ಬಿಸಿಲನಗರಿ ಕಸದ ಉರಿ
ಗುಲ್ಬರ್ಗ: ಮಹಾನಗರದಲ್ಲೀಗ ನೆಮ್ಮದಿ ಹರಣವಾಗಿದೆ ಎಂದರೆ ಅದಕ್ಕೆ 'ಕಸ'ಬ್ನೇ ಕಾರಣ. 55 ವಾರ್ಡ್ ಹೊಂದಿರುವ ನಗರದಲ್ಲಿ ನಿತ್ಯವೂ 160ರಿಂದ 190 ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದನ್ನು ವೈಜ್ಞಾನಿಕವಾಗಿ ಹೊರಗಡೆ ಸಾಗಿಸುವ, ಅದನ್ನು ವಿಲೇವಾರಿ ಮಾಡುವ ಸೂಕ್ತ ವ್ಯವಸ್ಥೆ ಆಗಿಲ್ಲ. ದಿನೇ ದಿನೇ ಕಸದ ರಾಶಿ ನಗರವನ್ನು ಆಕ್ರಮಿಸಿಕೊಳ್ಳುತ್ತಿದೆ. ವಾತಾವರಣವನ್ನು ವಿಷಕಾರಿಯನ್ನಾಗಿಸಿದೆ.
ಹಾದಿಬೀದಿಯಲ್ಲೆಲ್ಲಾ ಕಸ,ಕೊಚ್ಚೆಯದ್ದೇ ರಾಶಿ. ಜನರಂತೂ ಮೂಗು ಮುಚ್ಚಿಕೊಂಡೇ ಅಡ್ಡಾಡುವ ದುರಾವಸ್ಥೆ ಇಲ್ಲಿ ಕಂಡಿದೆ. ಇನ್ನೇನು ಮಳೆಗಾಲ ಶುರು, ಕಸದ ರಾಶಿಗೆ ನೀರು ಬಿದ್ದು ಇದ್ದಲ್ಲೇ ಕೊಳೆತು ನಾರುವ ಸಾಧ್ಯತೆ ಇರುವುದರಿಂದ ನಗರಿಗರು ಆತಂಕಿತರಾಗಿದ್ದಾರೆ. 6 ಲಕ್ಷ ಜನ ವಸತಿಯ ಗುಲ್ಬರ್ಗದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸ ವಿಲೇವರಿಗೆ ಟಿಪ್ಪರ್, ಜೆಸಿಬಿ, ಮಿನಿ ಟಿಪ್ಪರ್ನಂತಹ ಹತ್ತಾರು ಯಂತ್ರಗಳನ್ನು ಐದಾರು ಕೋಟಿ ರುಪಾಯಿ ವೆಚ್ಚ ಮಾಡಿ ಖರೀದಿಸಿದೆ. ಆದರೆ ಈ ಯಂತ್ರಗಳಿಗೆ ತಕ್ಕಂತೆ ಸೂಕ್ತ ತರಬೇತಾದ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಯಂತ್ರಗಳ ನಿರೀಕ್ಷಿತ ಬಳಕೆಯಾಗದ ಕಾರಣ ಪಾಲಿಕೆಯ 'ದುಂದುವೆಚ್ಚ' ಎನ್ನುವ ಸ್ಥಿತಿಗೆ ತಲುಪಿದೆ. ಪೌರ ಕಾರ್ಮಿಕರು, ತರಬೇತಾದ ಸಿಬ್ಬಂದಿ, ನೈರ್ಮಲ್ಯ ನಿರೀಕ್ಷಕರು (ನಿಟರಿ ಇನ್ಸಪೆಕ್ಟರ್) ಸೇರಿದಂತೆ ಬೇರು ಮಟ್ಟದಲ್ಲಿ ನೈರ್ಮಲ್ಯ ಕೆಲಸ ಕಾರ್ಯಗಳನ್ನು ನಿರ್ವಹಿಸುವ, ಅವುಗಳ ಮೇಲೆ ನಿಗಾ ಇಡುವ ಸಿಬ್ಬಂದಿ ಬರ ತೀವ್ರವಾಗಿ ಕಾಡುತ್ತಿದೆ.
