ಹಳ್ಳ ಹಿಡಿದ ಯೋಜನೆ
ವಿಶೇಷ ವರದಿ
ಕ.ಪ್ರ. ವಾರ್ತೆ ಗುರುಮಠಕಲ್ ಜೂ. 24
ಪಟ್ಟಣವನ್ನು ಕಸಮುಕ್ತವಾಗಿಸುವ ಉದ್ದೇಶದಿಂದ ಸರ್ಕಾರ ಪ್ರಾರಂಭಿಸಿದ್ದ ಮಹತ್ವಕಾಂಕ್ಷಿ ಯೋಜನೆ 'ಮನೆ ಮನೆ ಕಸ ಸಂಗ್ರಹ ಯೋಜನೆ'ಯೂ ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಪಟ್ಟಣದಲ್ಲಿ ಕಸ ಸಂಗ್ರಹ ಕಾರ್ಯ ಬಂದ್ಆಗಿ ಕಸಯುಕ್ತ ಪಟ್ಟಣವಾಗಿ ಮಾರ್ಪಟ್ಟಿದೆ.
ಮೂಲೆಗುಂಪಾದ ಕಸ ಸಂಗ್ರಹ ಬಂಡಿ: ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವ ಯೋಜನೆಗೆ ಕಳೆದ ಎರಡು ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇ ಬಂತು. ಅದರೆ ಅದು ಸರಿಯಾಗಿ ಮೂರು ತಿಂಗಳ ಕಾಲ ಕೂಡ ನಡೆಯದೆ ಯೋಜನೆ ಮೂಲೆ ಗುಂಪಾಯಿತು. ಕಸ ಸಂಗ್ರಹಣೆಗೆ ಬೇಕಾದ ಕಾರ್ಮಿಕರ ಕೊರತೆ ಹಾಗೂ ಕಸ ಸಂಗ್ರಹಕ್ಕೆ ಜನತೆ ಸರಿಯಾದ ರೀತಿಯಲ್ಲಿ ಹಣ ಪವಾತಿ ಮಾಡದೆ ಇರುವ ಹಿನ್ನೆಲ್ಲೆಯಲ್ಲಿ ಮಹಾತ್ವಕಾಂಕ್ಷಿ ಯೋಜನೆಯೂ ಮೂಲೆ ಗುಂಪಾಗಿದೆ.
ಇಲ್ಲಿನ ಪಟ್ಟಣದಲ್ಲಿ ಸುಮಾರು 30ಕ್ಕೂ ಹೆಚ್ಚು ಕಾರ್ಮಿಕರು ಸ್ವಚ್ಛತೆಯ ದೃಷ್ಟಿಯಿಂದ ಬೇಕಾಗುತ್ತಾರೆ. ಸದ್ಯ 20 ಜನ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮನೆ ಮನೆಗೆ ಕಸ ಸಂಗ್ರಹ ಯೋಜನೆಯಾಡಿ ಜನತೆ ಹಣ ನೀಡದೆ ಇರುವ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತವಾಗಿತ್ತು. ನಿಯಮಿತವಾಗಿ ಕಸ ಸಂಗ್ರಹದ ಹಣ ಪಡೆಯುತ್ತ ಕಸ ಸಂಗ್ರಹಿಸುವ ಯೋಜನೆ ರೂಪಿಸಲಾಗುತ್ತಿದೆ. ಮನೆ ಮನೆಗೆ ಕಸ ಸಂಗ್ರಹ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಲಾಗುತ್ತದೆ.
ರವೀಂದ್ರ ವೈ. ಲಂಬು, ಮುಖ್ಯಾಧಿಕಾರಿ, ಪಪಂ
ಹಿಂದಿನ ಯೋಜನೆಗೆ ಹಿನ್ನಡೆಯಾಗಲು ಇರುವ ಕಾರಣಗಳ ಬಗ್ಗೆ ತಿಳಿದುಕೊಳ್ಳಲಾಗಿದೆ. ಅದರ ಬಗ್ಗೆ ಗಮನ ಹರಿಸಿ ಆದಷ್ಟು ಬೇಗ ಮನೆ ಮನೆಗೆ ಕಸ ಸಂಗ್ರಹ ಯೋಜನೆಗೆ ಚಾಲನೆ ದೊರೆಯುವಂತೆ ಅಧಿಕಾರಿಗಳಿಗೆ ಸೂಚಿಸಿ ಚಾಲನೆ ನೀಡಲಾಗುವುದು.
ರೇಣುಕಾ ಸಂಜೀವ ಕುಮಾರ, ಪಪಂ ಅಧ್ಯಕ್ಷೆ