ಅಪಾಯಕ್ಕೆ ಕಾದಿರುವ ವಿದ್ಯುತ್ ತಂತಿ
ಶಹಾಪುರ: ಪಟ್ಟಣದ ಅಫಜಲ್ ಮಸೀದಿ ಹತ್ತಿರ ವಾರ್ಡ್ ಸಂಖ್ಯೆ-5 ರಲ್ಲಿ ಬೇವಿನ ಮರದ ಕೆಳಗೆ ವಿಧ್ಯುತ್ ತಂತಿಗಳು ಹಾದು ಹೋಗಿರುವ ಕಾರಣಕ್ಕೆ ಗಾಳಿ, ಮಳೆ ಬೀಸಿದಾಗ ಬೇವಿನ ಮರಕ್ಕೆ ಬೆಂಕಿ ತಗುಲಿ ರೆಂಬೆಯೊಂದು ಮುರಿದು ಬಿದ್ದಿದೆ. ಬೇರೆ ರೆಂಬೆಗಳು ತಂತಿಗಳಿಗೆ ತಗುಲಿ ಅಪಾಯ ಸಂಭವಿಸಬಹುದು. ಸಂಬಂಧ ಪಟ್ಟ ಇಲಾಖೆಯವರು ಸಮಸ್ಯೆ ಪರಿಹರಿಸಬೇಕೆಂದು ಬಡಾವಣೆಯ ಸಮಾಜ ಕಾರ್ಯಕರ್ತ ಮಹ್ಮದ್ ಅನ್ವರ ಹುಸೇನ್ ಮನವಿ ಮಾಡಿದ್ದಾರೆ. ಈ ಬಗ್ಗೆ ಅನೇಕ ಸಲ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.
ಮಲೇರಿಯಾ ಮಾಸಾಚರಣೆ ಶಿಬಿರ
ಯಾದಗಿರಿ: ಆರೋಗ್ಯ ಕೇಂದ್ರ ಯಾದಗಿರಿ ಮತ್ತು ಎನ್ವಿಡಿಸಿಪಿ ಜಂಟಿಯಾಗಿ ಮಲೇರಿಯಾ ಮಾಸಾಚರಣೆ ಬಗ್ಗೆ ಶಿಬಿರವನ್ನು ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಲಾಗಿತ್ತು. ಮಲೇರಿಯಾ ರೋಗವು ಜೂನ್ ತಿಂಗಳಲ್ಲಿ ಪ್ರಾರಂಭವಾಗುವುದರಿಂದ ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯಾಧಿಕಾರಿ ಡಾ.ರಾಜೇಶ್ವರಿ ಹೇಳಿದರು. ಡಾ. ಶಿವಕುಮಾರ ಐ, ಡಿಎಸ್ಪಿ ಪರಮರೆಡ್ಡಿ, ಶರಣಪ್ಪ ಕಾಳ, ಕೆ.ಬಿ. ಪತ್ತರ ಮತ್ತು ಜಂಬಯ್ಯ ರೋಗದ ಬಗ್ಗೆ ಮತ್ತು ಸುರಕ್ಷತೆ ಹಾಗೂ ಸ್ವಚ್ಛತೆಯ ಬಗ್ಗೆ ತಿಳಿಸಿಕೊಟ್ಟರು.