ನೀರು ಪೂರೈಕೆಯಲ್ಲಿ ತಾರತಮ್ಯ
ಯಾದಗಿರಿ: ದಲಿತ ವಾರ್ಡ್‌ನಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಇಲ್ಲಿಯ ಸಮೀಪದ ಜೋಗುಂಡಬಾವಿ ಗ್ರಾಮದ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು. ಗ್ರಾಮದ ರಾಯನಗೋಳ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ಗುಮ್ಮಿಗಳಿಗೆ ಸುಮಾರು 2 ವರ್ಷಗಳು ಕಳೆದರೂ ನೀರು ಬರುತ್ತಿಲ್ಲ. ಈ ಕುರಿತು ಗ್ರಾಪಂ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ಹಾಗೂ ಮೌಖಿಕವಾಗಿ ನೂರು ಬಾರಿ ತಿಳಿಸಿದರೂ ಗಮನ ಹರಿಸುತ್ತಿಲ್ಲ, ಹೀಗಾಗಿ ಪ್ರತಿಭಟನೆ ಅನಿವಾರ್ಯ ಎಂದು ಸಂಘಟನೆಯ ಮುಖ್ಯಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜೋಗುಂಡಬಾವಿ ಗ್ರಾಮವು ಗ್ರಾಮ ಪಂಚಾಯಿತಿ ಹೊಂದಿದ್ದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಿಂಗಳಿಗೊಮ್ಮೆ ಇತ್ತ ಬರುತ್ತಾರೆ. ಹೀಗಾಗಿ ನೂರಾರು ಸಮಸ್ಯೆಗಳು ಕಾಡುತ್ತಿವೆ. ಗ್ರಾಮದ ತುಂಬೆಲ್ಲ ನೀರು ಬರುತ್ತಿದ್ದರೂ ದಲಿತ (ಭಜಂತ್ರಿ) ಜನಾಂಗ ವಾಸಿಸುವ ಈ ವಾರ್ಡ್‌ನಲ್ಲಿ ನೀರು ಬರುತ್ತಿಲ್ಲ, ಈ ತಾರತಮ್ಯವೇಕೆ? ನಾವೇನೂ ತಪ್ಪು ಮಾಡಿದ್ದೀವಿ ಎಂದು ಕಿಡಿಕಾರಿದ್ದಾರೆ. ನಂತರ ಪಿಡಿಒ ಜತೆ ಮಾತನಾಡಿದಾಗ ಎರಡು ದಿನದಲ್ಲೇ ಭಜಂತ್ರಿ ವಾರ್ಡ್‌ಗೆ ಕುಡಿಯುವ ನೀರಿನ ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ದಸಂಸ ತಾಲೂಕು ಘಟಕದ ಮುಖ್ಯಸ್ಥ ನಾಗರಾಜ ದೊಡ್ಡಮನಿ, ಕೊಡೇಕಲ್ ವಲಯ ಕರವೇ ಅಧ್ಯಕ್ಷ ರಮೇಶ ಬಿರಾದಾರ, ಆಟೋ ಚಾಲಕರ ಸಂಘದ ತಾಲೂಕು ಸಂಚಾಲಕ ಪ್ರಶಾಂತ ನಾಯಕ ಮತ್ತಿತರು ಉಪಸ್ಥಿತರಿದ್ದರು.
ಹಾಸ್ಟೆಲ್‌ಗೆ ಅರ್ಜಿ ಆಹ್ವಾನ
ಸುರಪುರ: ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಪ್ರಸಕ್ತ ಸಾಲಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ತಿಳಿಸಿದ್ದಾರೆ.
ಪ್ರವೇಶ ಬಯಸುವ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯದಿಂದ ಅಥವಾ ವಿದ್ಯಾರ್ಥಿ ನಿಲಯ ಪಾಲಕರಿಂದ ಪಡೆದು ಭರ್ತಿ ಮಾಡಿ, ಕಾಲೇಜಿನಲ್ಲಿ ಪ್ರವೇಶ ಪಡೆದ ಬಗ್ಗೆ ಪ್ರಾಂಶುಪಾಲರಿಂದ ರುಜು ಪಡೆದು ಜುಲೈ 15 ರೊಳಗಾಗಿ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಬಿಸಿಎಂ ಅಧಿಕಾರಿಗಳು ತಿಳಿಸಿದ್ದಾರೆ.