ನಗರದಲ್ಲಿ ಯುವಕನ ಕೊಲೆ
ಗುಲ್ಬರ್ಗ: ನಗರದ ಚೌಕ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸುಪರ್ ಮಾರ್ಕೆಟ್ ಪ್ರದೇಶದಲ್ಲಿ ಶುಕ್ರವಾರ ಯುವಕನೋರ್ವನ ಕೊಲೆ ನಡೆದಿದೆ. ಕೊಲೆಗೀಡಾದ ಯುವಕನನ್ನು ಹಣಮಂತ ಶ್ರೀಚಂದ ಎಂದು ಗುರುತಿಸಲಾಗಿದೆ. ಕೊಲೆಯಾದ ಹಣಮಂತ ತನ್ನ ಸ್ನೇಹಿತ ಶೇಖರ ನಾಯಕ ತಾಜಸುಲ್ತಾನಪುರ ಜೊತೆಗೂಡಿಕೊಂಡು ಜೇವರ್ಗಿ ರಸ್ತೆಯಲ್ಲಿನ ನಮೋ ರ್ಯಾಲಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಬೈಕ್ ಸವಾರರಾಗಿ ಗೆಳೆಯರಿಬ್ಬರೂ ಹೊರಟಿದ್ದಾಗ ಸಂಗಮ ಸತ್ಯಾ, ಸ್ಮಾರ್ಟ್ ನಾಗಾ, ಸಚಿನ್ ಮೆಹತರ್, ಸಂದೀಪ ಸೇರಿದಂತೆ 12 ಜನ ಸಂಗಡಿಗರು ಸೇರಿಕೊಂಡು ಬೈಕ್ಗೆ ಅಡ್ಡಗಟ್ಟಿ, ಬಟ್ಟೆ ಬಿಚ್ಚಿಸಿ, ಕಟ್ಟಿಗೆ, ರಾಡ್ಗಳಿಂದ ಹೊಡೆದಿದ್ದಾರೆ. ಹೊಡೆತ ತಾಳದೆ ಹಣಮಂತ ಎಚ್ಚರತಪ್ಪಿದಾಗ ಹೊರದಬ್ಬಿದ್ದಾರೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹಣಮಂತ ಸಾವನ್ನಪ್ಪಿರುವ ಬಗ್ಗೆ ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಚೌಕ್ ಠಾಣೆಯಲ್ಲಿ ಕೊಲೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ರಸ್ತೆತಡೆ: ಗುಲ್ಬರ್ಗದಲ್ಲಿ ನಡೆದ ಹಣಮಂತ ಶ್ರೀಚಂದ ಇವರ ಕೊಲೆಗೈದಿರುವ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ತಾಜ ಸುಲ್ತಾನಪುರಗೆ ಸಂಪರ್ಕ ರಲ್ಪಿಸುವ ರಿಂಗ್ ರೋಡ್ನಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶನಿವಾರ ಧರಣಿ ನಡೆಸಿದರು.
ಗುಲ್ಬರ್ಗದಲ್ಲಿ ಕಬ್ಬು ರೈತರ ಧರಣಿ
ಗುಲ್ಬರ್ಗ: ಸರ್ಕಾರ ನಿಗದಿಪಡಿಸಿದಂತೆ ಕ್ವಿಂಟಾಲ್ ಕಬ್ಬಿಗೆ ರು. 2,500 ರುಪಾಯಿ ಇದ್ದರೂ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳು ಕೇವಲ ರು. 1, 800 ಮಾತ್ರ ಪಾವತಿಸುತ್ತಿವೆ. ಇನ್ನೂ ರು. 700 ಹಾಗೇ ಬಾಕಿ ಉಳಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಕಬ್ಬು ಬೆಳೆಗಾರರು ನಗರದಲ್ಲಿ ರಸ್ತೆತಡೆ ನಡೆಸಿ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಿದರು. ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಕರೆಯ ಮೇರೆಗೆ ಗುಲ್ಬರ್ಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಜಗದೀಶ ರಾಜಾಪೂರ ನೇತೃತ್ವದಲ್ಲಿ ಸೇರಿದ್ದ ರೈತರು ರಸ್ತೆತಡೆಯಲ್ಲಿ ಭಾಗವಹಿಸಿದ್ದರು.