ಪೌರ ಕಾರ್ಮಿಕರ ಬರ
1 ಸಾವಿರ ಜನ ವಸತಿಗೆ ಒಬ್ಬರಂತೆ ಪೌರ ಕಾರ್ಮಿಕ ಇರಬೇಕು. ಗುಲ್ಬರ್ಗ ಜನ ವಸತಿ 6 ಲಕ್ಷ. ನಗರಕ್ಕೆ ನಿತ್ಯ ಬಂದು ಹೋಗುವವರ ಸಂಖ್ಯೆ ಸುಮಾರು 1 ಲಕ್ಷ. 7 ಲಕ್ಷ ಜನವಸತಿಯಿಂದ ಉತ್ಪತ್ತಿಯಾಗುವ ಕಸ ವಿಲೇವರಿಗೆ ನಿಯಮದಂತೆ 700 ಪೌರ ಕಾರ್ಮಿಕರು ಕೆಲಸಕ್ಕಿರಬೇಕು. ಆದರೆ ಇಲ್ಲಿರುವ ಪೌರ ಕಾರ್ಮಿಕರ ಸಂಖ್ಯೆ 200 ದಾಟಿಲ್ಲ. ಕನಿಷ್ಟ 500 ಪೌರ ಕಾರ್ಮಿಕರ ಅಗತ್ಯತೆ ನಗರಕ್ಕಿದೆ.
ಹಳೇ ಗುಲ್ಬರ್ಗದಲ್ಲಿ ಸಮಸ್ಯೆ ಉಲ್ಬಣ
ವಾರ್ಡ್ 1ರಿಂದ 35ರ ವರೆಗಿನ ವ್ಯಾಪ್ತಿಯ ಹಳೆ ಗುಲ್ಬರ್ಗ ಪ್ರದೇಶದಲ್ಲಿ ಕಸ ವಿಲೇವಾರಿ ಪಾಲಿಕೆಗೆ ಬಹುದೊಡ್ಡ ತಲೆನೋವಾಗಿದೆ. ದಟ್ಟ ಜನವಸತಿ ಇದ್ದು, ತರಕಾರಿ ಮಾರುಕಟ್ಟೆ, ಕಸಾಯಿಖಾನೆಗಳು ಅಧಿಕವಾಗಿವೆ. ಹೀಗಾಗಿ ನಿತ್ಯವೂ ಇಲ್ಲಿ 100ಕ್ಕೂ ಅಧಿಕ ಟನ್ ಕಸ ಹಳೆ ಗುಲ್ಬರ್ಗ ಪ್ರದೇಶದಿಂದಲೇ ಉತ್ಪತ್ತಿಯಾಗುತ್ತಿದೆ. ಮಳೆ ಬಂದರಂತೂ ಹಳೆ ಗುಲ್ಬರ್ಗದಲ್ಲಿ ಕಾಲಿಡಲೂ ಆಗದಂತಹ ವಾತಾವರಣ ನಿರ್ಮಾಣವಾಗುತ್ತದೆ. ಮೊದಲೇ ಕಸದ ರಾಶಿ, ಅದಕ್ಕೆ ಚರಂಡಿ ನೀರು ಬಂದು ಸೇರುತ್ತದೆ. ಇದಕ್ಕಿಂತ ಇನ್ನೇನು ಬೇಕು ಕೊಳಕು ಸೃಷ್ಟಿಗೆ?
3 ವಲಯಗಳಾಗಿ ವಿಭಜನೆ
ಕಸ ವಿಲೇವಾರಿ ದೃಷ್ಟಿಯಿಂದ ನಗರದ 55 ವಾರ್ಡ್ಗಳನ್ನು 3 ವಲಯಗಳಾಗಿ ವಿಂಗಡಿಸಲಾಗಿದೆ. ಇವುಗಳಿಗೆ ತಲಾ 15 ರಿಂದ 20 ವಾರ್ಡ್ ಹಂಚಿಕೆ ಮಾಡಲಾಗಿದೆ. ಆದರೂ ಕಸ ವಿಲೇವಾರಿ ಸಮಸ್ಯೆ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಬಡಾವಣೆಗಳ ಕಸದ ಪಾಯಿಂಟ್ನಿಂದ ಹಿಡಿದು ಉದನೂರು ಬಳಿ ಇರುವ ಘನತ್ಯಾಜ್ಯ ವಿಲೇವಾರಿ ನಿವೇಶನದವರೆಗೂ ಕಸ ಸಾಗಾಣಿಕೆ ಚಕ್ರ ಸರಿಯಾಗಿ ಇಲ್ಲ. ಈ ಜಾಲ ಅಲ್ಲಲ್ಲಿ ಹರಿದಿದ್ದರಿಂದ ನಗರ ಕಸ ವಿಲೇವಾರಿ ನಿರೀಕ್ಷೆಯಂತೆ ಸುಸೂತ್ರವಾಗಿ ನಡೆಯುತ್ತಿಲ್ಲ.
ಕಸ ವಿಲೇವಾರಿಗೆ ಲಭ್ಯವಿರುವ ಯಂತ್ರಗಳು ಮತ್ತು ಸಿಬ್ಬಂದಿ ಬಲ
ನೈರ್ಮಲ್ಯ ನಿರೀಕ್ಷಕರು 15, ಪ್ರತಿಯೊಬ್ಬರಿಗೆ 4 ರಿಂದ 6 ವಾರ್ಡ್ಗಳನ್ನು ನಿರ್ವಹಿಸುವ ಅನಿವಾರ್ಯತೆ ಇದೆ.
ಆಟೋ ಟಿಪ್ಪರ್ಗಳು 48, ಈ ಸಂಖ್ಯೆ ಪರವಾಗಿಲ್ಲ. ಆದರೆ ಚಾಲಕರು, ಸಿಬ್ಬಂದಿಗಳ ಕೊರತೆ ಇರುವುದರಿಂದ ಅವುಗಳು ಓಡಾಡುವುದೇ ಅಪರೂಪ.
ಟಿಪ್ಪರ್ಗಳು 2, ಇಲ್ಲಿ ತರಬೇತಾದ ಸಿಬ್ಬಂದಿ ಕೊರತೆ ಇದೆ.
ಬೇಕಾಗಿರುವ ಜೆಸಿಬಿ ಯಂತ್ರಗಳು 2
ಲಾರಿ ಮೇಲಿರುವ 2 ಕಸ ವಿಲೇವಾರಿ ವಾಹನಗಳು
200ಕ್ಕೂ ಕಮ್ಮಿ ಪೌರ ಕಾರ್ಮಿಕರು,ಜನಸಂಖ್ಯೆ ಆಧರಿಸಿ 700ಕ್ಕೆ ಒಬ್ಬ ಪೌರ ಕಾರ್ಮಿಕನ ಅಗತ್ಯತೆ ಇದೆ.
3 ವಲಯಗಳಿಗೆ ಒಬ್ಬರಂತೆ 3 ಪರಿಸರ ಇಂಜಿನಿಯರ್ಗಳಿದ್ದಾರೆ.
ಕಸ ವಿಲೇವಾರಿ, ನೈರ್ಮಲ್ಯ ಸಂರಕ್ಷಣೆಗೆ ಇಷ್ಟೆಲ್ಲ ವ್ಯವಸ್ತೆ ಇದ್ದರೂ ಅದ್ಯಾಕೋ ಗುಲ್ಬರ್ಗದ ಕಸದ ರಾಶಿ ಕರಗುತ್ತಿಲ್ಲ, ನೈರ್ಮಲ್ಯ ಸಂರಕ್ಷಣೆಯೇ ಸವಾಲು.
-ಶೇಷಮೂರ್ತಿ ಅವಧಾನಿ