ರೈಲು ಪ್ರಯಾಣ ದರ ಏರಿಕೆ ವಿರೋಧ ಸಿಪಿಎಂ, ಜೆಡಿಎಸ್ ಪ್ರತಿಭಟನೆ
ಶಹಾಬಾದ್: ಕೇಂದ್ರ ಸರ್ಕಾರ ದಿಢೀರನೇ ರೈಲು ಪ್ರಯಾಣ ದರ ಹಾಗೂ ಗೂಡ್ಸ್ ಸಾಗಣೆ ದರವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ವಾದಿ) ಚಿತ್ತಾಪುರ ತಾಲೂಕು ಘಟಕ ಹಾಗೂ ಜೆಡಿಎಸ್ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಬಸ್ ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯಿಂದಾಗಿ ಜನಸಾಮಾನ್ಯರು ಬೆಲೆ ಏರಿಕೆಯ ಪ್ರಹಾರದಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಜನಸಾಮಾನ್ಯರಿಗೆ ಹೊರೆಯಾಗಿರುವಂಥ ರೈಲು ಪ್ರಯಾಣ ದರ, ಡಿಸೇಲ್ ಹಾಗೂ ಎಲ್ಪಿಜಿ ದರದ ಏರಿಕೆಯನ್ನು ತಕ್ಷಣ ತಡೆಗಟ್ಟಬೇಕೆಂದು ಆಗ್ರಹಿಸಿದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಿಪಿಐ(ಎಂ) ತಾಲೂಕು ಮುಖಂಡ ಅಶೋಕ ಮ್ಯಾಗೇರಿ, ಚಂದು ಜಾಧವ, ಜೆಡಿಎಸ್ ನಗರ ಅಧ್ಯಕ್ಷ ಸೋಮಶೇಖರ ನಂದಿಧ್ವಜ, ಲೋಹಿತ್ ಕಟ್ಟಿ, ರಾಜ ಮಹ್ಮದ ರಾಜಾ, ರಾಜು ರಾಠೋಡ ಇತರರು ಇದ್ದರು.