ಗುಣಾತ್ಮಕ ಆಡಳಿತ ತರಬೇತಿ
ಗುಲ್ಬರ್ಗ ವಿಭಾಗದ ಸರ್ಕಾರಿ ಪ್ರೌಢಶಾಲೆಗಳ ಹಾಗೂ ತತ್ಸಮಾನ ವೃದಂದ ಅಧಿಕಾರಿಗಳ ಸಂಘದ ಆಸರೆಯಲ್ಲಿ ನಡೆದ ಪ್ರೌಢಶಾಲೆ ಮುಖ್ಯಗುರುಗಳಿಗೆ ಹಣಕಾಸು ನಿರ್ವಹಣೆ, ಗುಣಾತ್ಮಕ ಆಡಳಿತ ತರಬೇತಿ, ನವೀನ ಶಾಲಾ ಸಂಕೀರ್ಣದ ತಂತ್ರಗಾರಿಕೆ ವಿಚಾರಗಳ ಶೈಕ್ಷಣಿಕ ಕಾರ್ಯಾಗಾರದ ಉದ್ಘಾಟನೆ ಸಮಾರಂಭದಲ್ಲಿ ಶಿಕ್ಷಣಾಯುಕ್ತಾಲಯದ ಆಯುಕ್ತ ರಾಧಾಕೃಷ್ಣ ಮದನಕರ್, ಎಂಎಲ್ಸಿ ಶಶಿಲ್ ನಮೋಶಿ, ಡಿಡಿಪಿಐ ಪರಮೇಶ್ವರ್ ಇದ್ದರು.
ಶುಲ್ಕ ವಿನಾಯ್ತಿ ನಿರ್ಬಂಧ ಸಡಿಲಿಸಿ; ಎಐಡಿಎಸ್ಒ
ಗುಲ್ಬರ್ಗ: ಬಿಸಿಎಂ ವಿದ್ಯಾರ್ಥಿಗಳ ಶುಲ್ಕ ವಿನಾಯ್ತಿಯಲ್ಲಿ ಸರ್ಕಾರ ಹೇರಿರುವ ನಿರ್ಬಂಧಗಳನ್ನು ಸಡಿಲಿಸಬೇಕು ಎಂದು ಆಗ್ರಹಿಸಿ ಗುಲ್ಬರ್ಗ ನಗರದಲ್ಲಿ ಎಐಡಿಎಸ್ಓ ಸಂಘಟನೆಯಿಂದ ಶನಿವಾರ ಪ್ರತಿಭಟನೆ ನಡೆಸಲಾಯ್ತು. ಹೋರಾಟಗಾರರು ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ನಿಬಂಧನೆಗಳನ್ನು ಸಡಿಲಗೊಳಿಸಬೇಕು ಹಾಗೂ ನೇರ ನಗದು ವರ್ಗಾವಣೆ ಕ್ರಮ ಕೈಬಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
ದೈಹಿಕ ಶಿಕ್ಷಣ ವಿಚಾರಗೋಷ್ಠಿ
ಗುಲ್ಬರ್ಗದಲ್ಲಿ ಶನಿವಾರ ರಂಗ ಮಂದಿರದಲ್ಲಿ ಸಾಶಿಇ, ಹೈಕಶಿ ಸಂಸ್ಥೆ ಹಾಗೂ ಹೈ- ಕ ಕ್ರೀಡಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ದೈಹಿಕ ಶಿಕ್ಷಣ ವಿಚಾರಗೋಷ್ಠಿ ನಡೆಯಿತು. ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಮಾಜಿ ಎಂಎಲ್ಸಿ ಶಶಿಲ್ ನಮೋಶಿ, ಶಿಕ್ಷಣಾಯುಕ್ತಾಲಯದ ರಾಧಾಕೃಷ್ಣ ಮದನಕರ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಈಚನೂರು ವಿರುಪಾಕ್ಷಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಶುದ್ಧ ಸಂಕಲ್ಪಗಳಿಂದ ಜೀವನ ಸುಂದರ: ಜಯಂತಿ
ಗುಲ್ಬರ್ಗ: ಭಾರತವಷ್ಟೇ ಅಲ್ಲ, ಇಡೀ ವಿಶ್ವದಲ್ಲಿ ಮನುಷ್ಯನ ಜೀವನ ಪದ್ಧತಿ ಬಾಹ್ಯ ಪರಿಸರದ ಆಗು ಹೋಗುಗಳ ಪ್ರಭಾವಕ್ಕೆ ಒಳಪಡುತ್ತಿದ್ದು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾನೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಐರೋಪ್ಯ ರಾಷ್ಟ್ರಗಳ ಸಂಚಾಲಕಿ ಸೋದರಿ ಬಿ.ಕೆ. ಜಯಂತಿ ಅಭಿಪ್ರಾಯಪಟ್ಟರು. ಆದರ್ಶನಗರ ಸತ್ಯತೀರ್ಥ ಸಭಾಂಗಣದಲ್ಲಿ ನಡೆದ ಮಾಧ್ಯಮದೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು. ಮಾಧ್ಯಮ ಪ್ರತಿನಿಧಿಗಳ ಮೇಲೆ ಇಂದಿನ ವಿದ್ಯಮಾನದಲ್ಲಿ ಹೊಣೆಗಾರಿಕೆ ಹಾಗೂ ಕಾರ್ಯ ಒತ್ತಡ ಹೆಚ್ಚುತ್ತಿದೆ. ಸಮಾಜದ ಅಂಕು- ಡೊಂಕುಗಳನ್ನು ತಿದ್ದುವಲ್ಲಿ ಮಾಧ್ಯಮ ಯಾವತ್ತೂ ಮಹತ್ತರ ಪಾತ್ರವಹಿಸಿದೆ. ಅವರು ಒಂದು ದೇಶದ ಭವಿಷ್ಯ ರೂಪಿಸಬಲ್ಲರು. ಆದ ಕಾರಣ ಅವರಿಗೆ ಆಧ್ಯಾತ್ಮಿಕ ಜ್ಞಾನ ಹಾಗೂ ರಾಜಯೋಗ ಸಾಧನೆ ಉಪಯುಕ್ತ ಆಗಬಲ್ಲದು ಎಂದು ತಿಳಿಸಿದರು. ಪತ್ರಕರ್ತೆ ರೋಸಿ ಮೇರಿ ಅವರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು. ರಾಜಯೋಗಿನಿ ಬಿ.ಕೆ. ವಿಜಯಾ ಸಂವಾದ ನಡೆಸಿಕೊಟ್ಟರು. ಬಿ.ಕೆ. ರಾಗಿಣಿ ಉಪಸ್ಥಿತರಿದ್ದರು.
ಐನೋಳಿ ಜಿಪಂ: 5 ಕೋಟಿ ಕಾಮಗಾರಿಗಳಿಗೆ ಚಾಲನೆ
ಚಿಂಚೋಳಿ:ತಾಲೂಕಿನ ಐನೋಳಿ ಜಿಲ್ಲಾ ಪಂಚಾಯತ ಮತಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್ ವಿವಿಧ ಯೋಜನೆ ಅಡಿಯಲ್ಲಿ ಮಂಜೂರಿಗೊಂಡಿರುವ 5 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಶನಿವಾರ ಸಂಸದ, ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ನೆರವೇರಿಸಿದರು. ರಾಷ್ಟ್ರೀಯ ಗ್ರಾಮೀಣ ನೀರು ಸರಬರಾಜು ಯೋಜನೆ, ಜಿಪಂ ಅಭಿವೃದ್ಧಿ ಅನುದಾನ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಬೀದರ ಲೋಕಸಭಾ ಸದಸ್ಯರ ಅನುದಾನಗಳ ಅಡಿಯಲ್ಲಿ ಪೂರ್ಣಗೊಂಡಿರುವ ಹಾಗೂ ಪ್ರಗತಿಯಲ್ಲಿರುವ ಮತ್ತು ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ 5 ಕೋಟಿ ಮೊತ್ತದ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು. ಶಾಸಕ ಡಾ. ಉಮೇಶ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಸಚಿವ ಬಾಬುರಾವ ಚಿಂಚನಸೂರ, ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮುಂತಾದವರು ಭಾಗವಹಿಸಿದ್ದರು.
ಮಾನಸಿಕ ನೆಮ್ಮದಿ ಅಗತ್ಯ: ರಂಭಾಪುರಿ ಶ್ರೀ
ಗುಲ್ಬರ್ಗ: ಹಿಂದೆಂದೂ ಕಾಣದ ಒತ್ತಡಗಳು ಮನುಷ್ಯನ ಮೇಲಿವೆ. ಮಾನಸಿಕ ಶಾಂತಿ ನೆಮ್ಮದಿ ಇಲ್ಲದಂತಾಗಿದೆ. ದೇವರು ಧರ್ಮದಲ್ಲಿ ನಂಬಿಕೆ ವಿಶ್ವಾಸಗಳು ಮೂಡಿ ಬರಬೇಕಾಗಿದೆ. ಈ ನಿಟ್ಟಿನಲ್ಲಿ ದೇವಾಲಯಗಳ ಪಾತ್ರ ಮುಖ್ಯವಾಗಿದೆ ಎಂದು ಬಾಳೆಹೊನ್ನೂರ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಅಭಿಪ್ರಾಯಪಟ್ಟರು. ಅವರು ಚಿತ್ತಪುರ ತಾಲೂಕಿನ ಕೊಲ್ಲೂರ ಮಲ್ಲಿಕಾರ್ಜುನ ದೇವಾಲಯದ ಲಿಂಗ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿಮಿತ್ತ ಆಯೋಜಿಸಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಾಹ್ಯ ಸೌಂದರ್ಯ ನಾಗರಿಕತೆಯಂತೆ ಆಂತರಿಕ ಸೌಂದರ್ಯ ಸಂಸ್ಕೃತಿ ಇದ್ದ ಹಾಗೆ. ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ಆದರೆ ಬದುಕು ಮಾತ್ರ ನಮ್ಮ ಕೈಯಲ್ಲಿದೆ. ಆದ್ದರಿಂದ ಆದರ್ಶ ವ್ಯಕ್ತಿಗಳಾಗಿ ಧರ್ಮ ಸಂಸ್ಕೃತಿ ಸಂವರ್ಧಿಸುವ ಮಹಾತ್ಕಾರ್ಯ ಆಗಬೇಕಾಗಿದೆ ಎಂದರು. ನಾಲವಾರ ಕೋರಿ ಸಿದ್ದೇಶ್ವರ ಮಠದ ಡಾ. ಸಿದ್ದತೋಟೇಂದ್ರ ಶಿವಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶಕಾಪುರ ತಪೋವನಮಠದ ಸಿದ್ದರಾಮ ಶಿವಾಚಾರ್ಯ ಸ್ವಾಮಿ ಉಪದೇಶ ನೀಡಿದರು. ಕಡಕೋಳ, ಜೋಗೂರ, ಶ್ರೀನಿವಾಸ ಸರಡಗಿ, ಹೊನ್ನಕಿರಣಗಿ ಮಠಗಳ ಶ್ರೀಗಳು ಇದ್ದರು.
ಉನ್ನತ ಶಿಕ್ಷಣಕ್ಕಾಗಿ
ಪ್ರೋತ್ಸಾಹ ಧನ
ಚಿಂಚೋಳಿ: ಸ್ಥಳೀಯ ಪಟ್ಟಣ ಪಂಚಾಯಿತಿ ವತಿಯಿಂದ ಉನ್ನತ ಶಿಕ್ಷಣಕ್ಕಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಶಾಮರಾವ ಕೊರವಿ ಹೇಳಿದರು. ಪಟ್ಟಣದ ಚಂದಾಪುರ ನಗರದಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕರ ಪ್ರೌಢಶಾಲಾ ವಿಭಾಗದ ಶಾಲಾ ವಾರ್ಷಿಕೋತ್ಸವ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಅಬ್ದುಲ್ ಬಾಸೀತ್, ಕಾಂಗ್ರೆಸ್ ಮುಖಂಡ ಕೆ.ಎಂ. ಬಾರಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ಪಾಟೀಲ್, ಅರ್ಜುನರಾವ ದೊಡ್ಡಮನಿ ಮಾತನಾಡಿದರು. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡುವ ಪ್ರೋತ್ಸಾಹಧನ ಚೆಕ್ ವಿತರಿಸಲಾಯಿತು. ಪಪಂ ಅಧ್ಯಕ್ಷ ಇಂದುಮತಿ ಶಿವನಾಗಯ್ಯ ಸ್ವಾಮಿ, ನರಸಮ್ಮ ವಿಜಯಕುಮಾರ ಗಂಗನಪಳ್ಳಿ, ಶ್ರೀನಿವಾಸ ನಾಯನೋರ, ಡಾ. ಶಿವರಾಜ ಕುಲಕುರ್ಣಿ ಇತರರು ಭಾಗವಹಿಸಿದ್ದರು. ಉಪ ಪ್ರಾಂಶುಪಾಲ ತುಳಸೀರಾವ ಬೇಂದ್ರೆ ಅಧ್ಯಕ್ಷತೆ ವಹಿಸಿದ್ದರು.
ಜಡೆ ಶಾಂತಲಿಂಗೇಶ್ವರರ ಸ್ಮಾರಕೋತ್ಸವ
ಅಫಜಲ್ಪುರ: ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ನಡೆದ ಜಡೆಯ ಶಾಂತಲಿಂಗೇಶ್ವರ ಸ್ವಾಮಿಗಳ 5ನೇ ಸ್ಮಾರಕೋತ್ಸವದ ಮಹಾಮಂಗಲ ಕಾರ್ಯಕ್ರಮದಲ್ಲಿ ಬಳೂರ್ಗಿಯ ಶಂಭುಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಜಡೆ ಶಾಂತಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೂಡಿಯ ಸದಾಶಿವ ಸ್ವಾಮೀಜಿ, ಜಡೆ ಘನಬಸವ ಅಮರೇಶ್ವರ ಶಿವಾಚಾರ್ಯ ಪ್ರವಚನಕಾರರು ಹಾಗೂ ಸಂಗೀತ ಕಲಾವಿದರು ಉಪಸ್ಥಿತರಿದ್ದರು.
ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ
ಚಿಂಚೋಳಿ: ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಡ್ತಿ ಹೊಂದಿದ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾಳಗಿ ತಿಳಿಸಿದ್ದಾರೆ. ತಾಲೂಕಿನ ಸುಲೇಪೇಟ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಮಾರುತಿ ಯಂಗನೂರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಶಿವಲಿಂಗಯ್ಯ ಗುಡಿ- ಗೌರವಾಧ್ಯಕ್ಷ, ಮಲ್ಲಿಕಾರ್ಜುನ ಮಾಳಗೆ- ಅಧ್ಯಕ್ಷ, ಎಂ.ಡಿ. ಇದ್ರಿಸ್ ದೇಗಲಮಡಿ- ಉಪಾಧ್ಯಕ್ಷ, ವೈಜನಾಥ ಗಾದಗೀಕರ ನಾಗಾಇದಲಾಯಿ- ಕಾರ್ಯದರ್ಶಿ, ಸುನಂದಾ ಪಾಟೀಲ್- ಸಹ ಕಾರ್ಯದರ್ಶಿ, ನರಸಪ್ಪ- ಖಜಾಂಚಿ, ನರಸಪ್ಪ- ಸಂಘಟನಾ ಕಾರ್ಯದರ್ಶಿ ಮುಂತಾದವರು ಆಯ್ಕೆಗೊಂಡಿದ್ದಾರೆ. ಅನೀಲಕುಮಾರ ಸ.ಶಿ, ಚಿಮ್ಮನಚೋಡ ಸ್ವಾಗತಿಸಿದರು. ಪ್ರಹ್ಲಾದರಾವ್ ವಂದಿಸಿದರು. ಮಹ್ಮದ್ ಯೂಸೂಫ್ ಹಾಗೂ ನಾರಾಯಣರೆಡ್ಡಿ ಉಪಸ್ಥಿತರಿದ್ದರು.
ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ; ಜೈಕರವೇ ಪ್ರತಿಭಟನೆ
ಗುಲ್ಬರ್ಗ: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿರುವ ಯನ್ನು ಸರಿಪಡಿಸುವಂತೆ ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾ ಆಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಿಲ್ಲದಿರುವುದರಿಂದ ಬೇರೆ ಊರಿನಿಂದ ಬರುವ ರೋಗಿಗಳು ಪರದಾಡುವಂತಾಗಿದೆ. ಯಾವುದೇ ರೋಗಿಗಳಿಗೆ ತುರ್ತು ಚಿಕಿತ್ಸೆಯನ್ನು ಸಹ ನೀಡದೆ ಸರ್ಕಾರಿ ಆಸ್ಪತ್ರೆಯಲ್ಲಿ ದಿನಗಟ್ಟಲೆ ಅಲ್ಲಿಯೇ ನರಳುವಂತಾಗುತ್ತಿದೆ. ಸರ್ಕಾರ ಕೋಟ್ಯಂತರ ರುಪಾಯಿ ಸರ್ಕಾರಿ ಆಸ್ಪತ್ರೆಗೆ ಖರ್ಚು ಮಾಡುತ್ತಿದ್ದರೂ ರೋಗಿಗಳಿಗೆ ಯಾವುದೇ ರೀತಿಯ ಔಷಧಿಗಳು ಸಿಗುತ್ತಿಲ್ಲ. ಔಷಧಿಗಳು ಸಿಗುತ್ತಿಲ್ಲವೆಂದು ಕೇಳಿದರೆ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಎಂದು ಬೇಜವಾಬ್ದಾರಿತನದ ಹೇಳಿಕೆ ನಿಡುತ್ತಾರೆಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಕೂಡಲೇ ಆರೋಗ್ಯ ಸಚಿವರು ಎಚ್ಚೆತ್ತು 15 ದಿನಗಳಲ್ಲಿ ಈ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸಚಿವರು ಆಸ್ಪತ್ರೆಗೆ ಭೇಟಿ ನೀಡದೆ ವಿಳಂಬ ನೀತಿ ಅನುಸರಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಉಪಾಧ್ಯಕ್ಷ ಮಂಜುನಾಥ ಹಾಗರಗಿ ಎಚ್ಚರಿಸಿದ್ದಾರೆ.
ಅಂಗನವಾಡಿ ಹುದ್ದೆಗೆ ಅರ್ಜಿ
ಗುಲ್ಬರ್ಗ: ಶಿಶು ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಳಂದ ತಾಲೂಕಿನ 6 ಅಂಗನವಾಡಿ ಕಾರ್ಯಕರ್ತೆಯರ ಮತ್ತು 30 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿಯಿವೆ. ಸ್ಥಳೀಯರಾದ 18- 44 ವಯೋವಾನದ ಅರ್ಹ ಮಹಿಳಾ ಅಭ್ಯರ್ಥಿಗಳು ಮಾ.25 ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಬಂಗಡಿಪೀರ ಕಾಲೋನಿ ಆಳಂದದಲ್ಲಿ ಅರ್ಜಿ ಸಲ್ಲಿಸಬೇಕು. ಆಳಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪಕಿಸಬಹುದು. ಸೇಡಂ ತಾಲೂಕಿನಲ್ಲಿ ಖಾಲಿಯಿರುವ 9 ಅಂಗನವಾಡಿ ಕಾರ್ಯಕರ್ತೆ, 19 ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಕರೆದಿದ್ದು, ಅರ್ಜಿ ಸಲ್ಲಿಸಲು ಮಾ.23 ಕೊನೆಯ ದಿನ. ಗುಲ್ಬರ್ಗ ಗ್ರಾಮೀಣದಲ್ಲಿ ಖಾಲಿಯಿರುವ 1 ಅಂಗನವಾಡಿ ಕಾರ್ಯಕರ್ತೆ ಹಾಗೂ 20 ಅಂಗನವಾಡಿ ಸಹಾಯಕಿಯರ ಹುದ್ದೆಗಲು ಖಾಲಿಯಿದ್ದು, ಅರ್ಜಿ ಸಲ್ಲಿಸಲು ಮಾ.25 ಕೊನೆಯ ದಿನ. ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಗುಲ್ಬರ್ಗ ಗ್ರಾಮೀಣ, ಪಿಡಿಎ ಎಂಜಿನಿಯರಿಂಗ್ ಕಾಲೇಜು ರಸ್ತೆ, ಮನಿಷಾ ಬೇಕರಿ ಹತ್ತಿರವಿರುವ ಕಚೇರಿಯಲ್ಲಿ ಸಲ್ಲಿಸಬೇಕು. ದೂ. 08472-278654ಕ್ಕೆ ಸಂಪರ್ಕಿಸಬಹುದು.
ವಾರ್ಷಿಕ ಸ್ಮೇಹ ಸಮ್ಮೇಳನ
ಆಳಂದ ತಾಲೂಕು ಮಟಕಿ ಗ್ರಾಮದ ಬಸವೇಶ್ವರ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ಮೇಹ ಸಮ್ಮೇಳನದಲ್ಲಿ ಉಸ್ತುರಿ ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮಿ ಆಶೀರ್ವಚನ ನೀಡಿದರು. ಅಶೋಕ ಸಾವಳೇಶ್ವರ, ಗ್ರಾಪಂ ಅಧ್ಯಕ್ಷೆ ಚತುರಾಬಾಯಿ ವಾಡಿ, ತಾಪಂ ಸದಸ್ಯೆ ಸೋಜರಬಾಯಿ ಪಾಟೀಲ ಇದ್ದಾರೆ.
ಗಣಿತ ಸ್ಪರ್ಧೆಯಲ್ಲಿ ಚಿನ್ನದ ಪದಕ
ಆಳಂದ: ಕರ್ನಾಟಕ ಅಕಾಡೆಮಿ ಆಫ್ ಮ್ಯಾಥಮೆಟಿಕ್ಸ್ ಚಳ್ಳಕೆರೆ ಅವರು ನಡೆಸುವ ಗಣಿತದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಟ್ಟಣದ ಅಪೆಕ್ಸ್ ಪಬ್ಲಿಕ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದಾರೆ. 3ನೇ ತರಗತಿಯ ಅತುಫಾ ಅಲಮಾಸ್ ನಸೀರ್ ಅಹ್ಮದ್ ಮತ್ತು ಯುಕೆಜಿ ವಿದ್ಯಾರ್ಥಿ ಹಾಶಿರ್ ಉರ್-ರಮೇಮಾನ್ ನಸರ್ ಅಹ್ಮದ್ ಪ್ರಥಮ ಸ್ಥಾನ ಗಳಿಸಿ, ಚಿನ್ನದ ಪದಕ ಪಡೆದಿದ್ದಲ್ಲದೆ ಇದೇ ವಿದ್ಯಾರ್ಥಿಗಳು ಚಿಂತನ ಇಂಗ್ಲೀಷ್ ಪರೀಕ್ಷೆಯಲ್ಲಿ ಕೂಡ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕಾರ್ಯಕರ್ತರ ಆಯ್ಕೆಗೆ ಅರ್ಜಿ ಆಹ್ವಾನ
ಗುಲ್ಬರ್ಗ: ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಯುವಕ- ಯುವತಿಯರನ್ನು ರಚನಾತ್ಮಕ ಕಾರ್ಯದಲ್ಲಿ ತೊಡಗಿಸಲು 2014- 15ನೇ ಸಾಲಿಗೆ ರಾಷ್ಟ್ರೀಯ ಸ್ವಯಂ ಸೇವಾ ಕಾರ್ಯಕರ್ತರಾಗಿ ನೆಹರು ಯುವ ಕೇಂದ್ರ ಗುಲ್ಬರ್ಗದಲ್ಲಿ ನಿಯೋಜನೆಗೆ ಅರ್ಜಿ ಕರೆಯಲಾಗಿದೆ. ಅಭ್ಯರ್ಥಿಗಳು 2014ರ ಮಾ.10ಕ್ಕೆ 18- 25 ವಯೋವಾನ, ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ಗಣಕ ಯಂತ್ರದ ಜ್ಞಾನವಿರಬೇಕು. ಆಯಾ ತಾಲೂಕಿನ ಕಾಯಂ ವಾಸಸ್ಥಳದ ಬಗ್ಗೆ ಪ್ರಮಾಣಪತ್ರ ಒದಗಿಸಬೇಕು. ಪ್ರತಿ ತಿಂಗಳಿಗೆ 2 ಸಂಘಗಳನ್ನು ನೆಹರು ಯುವ ಕೇಂದ್ರದಲ್ಲಿ ಸಂಯೋಜನೆಗೊಳಿಸಬೇಕು. ಪ್ರತಿ ತಿಂಗಳು 2 ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಕೈಗೊಳ್ಳಬೇಕು. ಸಂಘಗಳು ಇಲ್ಲದೇ ಇರುವ ಹಳ್ಳಿಗಳಲ್ಲಿ ಸಂಘಗಳನ್ನು ರಚಿಸಬೇಕು. ಹಳ್ಳಿಗಳಲ್ಲಿ ರಾತ್ರಿ ವಾಸ್ತವ್ಯವಿರಲು ಸಿದ್ಧರಿರಬೇಕು. ಇತರೆ ಯಾವುದೇ ಜವಾಬ್ದಾರಿಗಳನ್ನು ವಹಿಸಿದ ಪಕ್ಷದಲ್ಲಿ ನಿರ್ವಹಿಸಲು ಸಿದ್ಧರಿರಬೇಕು. ತಿಂಗಳಿಗೆ 2,500 ವೇತನವಿದೆ. ಅರ್ಜಿ ನಮೂನೆಯನ್ನು ಕಚೇರಿಯಿಂದ ಪಡೆದು ಮಾ.10ರೊಳಗಾಗಿ ಸಲ್ಲಿಸಬೇಕು. ವಿವರಗಳಿಗೆ ಗುಲ್ಬರ್ಗ ನೆಹರು ಯುವ ಕೇಂದ್ರದ ಕಚೇರಿಯನ್ನು ಅಥವಾ ದೂ. 08472-248528ಕ್ಕೆ ಸಂಪರ್ಕಿಸಬೇಕು.