ಏಕರೂಪ ಶಿಕ್ಷಣ ನೀತಿ ಜಾರಿ ಅಗತ್ಯ
ಯಾದಗಿರಿ: ರಾಷ್ಟ್ರೀಯ ಏಕರೂಪ ಶಿಕ್ಷಣ ನೀತಿ ಜಾರಿಗೊಳ್ಳುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ನಗರದಲ್ಲಿ ಶನಿವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಭಾಷಾ ಪತ್ರಿಕೋದ್ಯಮ ಕುರಿತ ಕಾರ್ಯಾಗಾರ ಉದ್ಘಾಟಿಸಿ, 1- 4ವರೆಗೆ ಶಿಕ್ಷಣ ಮಾತೃಭಾಷೆಯಲ್ಲಿ ಕಲಿಸುವಂತಾಗಬೇಕು. ಶಿಕ್ಷಣ, ಆಡಳಿತ, ಉದ್ಯೋಗ, ನ್ಯಾಯಾಲಯಗಳಲ್ಲಿ ಕನ್ನಡ ಸಂಪೂರ್ಣ ಅನುಷ್ಠಾನಗೊಳ್ಳುವಂತಾಗಬೇಕೆಂದು ಹೇಳಿದರು.
ಆಡಳಿತದಲ್ಲಿ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳುವ ಜೊತೆಗೆ ಕಡ್ಡಾಯವಾಗಿ ಕನ್ನಡ ಭಾಷೆ ಪ್ರಮುಖ ವಿಷಯವಾಗಿ ಅಳವಡಿಸಿಕೊಳ್ಳಬೇಕು. ಡಾ. ಸರೋಜಿನಿ ಮಹಿಷಿ ವರದಿ ಅನ್ವಯ ಸ್ಥಳಿಯ ಕನ್ನಡಿಗರಿಗೆ ಉದ್ಯೋಗದಲ್ಲಿ ಅವಕಾಶ ದೊರೆಯುವಂತಾಗಬೇಕೆಂದು ಅವರು ಹೇಳಿದರು.
ಏಕತೆ: ಭಾರತಿಯ ಸಂಸ್ಕೃತಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ವೈವಿಧ್ಯಮಯ ಪ್ರಾದೇಶಿಕ ಮತ್ತು ಮಾತೃಭಾಷೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿದೆ. ಸರಳ, ಸುಲಲಿತ ಕನ್ನಡ ಭಾಷೆಯನ್ನು ಬಳಸಬೇಕು. ವಿಶೇಷವಾಗಿ ಯುವಜನಾಂಗ ಕನ್ನಡ ಭಾಷೆಯಲ್ಲಿ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಕಮ್ಮಟ: ಪತ್ರಿಕೆ, ದೃಶ್ಯಮಾಧ್ಯಮ, ಶ್ರವ್ಯ ಮಾಧ್ಯಮಗಳು ಕನ್ನಡ ಭಾಷೆ ಬಗ್ಗೆ ಸೂಕ್ತ ಜಾಗೃತಿ ಮೂಡಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಹ ಕನ್ನಡ ಭವನಗಳ ನಿರ್ಮಾಣಕ್ಕೆ, ಕಾವ್ಯ ಕಮ್ಮಟ ಹಮ್ಮಿಕೊಳ್ಳಲು ಅನುದಾನ ಒದಗಿಸುತ್ತಿದೆ.
ಕನ್ನಡ ನುಡಿ ತೇರು ಜಾಥಾಗಳನ್ನು ಹಮ್ಮಿಕೊಳ್ಳುತ್ತಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ನಲ್ಲಿ ಕನ್ನಡ ಭವನ ನಿರ್ಮಿಸಲು ಸೂಕ್ತ ಜಾಗ ಗುರುತಿಸಿದ್ದಲ್ಲಿ, ಅವಶ್ಯಕ ಅನುದಾನ ಬಿಡುಗಡೆ ಮಾಡಲಾಗುವದು. ಅದರಂತೆ ಯಾದಗಿರಿಯಲ್ಲಿನ ಕನ್ನಡ ಭವನವನ್ನು ತಕ್ಷಣ ನಿರ್ಮಿಸುವಂತೆ ಹೇಳಿದರು.
ಜಿಲ್ಲಾಧಿಕಾರಿ ಎಫ್.ಆರ್. ಜಾಮಾದಾರ್ ಅವರು ಯಾದಗಿರಿ ನಗರದಲ್ಲಿ ಕನ್ನಡ ಭವನ ನಿರ್ಮಾನಕ್ಕೆ ಅವಶ್ಯಕ ಅನುದಾನ ಬಿಡುಗಡೆ ಮಾಡಲಾಗಿದ್ದು, ಆದ್ಯತೆ ಮೇಲೆ ಇದನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಕಾನಿಪಸಂ ಅಧ್ಯಕ್ಷ ಗಂಗಾಧರ ಮೊದಲಿಯಾರ್, ನವದೆಹಲಿ ಐಎಫ್ಡಬ್ಲೂಜೆ ರಾಷ್ಟ್ರೀಯ ಉಪಾಧ್ಯಕ್ಷ ಮಲ್ಲಿಕಾರ್ಜನ್, ಮಾಧ್ಯಮ ಆಕಾಡೆಮಿ ಸದಸ್ಯ ಚನ್ನಬಸವಣ್ಣ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್.ಜಿ. ರವಿರಾಜ್, ಕನ್ನಡ ಹೋರಾಟಗಾರ ಶರಣು ಗದ್ದುಗೆ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಜೀವ್ ರಾವ್ ಕುಲಕರ್ಣಿ ಅಧ್ಯಕ್ಷತ ವಹಿಸಿದ್ದರು. ವರದಿಗಾರರಾದ ಲಕ್ಷ್ಮೀಕಾಂತ ಪ್ರಾರ್ಥಿಸಿದರು. ಪಾಂಡುರಂಗ ಕುಲಕರ್ಣೀ ನಿರ್ವಹಿಸಿದರು.