್ರದೇಶಗಳ ಬಗ್ಗೆ ಜನತೆ ತಿಳಿಸಿದರೆ ತಕ್ಷಣ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು.
 ದೇವಿಂದ್ರಪ್ಪ ಕಳ್ಳಿಮನಿ, ಪುರಸಭೆ ಅಧ್ಯಕ್ಷರು
ಪಟ್ಟಣದ ಸ್ವಚ್ಛತೆಗೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ನೀರಿನ ಜತೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಅಸ್ವಚ್ಛತೆ ಬಗ್ಗೆ ದೂರು ಬಂದರೆ ತಕ್ಷಣ ಅಲ್ಲಿಗೆ ಹೋಗಿ ಕೆಲಸ ಮಾಡುವಂತೆ ಪೌರ ಕಾರ್ಮಿಕರಿಗೆ ತಿಳಿಸಲಾಗುವುದು.
 ಏಜಾಜ್ ಹುಸೇನ್, ಪುರಸಭೆ ಮುಖ್ಯಾಧಿಕಾರಿ
ಅನೇಕ ವಾರ್ಡ್‌ಗಳಲ್ಲಿ ಕಸ ತಾಂಡವವಾಡುತ್ತಿದ್ದು, ರೋಗ ರುಜಿನಿಗಳಿಗೆ ಆಹ್ವಾನಿಸುತ್ತಿದೆ. ಮಳೆಗಾಲ ಪ್ರಾರಂಭವಾಗಿದ್ದು ಯಾವುದೇ ಸಂದರ್ಭದಲ್ಲಿ ಮಳೆ ಬರುತ್ತದೆ. ಅಸ್ವಚ್ಛತೆಯಿಂದ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಯಿದ್ದು, ಪುರಸಭೆ ಸ್ವಚ್ಛತೆಗೆ ಆದ್ಯತೆ ನೀಡಬೇಕು.
 ದೇವಿಂದ್ರ, ಪಟ್ಟಣ ನಿವಾಸಿ


-ಮಲ್ಲು ಗುಳಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement