ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಈಶಾನ್ಯ ಶಿಕ್ಷಕ ಮತಕ್ಷೇತ್ರ 'ಕೈ' ವಶ

Rashmi Kasaragodu
Updated On : 25 Jun 2014, 11:37 am

ಕ.ಪ್ರ. ವಾರ್ತೆ    ಗುಲ್ಬರ್ಗ    ಜೂ. 24
ಇದೇ ಮೊದಲ ಬಾರಿಗೆ ಈಶಾನ್ಯ ಶಿಕ್ಷಕರ ಮತಕ್ಷೇತ್ರ 'ಕೈ' ವಶವಾಗಿದೆ. ಕಾಂಗ್ರೆಸ್ ಅಭ್ಯರ್ಥಿ, ಹೈಕೋರ್ಟ್ ಹಿರಿಯ ವಕೀಲ, ರಾಯಚೂರು ಮೂಲದ ಶರಣಪ್ಪ ಮಟ್ಟೂರ್ ಈ ಕ್ಷೇತ್ರದಿಂದ ಜಯಭೇರಿ ಬಾರಿಸಿದ್ದಾರೆ.
ಕ್ಷೇತ್ರ ರಚನೆಯಾದ 1978ರಿಂದಲೂ ಇಲ್ಲಿಯವರೆಗೆ ಈ ಕ್ಷೇತ್ರ ಕಂಡ 6 ಚುನಾವಣೆಗಳಲ್ಲಿ 2 ಬಾರಿ ಜನತಾ ಪಕ್ಷಕ್ಕೆ(ಡಾ. ಮಲಕರೆಡ್ಡಿ ಎ.ಬಿ., ವೈಜನಾಥ ಪಾಟೀಲ್ ಗೆದ್ದಿದ್ದರು) ಒಲಿದಿದ್ದು ಬಿಟ್ಟರೆ 4 ಬಾರಿ ಈ ಕ್ಷೇತ್ರ ಬಿಜೆಪಿಗೆ(1 ಬಾರಿ ಬಸವರಾಜ ಪಾಟೀಲ್ ಸೇಡಂ, ಶಶಿಲ್ ನಮೋಶಿ 3 ಬಾರಿ) ಒಲಿದಿತ್ತು. ಆದರೆ ಈ ಬಾರಿ ಕಮಲದ ಭದ್ರಕೋಟೆಯಾಗಿದ್ದ ಈಶಾನ್ಯ ಶಿಕ್ಷಕ ಮತಕ್ಷೇತ್ರವನ್ನು ಕೈಪಡೆ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
ರಾಯಚೂರು ಮೂಲದ ಹೈಕೋರ್ಟ್ ವಕೀಲರಾಗಿರುವ ಶರಣಪ್ಪ ಮಟ್ಟೂರ್ ಅವರು 9,022 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಶಶಿಲ್ ನಮೋಶಿ ಅವರನ್ನು 2,089 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ರಾಯಚೂರು ಮೂಲದವರು: ಈಶಾನ್ಯ ಕ್ಷೇತ್ರವನ್ನು ಇದುವರೆಗೂ ಗುಲ್ಬರ್ಗದವರೇ ಪ್ರತಿನಿಧಿಸಿದ್ದರು. ಇದೇ ಮೊದಲ ಬಾರಿಗೆ ಈ ಕ್ಷೇತ್ರದಿಂದ ರಾಯಚೂರು ಮೂಲದವರೊಬ್ಬರು ಗೆದ್ದಿರುವುದು ಸಹ ವಿಶೇಷ. ಶರಣಪ್ಪ ಮಟ್ಟೂರ್ ಪದವಿಧರ ಮತಕ್ಷೇತ್ರದಿಂದಲೂ ಕಳೆದ ಬಾರಿ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸರ್ವರ ಗಮನ ಸೆಳೆದಿದ್ದರು. ಆದರೆ ಈ ಬಾರಿ ವಿಜಯಲಕ್ಷ್ಮೀ ಇವರಿಗೆ ಒಲಿದಿದ್ದು ಈಶಾನ್ಯ ಮತಕ್ಷೇತ್ರದಲ್ಲಿ ಕೈ ಇದೇ ಮೊದಲ ಬಾರಿಗೆ ತನ್ನ ಖಾತೆ ತೆರೆದಂತಾಗಿದೆ.
ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಹಾಗೂ ಹರಪನಹಳ್ಳಿ(ದಾವಣಗೆರೆ ಜಿಲ್ಲೆ) ವ್ಯಾಪ್ತಿ ಈ ಮತಕ್ಷೇತ್ರದ್ದಾಗಿದೆ. ಕೈ ಇಲ್ಲಿ ಗೆಲವು ಸಾಧಿಸಿರುವುದು ಈ ಭಾಗದಲ್ಲಿನ ರಾಜಕೀಯ ಸಮೀಕರಣಗಳ ಮೇಲೆ ತನ್ನದೇ ಆದಂತಹ ಪರಿಣಾಮ ಬೀರಿದಂತಾಗಿದೆ.
1,403 ಮತಗಳು ತಿರಸ್ಕೃತ: ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರಕ್ಕೆ ಜೂ.20ರಂದು ಜರುಗಿದ ಮತದಾನದಲ್ಲಿ ಒಟ್ಟು 31,809 ಮತದಾರರ ಪೈಕಿ 19,183 ಮತ ಚಲಾವಣೆಯಾಗಿವೆ. ಚಲಾವಣೆಯಾದ ಒಟ್ಟು ಮತದಾನದಲ್ಲಿ  17,748 ಮತಗಳು ಕ್ರಮಬದ್ಧವಾಗಿವೆ. 1,403 ಮತಗಳು ತಿರಸ್ಕೃತವಾಗಿವೆ. ಇದೇ ಮೊದಲ ಬಾರಿಗೆ ಇದ್ದಂತಹ ಮೇಲ್ಕಂಡ ಯಾರೂ ಅಲ್ಲ(ನೋಟಾ) ಎಂದು 32 ಮಂದಿ ತಮ್ಮ ಅಭಿಪ್ರಾಯ ತಿಳಿಸಿ ಮತ ಚಲಾಯಿಸಿದ್ದಾರೆ.
ಗುಲ್ಬರ್ಗ ವಿವಿ ಗಣಿತ ಅಧ್ಯಯನ ವಿಭಾಗದಲ್ಲಿ ಮತ ಎಣಿಕೆ ಮಂಗಳವಾರ ನಡೆಯಿತು. ಬಿಗಿ ಭದ್ರತೆಯಲ್ಲಿ ನಡೆದ ಮತ ಎಣಿಕೆಯಲ್ಲಿ ಮುಂಚಿನಿಂದಲೂ ಶರಣಪ್ಪ ಮಟ್ಟೂರ್ ಮುನ್ನಡೆ ಸಾಧಿಸಿಕೊಂಡೇ ಬಂದದ್ದು ವಿಶೇಷವಾಗಿತ್ತು.
ಚುನಾವಣಾಧಿಕಾರಿ ಹಾಗೂ ಗುಲ್ಬರ್ಗ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಆಮ್ಲನ್ ಆದಿತ್ಯ ಬಿಸ್ವಾಸ್ ಮತ ಎಣಿಕೆಯ ಉಸ್ತುವಾರಿ ವಹಿಸಿದ್ದರು. ಚುನಾವಣಾ ವೀಕ್ಷಕ ಎಂ.ಎಸ್. ರವಿಶಂಕರ, ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಜಹೀರಾ ನಶೀಮ್, ಬೀದರ್ ಡಿಸಿ ಡಾ. ಜಾಫರ್, ಗುಲ್ಬರ್ಗ ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್, ಜಿಪಂ ಸಿಇಒ ಟಿ.ಎಚ್.ಎಂ. ಕುಮಾರ್, ಉಪ ವಿಭಾಗೀಯ ಸಹಾಯಕ ಆಯುಕ್ತರು ಮತ ಎಣಿಕೆ ಕಾರ್ಯದಲ್ಲಿ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement