ಮಳೆಗಾಗಿ ಮರಗಮ್ಮ ಪೋಚಮ್ಮ ದೇವಿಯರ ಪೂಜೆ
ಚಿಂಚೋಳಿ: ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ ಮಳೆಯ ಅಭಾವ ಉಂಟಾಗಿದ್ದು ಬಿತ್ತನೆ ಕಾರ್ಯ ಸ್ಥಗಿತಗೊಳಿಸಿದ ರೈತರು ಮಳೆರಾಯನ ಆಗಮನಕ್ಕಾಗಿ ಪಟ್ಟಣದಲ್ಲಿನ ಎಲ್ಲ ದೇವಾಲಯ ಮಠಗಳಲ್ಲಿ ಮಳೆಗಾಗಿ ಪ್ರಾರ್ಥನೆ ಮತ್ತು ಭಜನೆಗಳು ಪ್ರಾರಂಭಗೊಂಡಿವೆ. ಪಟ್ಟಣದ ಮಣ್ಣೆತ್ತಿನ ಅಮವ್ಯಾಸೆ ದಿನದಂದು ಇಲ್ಲಿನ ಮರಗಮ್ಮದೇವಿ, ಪೋಚಮ್ಮ ದೇವಿಯರ ವಿಶೇಷ ಪೂಜೆ ನಡೆಸಲಾಗುತ್ತಿದೆ. ಮೈಯಲ್ಲಿ ದೇವರು ಬರುವ ಮಹಿಳೆಯರು ತಮ್ಮ ತಲೆ ಮೇಲೆ ನೀರು ತುಂಬಿದ ಕೊಡಗಳನ್ನು ಹೊತ್ತುಕೊಂಡು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಪಟ್ಟಣದ ಅನೇಕ ಓಣಿಯಲ್ಲಿ ಮಹಿಳೆಯರು ಮಳೆಗಾಗಿ ಬುಟ್ಟಿ ಜಾತ್ರೆ ನಡೆಸಿದರು ಮತ್ತು ಗಂಗೆಯನ್ನು ಪೂಜಿಸಿದರು. ಸದ್ಯ ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ರೈತರು ದೇವರ ಮೊರೆ ಹೋಗುವಂತಾಗಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಬಹುತೇಕ ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು. ಅಲ್ಲದೇ ಮುಂಗಾರು ಬೆಳೆಯಲ್ಲಿ ಹುಲ್ಲು ಕೀಳುವ ಕೆಲಸ ಭರದಿಂದ ನಡೆದಿದ್ದರೂ ಇಗ ಮಾತ್ರ ಎಲ್ಲವೂ ನಿಂತು ಹೋಗಿದೆ.