ಜಗಜೀವನ ರಾಂ ಪ್ರತಿಮೆಗೆ ಒತ್ತಾಯಿಸಿ ಧರಣಿ
ಶಹಾಬಾದ್: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಶೇ.22.75ರ ಅನುದಾನದಲ್ಲಿ ಡಾ. ಬಾಬೂಜಿ ಪ್ರತಿಮೆ ಸ್ಥಾಪನೆ ಮಾಡಲು, ಸ್ಥಳೀಯ ಗ್ರಾಮಲೇಖ ಪಾಲಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ವತಿಯಿಂದ ಡಾ. ಅಂಬೇಡ್ಕರ ವೃತ್ತದಲ್ಲಿ ಶುಕ್ರವಾರ ಧರಣಿ ನಡೆಸಲಾಯಿತು. ವೇದಿಕೆಯ ರಾಜ್ಯ ಕಾರ್ಯದರ್ಶಿ ಶರಣಪ್ಪ ವಾಡೇಕರ್ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ, ಸ್ಥಳೀಯ ಗ್ರಾಮ ಲೇಖಪಾಲಕರು ಸಾರ್ವಜನಿಕರಿಂದ ಹಣ ಪಡೆದು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸ್ವತಃ ತಾವೇ ಮಾಡಿಸಿಕೊಡುವ ಕೆಲಸ ಮಾಡತೊಡಗಿದ್ದು ಇವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಡಾ.ಅಂಬೇಡ್ಕರ್ ಸಮುದಾಯ ಭವನವನ್ನು ದುರಸ್ಥಿ ಮಾಡಬೇಕು. ವಾರ್ಡ್ 22ರ ವಿಜಯನಗರದಲ್ಲಿ ಮಹಿಳೆಯರಿಗಾಗಿ ಸಮುದಾಯ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.